ಬೇಲೂರು:ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗೂರ್ಗಿಹಳ್ಳಿ ಗ್ರಾಮದಲ್ಲಿ ನಡೆದಿದ್ದು, ದೇಹದಲ್ಲಿ ಗಾಯದ ಗುರುತು ಕಂಡು ಬಂದಿರುವ ಹಿನ್ನಲೆಯಲ್ಲಿ ಗುಂಡು ಹಾರಿಸಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ತಾಲೂಕಿನ ಗೂರ್ಗಿಹಳ್ಳಿ ಗ್ರಾಮದ ಸಯ್ಯದ್ ಸತ್ತರ್ ಎಂಬುವವರ ತೋಟದ ಸಮೀಪ ಸುಮಾರು 15 ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿದ್ದು, ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಆನೆಯ ಮೈಮೇಲೆ ಗಾಯದ ಗುರುತು ಕಂಡು ಬಂದಿದೆ. ಗುರುವಾರ ರಾತ್ರಿ ಮೃತಪಟ್ಟಿರಬಹುದು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್ ತಿಳಿಸಿದ್ದಾರೆ.
ವೈದ್ಯರಾದ ಚಿಕ್ಕಮಗಳೂರಿನ ಶ್ರೇಯಸ್, ಗಂಗಾಧರ್ ಕಾಡಾನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ. ಕಾಡಾನೆ ಗುಂಡೇಟಿಗೆ ಬಲಿಯಾಗಿದೆಯಾ ಎಂಬುದರ ಬಗ್ಗೆ ಗೊತ್ತಾಗಬೇಕಿದೆ.
ಕಾಡಾನೆಗಳ ಹಾವಳಿ: ಸುಮಾರು ಮೂವತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಡಿನಿಂದ ನಾಡಿಗೆ ಬಂದು ತಾಲೂಕಿನ ಅರೇಹಳ್ಳಿ, ಮಲಸಾವರ ಸುತ್ತಮುತ್ತ ಬೀಡುಬಿಟ್ಟಿದ್ದಲ್ಲದೆ, ಈ ಭಾಗದ ತೋಟ ಮತ್ತು ಜಮೀನಿಗೆ ನುಗ್ಗಿ ಫಸಲನ್ನು ನಾಶ ಮಾಡಿದ್ದವು. ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಕಾಡಾನೆ ದಾಳಿಯಿಂದ ಇತ್ತೀಚೆಗೆ ಅರೇಹಳ್ಳಿ ಭಾಗದಲ್ಲಿ ಕಡೇಗರ್ಜೆ ಗ್ರಾಮದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಜನರು ರಸ್ತೆತಡೆ ಮೂಲಕ ಪ್ರತಿಭಟಿಸಿದರು ಮತ್ತು ಶಾಸಕರು ಕೂಡ ಕಾರ್ಮಿಕರು ಸಾವನ್ನಪ್ಪಿದ ದಿನವೇ ಈ ವಿಷಯವಾಗಿ ಸದನದಲ್ಲಿ ಪ್ರಸ್ತಾಪಿಸಿ ಶಾಶ್ವತ ಪರಿಸರ ಕಲ್ಪಿಸುವಂತೆ ಮನವಿ ಮಾಡಿದ್ದನ್ನು ಸ್ಮರಿಸಬಹುದು.
ಆದರೆ ಇಲ್ಲಿಯ ತನಕವೂ ಅರಣ್ಯ ಅಧಿಕಾರಿಗಳು ಮಾತ್ರ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ಕೆಲಸವನ್ನು ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.