ಹಾಸನ: ನಗರದ ಸಾಲಗಾಮೆ ರಸ್ತೆ, ಡಬಲ್ ಟ್ಯಾಂಕ್ ಹತ್ತಿರ, ಬನ್ನಿ ಮಂಟಪದ ಹತ್ತಿರ ಇರುವ ಬೃಹತ್ ಮರವೊಂದರ ರಂಬೆ, ಕೊಂಬೆಗಳನ್ನೆಲ್ಲಾ ಕಡಿದು ಬುಡಕ್ಕೆ ಕೊಡಲಿ ಏಟು ಹಾಕುವಷ್ಟರಲ್ಲಿ ಪರಿಸರ ಪ್ರೇಮಿಗಳು ಬಂದು ಆಕ್ರೋಶ ವ್ಯಕ್ತಪಡಿಸಿದ ವೇಳೆ ಪರ-ವಿರೋಧದ ವಾಗ್ವಾದ ನಡೆದ ಘಟನೆ ಸಂಭವಿಸಿತು.
ಸುಮಾರು ೫೦ ವರ್ಷಗಳ ಕಾಲದ ಬೃಹತ್ ಮರವೊಂದು ಸಾರ್ವ ಜನಿಕರಿlಗೆ ಸಮಸ್ಯೆಯಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಅನುಮತಿ ಪಡೆದು ಮರ ಕಡಿಯಲು ಮುಂದಾಗಿದ್ದರು. ಈ ವೇಳೆ ಪರಿಸರ ಪ್ರೇಮಿಗಳಿಗೆ ವಿಚಾರ ತಿಳಿದು ಸ್ಥಳಕ್ಕೆ ಬಂದು ಮರ ಕಡಿಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಇಲ್ಲಿನ ಸುತ್ತಮುತ್ತಲ ಜನರು ವಿರೋಧವ್ಯಕ್ತಪಡಿಸಿದ ವೇಳೆ ಆರ್.ಪಿ. ವೆಂಕಟೇಶ್ ಮೂರ್ತಿ, ರಾಜೀವೇಗೌಡ ಹಾಗೂ ದಿನೇಶ್ ಇತರರು ಸೇರಿ ಎರಡು ಕಡೆಯಿಂದ ಪರ-ವಿರೋಧದ ವಾಗ್ವಾದ ನಡೆದು ಗದ್ಧಲವಾಯಿತು.
ನಮ್ಮೂರ ಸೇವೆ ಸಂಘದ ಸಂಚಾಲಕ ರಾಜೀವೇಗೌಡ ಅವರು ಮಾಧ್ಯಮದೊಂದಿಗೆ ಮಾತನಾಡಿ. ನಾವುಗಳು ಹಲವಾರು ತಿಂಗಳಿನಿಂದ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ೩೫ ಸಾವಿರಕ್ಕೂ ಹೆಚ್ಚು ಮರಗಳನು ನೆಟ್ಟು ಪೋಷಣೆ ಮಾಡಿದ್ದು, ಆದರೆ ಸಾಲಗಾಮೆ ರಸ್ತೆ, ಬನ್ನಿ ಮಂಟಪದ ಬಳಿ ಇರುವ ಸುಮಾರು ೫೦ ವರ್ಷ ಹಳೆಯದಾದ ಮರವನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ಕೊಡಲಾಗಿದೆ ಎಂದು ಕಡಿಯುತ್ತಿರುವ ಬಗ್ಗೆ ವಿಚಾರ ತಿಳಿದು ಸ್ಥಳಕ್ಕೆ ಬಂದು ಮರ ಕಡಿಯಬೇಡಿ ಎಂದು ತಡೆಯಲು ಬಂದಿದ್ದೇವೆ ಎಂದರು. ಇದೆ ರೀತಿ ಶ್ರೀ ಗಂಧ ಕೋಠಿ ಬಳಿ ಹಲವಾರು ಬೃಹತ್ ಮರವನ್ನು ಕಡಿಯಲಾಗಿತ್ತು.
ಹಾಸನ ನಗರ ಮತ್ತು ಸುತ್ತ ಮುತ್ತ ಇರುವ ಬಹುತೇಕ ಹಳೆಯ ಮರಗಳ ಮಾರಣ ಹೋಮ ಮಾಡಲಾಗುತ್ತಿರುವುದು ಬೇಸರದ ಸಂಗತಿ. ಮರ ಕಡಿಯುವ ಬಗ್ಗೆ ನಾವು ಹಗಲು ರಾತ್ರಿ ಕಾಯುವುದಕ್ಕೆ ಆಗುವುದಿಲ್ಲ. ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ಮರಗಳ ರಕ್ಷಣೆ ಮಾಡಲು ಮುಂದಾಗಬೇಕು ಎಂದು ಕೋರಿದರು. ಅರಣ್ಯ ಇಲಾಖೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಮರಗಳನ್ನು ಕಡಿಯಲು ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಮುಂದಾದರೂ ಇರುವ ಗಿಡ ಮರಗಳನ್ನು ಉಳಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಒಂದು ಸಮಿತಿ ರಚನೆ ಮಾಡಿ ಯಾವ ಗಿಡವನ್ನು ಕಡಿಯಬೇಕಾದರೇ ಸಮಿತಿಯ ಅನುಮತಿ ಪಡೆದು ಮುಂದಿನ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ಈ ಗಿಡ ಕಡಿದಿರುವುದಕ್ಕೆ ಸಾರ್ವಜನಿಕ ಹಿತಾಸಕ್ತಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು.
ದಿನೇಶ್ ಮಾತನಾಡಿ, ಇಲ್ಲಿ ಮರವನ್ನು ಅನಧಿಕೃತವಾಗಿ ಕಡಿಯುತ್ತಿಲ್ಲ. ಕಳೆದ ೫೦ ವರ್ಷಗಳಿಂದ ರಸ್ತೆ ಬದಿ ಮರ ಬೆಳೆದು ನಿಂತಿದ್ದು, ಬೃಹತ್ ಆ ಕಾರವಾಗಿ ಬೆಳೆದು ನಿಂತಿದ್ದರಿಂದ ಗಾಳಿ ಮಳೆಗೆ ರಂಬೆ, ಕೊಂಬೆಗಳು ಆಗಾಗ್ಗೆ ಕೆಳಗೆ ಬಿದ್ದು ಸಮಸ್ಯೆ ಆಗುತಿತ್ತು. ಮರ ಇರುವುದರಿಂದ ರಸ್ತೆ ಕೂಡ ಕಿರಿದಾಗಿದ್ದು, ಅರಣ್ಯ ಇಲಾಖೆಯವರು ನೋಡಿ ಜನರ ಅನುಕೂಲ ದೃಷ್ಠಿಯಲ್ಲಿ ಈ ಮರವನ್ನು ಕಡಿಯುತ್ತಿದ್ದಾರೆ ಎಂದರು. ನಾವೂ ಪರಿಸರ ಪ್ರೇಮಿಗಳೆ. ನಾವು ಕೂಡ ಗಿಡ ನೆಟ್ಟಿದ್ದೇವೆ. ಈ ನಿಟ್ಟಿನಲ್ಲಿ ಅನಿವಾರ್ಯ ಸಂದರ್ಭದಲ್ಲಿ ಮರಕಡಿಯಬೇಕು ಎಂದರು.