ಬೇಲೂರು: ಕೂಲಿ ಹಣ 3೦೦ ರೂಪಾಯಿಗಾಗಿ ಗಲಾಟೆ ನಡೆದು ಬಲಿಷ್ಠ ಜಾತಿಯ ವ್ಯಕ್ತಿಗಳು ದಲಿತ ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಲ್ಲಿಕಾರ್ಜುನಪುರ (ಹಗರೆ)ದಲ್ಲಿ ನಡೆದಿದೆ.
ಮಲ್ಲಿಕಾರ್ಜುನ ನಗರದ ಪರಿಶಿಷ್ಟ ಜಾತಿಯ ರಾಜು (೨೪) ಹಲ್ಲೆಗೆ ಒಳಗಾದ ಯುವಕ. ಮಲ್ಲಿಕಾರ್ಜುನಪುರ ಗ್ರಾಮ ಕುರುಬ ಸಮುದಾಯಕ್ಕೆ ಸೇರಿದ ಗಿರೀಶ್ ಮತ್ತು ಪರಮೇಶ್ ಹಲ್ಲೆಮಾಡಿದ ವ್ಯಕ್ತಿಗಳು ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂಥೆ ಹಲ್ಲೆಗೆ ಒಳಗಾದ ರಾಜು ಅವರ ಕಿರಿಯ ಸಹೋದರ ಚೇತನ್ ಸುದ್ದಿಗಾರರೊಂದಿಗೆ ಜೊತೆಗೆ ಮಾತನಾಡಿ, ರಾಜು ಮತ್ತು ಗಿರೀಶ್ ಒಟ್ಟಿಗೆ ಗಾರೆ ಕೆಲಸಕ್ಕೆ ಹೋಗುತ್ತಾರೆ. ಬುಧವಾರ ಸಂಜೆ ಕೆಲಸ ಮುಗಿಸಿ ಹಿಂತಿರುಗುವ ವೇಳೆ ನಮ್ಮ ಅಣ್ಣ ರಾಜು, ತನಗೆ ಕೊಡಬೇಕಾಗಿದ್ದ ೩೦೦ ರೂ. ಕೊಡುವಂತೆ ಕೇಳಿದ್ದಾನೆ. ೩೦೦ ರೂ. ಹಣ ಕೊಟ್ಟು ಮತ್ತೆ ವಾಪಸ್ ಕಸಿದುಕೊಂಡಿದ್ದಾರೆ. ಈ ವಿಷಯಕ್ಕೆ ಗಲಾಟೆ ಆರಂಭವಾಗಿದೆ. ಕೊನೆಗೆ ನಿಮ್ಮ ಹಣವೂ ಬೇಡ ನಿಮ್ಮ ಸಹವಾಸವೂ ಬೇಡ ಎಂದು ಮನೆಗೆ ಹೋಗಲು ಆಟೊ ಹತ್ತಲು ಹೋದಾಗ ಹಿಂದೆಯಿಂದ ಬಂದು, ನಮ್ಮ ಅಣ್ಣ ರಾಜು ತಲೆಗೆ ಬೀಯರ್ ಬಾಟಲಿಯಿಂದ ಹೊಡೆದಿದ್ದಾರೆ ಎಂದು ವಿವರಿಸಿದರು.
ಅಲ್ಲೇ ಇದ್ದ ನಮ್ಮೂರಿನ ವ್ಯಕ್ತಿಯೊಬ್ಬರು ರಾಜುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮನೆಗೆ ತಂದು ಬಿಟ್ಟರು. ಸಹಾಯ ಮಾಡಲು ಬಂದ ವ್ಯಕ್ತಿಗೂ ಬೆದರಿಕೆ ಹಾಕಿದ್ದಾರೆ. ಅಲ್ಲದೇ ನಮ್ಮ ಅಣ್ಣನಿಗೆ ಜಾತಿ ನಿಂದನೆ ಮಾಡಿ, ಅವರನ್ನು ಆಸ್ಪತ್ರೆಯಿಂದ ಬಂದರೂ ಬಿಡುವುದಿಲ್ಲ ಎಂದು ಗಿರೀಶ್ ಮತ್ತು ಪರಮೇಶ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ರಾಜು ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಬೇಲೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾ ಆಸ್ಪತ್ರೆಗೆ ಹೋಗುವಂತೆ ವ್ಯದ್ಯರು ಹೇಳಿದ್ದಾರೆ. ಗಲಾಟೆಯ ವೇಳೆ ಮೊಬೈಲ್ ಪರ್ಸ್ ಕಳೆದು ಹೋಗಿದೆ. ಆಧಾರ್ ಕಾರ್ಡ್ ಇಲ್ಲದೆ ಚಿಕಿತ್ಸೆ ಮುಂದುವರಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಹಳೇಬೀಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಬಗ್ಗೆ ಪಿಎಸ್‌ಐ ಮಾತನಾಡಿ ವಿಷಯ ಗಮನಕ್ಕೆ ಬಂದಿದ್ದು ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.