ಅರಸೀಕೆರೆ: ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್ ಕಡೆ ಮುಖ ಮಾಡಿರುವುದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿಯಾಗುವುದರಲ್ಲಿ ಸಂದೇಹವಿಲ್ಲ ಈಗಾಗಲೇ ನಮ್ಮ ನಾಯಕರು ಮೌಖಿಕವಾಗಿ ನನಗೆ ಆದೇಶ ಮಾಡಿದ್ದು ಕ್ಷೇತ್ರಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಬಾಣಾವರ ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಲಿಂಗೇಗೌಡರನ್ನು ಗುರುತಿಸಿ ಮೂರು ಬಾರಿ ಶಾಸಕರನ್ನಾಗಿ ಮಾಡಿದ ದೇವೇಗೌಡರ ಕುಟುಂಬ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಋಣ ತೀರಿಸಲು ಶಿವಲಿಂಗೇಗೌಡರಿಂದ ಎಂದಿಗೂ ಸಾಧ್ಯವಿಲ್ಲ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಜೆಡಿಎಸ್ ಪಕ್ಷಕ್ಕೆ ಬೆನ್ನು ತೋರಿ, ಕಾಂಗ್ರೆಸ್ ಕೈ ಹಿಡಿಯಲು ಹೊರಟಿರುವ ಶಿವಲಿಂಗೇಗೌಡರಿಗೆ ಕ್ಷೇತ್ರದ ಜನತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದರಲ್ಲಿ ಸಂದೇಹವಿಲ್ಲ ಎಂದರು.
ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಅವರು ಹೇಳುವಂತೆ ದೇವೇಗೌಡರು ರಾಜ್ಯ ರಾಜಕಾರಣದಲ್ಲಿ ಒಂದು ಫ್ಯಾಕ್ಟರಿ ಇದ್ದಂತೆ ಸಾಮಾನ್ಯ ಒಬ್ಬ ವ್ಯಕ್ತಿಯನ್ನು ಜನನಾಯಕನನ್ನಾಗಿ ಮಾಡುವ ಶಕ್ತಿ ದೇವೇಗೌಡರ ಕುಟುಂಬ ಹಾಗು ಜೆಡಿಎಸ್ ಪಕ್ಷಕ್ಕಿದೆ ಇಲ್ಲೇ ಬೆಳೆದ ನೂರಾರು ಮಂದಿ ನಾಯಕರು ಪಕ್ಷವನ್ನು ತೊರೆದು ಹೋಗಿದ್ದಾರೆ ಆ ಸಾಲಿನಲ್ಲಿ ಶಿವಲಿಂಗೇಗೌಡರು ಒಬ್ಬರಾಗುತ್ತಿದ್ದಾರೆ ವಿನಹ ಕ್ಷೇತ್ರದಲ್ಲಿ ಮತ್ಯಾವುದೇ ರೀತಿಯ ಬದಲಾವಣೆ ಆಗುತ್ತಿಲ್ಲ ನಮ್ಮ ಮುಖಂಡರು ಹಾಗೂ ಕಾರ್ಯಕರ್ತರಲ್ಲ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಅರಸೀಕೆರೆ ವಿಧಾನಸಭಾ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆಯಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಈಗಾಗಲೇ ಚುನಾವಣೆಗೆ ಕ್ಷೇತ್ರದ ಮತದಾರರು ಸಜ್ಜಾಗುತ್ತಿರುವುದಲ್ಲದೆ ಜೆಡಿಎಸ್ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ್ ನಾಯ್ಕ, ಜೆಡಿಎಸ್ ಮುಖಂಡರಾದ ಸಿಕಂದರ್,ಹರ್ಷವರ್ಧನ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಶಶಿಕುಮಾರ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ರಾಜ ನಾಯಕ್ ಮತ್ತು ಉಪಸ್ಥಿತರಿದ್ದರು.