ಮಡಿಕೇರಿ: ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದ್ದು, ವರದಕ್ಷಿಣೆ ಕಿರುಕುಳವೇ ಆಕೆಯ ಸಾವಿಗೆ ಕಾರಣವೆಂದು ಕುಟುಂಬದವರು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ, ಮಾವ ಮತ್ತು ಅತ್ತೆ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಯ್ಯಂಗೇರಿ ಗ್ರಾಮದ ನಿವಾಸಿ ಎಂ.ಎಸ್.ಮೊಹಮ್ಮದ್ ಹಾಗೂ ಅಲೀಮಾ ದಂಪತಿಯ ಪ್ರಥಮ ಪುತ್ರಿ ಎಂ.ಎo.ಅಮೀರಾ (21) ಸಾವನ್ನಪ್ಪಿರುವಾಕೆ.
ಕಕ್ಕಬ್ಬೆ ಕುಂಜಿಲ ಗ್ರಾಮದ ನಿವಾಸಿ ಕೆ. ಅಬ್ದುಲ್ಲಾ ಹಾಗೂ ಜಮೀಲಾ ದಂಪತಿಯ ಪುತ್ರ ರುವೈಜ್ ಕೆ.ಎ ಮತ್ತು ಅಯ್ಯಂಗೇರಿಯ ಅಮೀರಾ ನಾಪೋಕ್ಲು ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಅವಧಿಯಿಂದಲೇ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದ್ದು, ಕಳೆದ ನ.1ರಂದು ಅಯ್ಯಂಗೇರಿ ಮದ್ರಸದಲ್ಲಿ ಇವರಿಬ್ಬರ ವಿವಾಹವಾಗಿತ್ತು.
ಈ ಸಂದರ್ಭ 25 ಸವರನ್ ಚಿನ್ನ ನೀಡುವಂತೆ ರುವೈಜ್ ಮನೆಯವರು ಕೇಳಿದ್ದರೆಂದು ಹೇಳಲಾಗಿದ್ದು, ಆ ಸಂದರ್ಭ ಅಷ್ಟೊಂದು ಚಿನ್ನ ನೀಡಲಾಗದೆ ಮೊಹಮ್ಮದ್ ಅವರು 16 ಪವನ್ ಚಿನ್ನವನ್ನಷ್ಟೆ ನೀಡಿದ್ದರೆನ್ನಲಾಗಿದೆ.
ಆದರೆ ವಿವಾಹದ ಬಳಿಕ ಅತ್ತೆ ಮತ್ತು ಮಾವ ವರದಕ್ಷಿಣೆಯ ಚಿನ್ನಾಭರಣಕ್ಕೆ ಆಗ್ರಹಿಸಿ ಅಮೀರಾಳಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಅಮೀರಾ ತವರು ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ ಎಂದು ಆರೋಪಿಸಿ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ನಡೆದ ನಂತರ ಪತಿ, ಅತ್ತೆ ಹಾಗೂ ಮಾವ ನಾಪತ್ತೆಯಾಗಿರುವುದು ಅಮೀರಾಳ ಕುಟುಂಬಸ್ಥರ ದೂರಿಗೆ ಪುಷ್ಟಿ ನೀಡಿದಂತಾಗಿದ್ದು, ಭಾಗಮಂಡಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.