ಕೊಡಗು: ಕುಶಾಲನಗರದಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಆನೆಕಾಡುವಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮೂವರು ಮಕ್ಕಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ: ಕುಶಾಲನಗರ ಸಮೀಪದ ಪ್ರವಾಸಿ ತಾಣವನ್ನು ವೀಕ್ಷಿಸಿ ಬಳಿಕ ಕುಶಾಲನಗರಕ್ಕೆ ತೆರಳಿದ್ದ ನಗರದ ಕುಟುಮಬವೊಂದು ರಾತ್ರಿ 8 ಗಂಟೆ ಸುಮಾರಿಗೆ ಆನೆಕಾಡು ಸಮೀಪಿಸಿದಾಗ ದಿಢೀರಾಗಿ ಕಾಡಾನೆಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತ್ಯಕ್ಷವಾಗಿದೆ.
ಈ ಸಂದರ್ಭ ಕಾರನ್ನು ನಿಧಾನವಾಗಿ ಚಲಾಯಿಸಲಾಯಿತಾದರೂ ಕಾಡಾನೆ ಸಮೀಪಕ್ಕೆ ಬಂದಾಗಿತ್ತು. ಕಾರಿನಲ್ಲಿದ್ದ ಹೆಂಗಸರು ಮತ್ತು ಮಕ್ಕಳು ಆತಂಕದಿಂದ ಜೋರಾಗಿ ಕಿರುಚಿಕೊಳ್ಳಲಾರಂಭಿಸಿದ್ದು, ದೂರದಲ್ಲಿ ಬೈಕ್ ನಲ್ಲಿ ಬರುತ್ತಿದ್ದವರು ವೇಗವಾಗಿ ಬರುವಂತೆ ಕಾರಿನ ಚಾಲಕನಿಗೆ ಸನ್ನೆ ಮಾಡಿದ್ದಾರೆ.
ಆದರೆ ಅಷ್ಟೊತ್ತಿಗಾಗಲೇ ಕಾಡಾನೆ ತನ್ನ ದಂತದಿಂದ ಕಾರನ್ನು ಮಗುಚಲು ಯತ್ನಿಸಿದ್ದು, ಚಾಲಕ ಕಾರನ್ನು ವೇಗವಾಗಿ ಚಲಾಯಿಸಿ ಕುಟುಂಬವನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರಾದರೂ, ಆನೆ ದಂತದಿಂದ ತಿವಿದ ಪರಿಣಾಮ ಕಾರಿನ ಒಂದು ಭಾಗ ಜಖಂಗೊಂಡಿತ್ತು.
ಆನೆ ಕೂಡಾ ಸ್ವಲ್ಪ ದೂರ ಕಾರನ್ನು ಹಿಂಬಾಲಿಸಿ ಆತಂಕವನ್ನು ಸೃಷ್ಟಿಸಿತಾದರೂ, ಹೇಗೋ ಜೀವ ಉಳಿಸಿಕೊಂಡು ಮಡಿಕೇರಿ ತಲುಪಿದ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.