News Kannada
Thursday, March 30 2023

ಮಡಿಕೇರಿ

ಚೀಲವೊಂದಕ್ಕೆ 15,400 ರೂಪಾಯಿಗೆ ಏರಿ ದಾಖಲೆ ನಿರ್ಮಿಸಿದ ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ

Photo Credit :

ಮಡಿಕೇರಿ :  ಉತ್ಪಾದನಾ ವೆಚ್ಚದ ಹೆಚ್ಚಳ, ಕಾಡಾನೆ ಹಾವಳಿ, ಕೊರೋನಾ ಲಾಕ್‌ ಡೌನ್‌ ಹೊಡೆತ ಮತ್ತು ಅಕಾಲಿಕ ಮಳೆಯಿಂದ ಕಂಗೆಟ್ಟಿರುವ  ಅರೇಬಿಕಾ ಕಾಫಿ ಬೆಳೆಗಾರರಿಗೆ ಕೊನೆಗೂ ಸಂತಸ ಪಡುವ ಸುದ್ದಿ ಬಂದಿದೆ.  ಶುಕ್ರವಾರ ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿ ದರ 50 ಕೆಜಿ ಚೀಲವೊಂದಕ್ಕೆ  ಮೂಡಿಗೆರೆ ಯಲ್ಲಿ  15,400 ರೂಪಾಯಿಗಳಿಗೆ ಮಾರಾಟವಾಗಿ ಸರ್ವಕಾಲಿಕ ದಾಖಲೆ ನಿರ್ಮಿಸಿದೆ. 1993 ರಲ್ಲಿ  ಕೇಂದ್ರ ಸರ್ಕಾರ ಕಾಫಿಯ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿ  ಮುಕ್ತ ಮಾರಾಟಕ್ಕೆ ಅನುಮತಿ ನೀಡಿದ ನಂತರ ಇಷ್ಟೊಂದು ದರ ದೊರೆತಿರುವುದು ಇದೇ ಮೊದಲಾಗಿದೆ.
ಕಾಫಿಯ ಈ ದರ ಏರಿಕೆಯು ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿಗೆ ಮಾತ್ರ ಸೀಮಿತವಾಗಿದ್ದು ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ದೇಶವಾಗಿರುವ ಬ್ರೆಜಿಲ್‌ ನ ಕಾಫಿ ಉತ್ಪಾದನೆಗೆ  ಹಿಮಪಾತದಿಂದ ಹೊಡೆತ ಬಿದ್ದಿರುವುದೇ ಇಲ್ಲಿನ ದರ ಏರಿಕೆಗೆ ಕಾರಣವಾಗಿದೆ ಎಂದು ಕಾಫಿ ತಜ್ಞರ ಅಭಿಪ್ರಾಯವಾಗಿದೆ. ಬ್ರೆಜಿಲ್‌ ನಲ್ಲಿ ಹಿಮಪಾತದಿಂದಾಗಿ ಶೇಕಡಾ 10 ರಷ್ಟು ಬೆಳೆ ನಾಶವಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ  ಅರೇಬಿಕಾ ಕಾಫಿಯ ಸರಬರಾಜಿನಲ್ಲಿ ಕೊರತೆ ಆಗಿದ್ದರಿಂದ ಬೇಡಿಕೆ ಹೆಚ್ಚಾಗಿ ಕಾಫಿ ದರ ಏರಿಕೆ ದಾಖಲಿಸಿದೆ. ಆದರೆ ಅರೇಬಿಕಾ ಚೆರಿ , ರೋಬಸ್ಟಾ ಚೆರಿ ಮತ್ತು ರೋಬಸ್ಟಾ ಪಾರ್ಚ್‌ಮೆಂಟ್‌ ಕಾಫಿಯ
ದರದಲ್ಲಿ  ಏರಿಕೆಯೇನೂ ದಾಖಲಾಗಿಲ್ಲ.
ಕಾಫಿ ದರ ಏರಿಕೆಯ ಕುರಿತು ಮಾಹಿತಿ ನೀಡಿದ ಮೂಡಿಗೆರೆಯ  ಮುದ್ರೆಮನೆ ಕಾಫಿ ಕ್ಯೂರಿಂಗ್‌ ವರ್ಕ್ಸ್‌ ನ ವ್ಯವಸ್ಥಾಪಕ ಉಮೇಶ್‌ ಅವರು  ಶನಿವಾರ ಅರೇಬಿಕಾ ಚೆರಿ ಕಾಫಿ ದರ 6450 ಇದ್ದು ರೋಬಸ್ಟಾ ಕಾಫಿ ದರ ಚೆರಿ 3700 ಮತ್ತು ರೊಬಸ್ಟಾ ಪಾರ್ಚ್‌ಮೆಂಟ್‌ 6700 ಇದೆ ಎಂದರು. ಚೆರಿ   ಕಾಫಿಯ ತೇವಾಂಶ ಆಧರಿಸಿ ದರವನ್ನು ನಿಗದಿ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಕಾಫಿಯ ಭವಿಷ್ಯದ ದರದ ಕುರಿತು ಪ್ರತಿಕ್ರಿಯಿಸಿದ ಅವರು  ಇದೇ
ದರ ಮುಂದೆಯೂ ದೊರೆಯುವ  ಸಾಧ್ಯತೆ ಕಡಿಮೆ ಇದೆ. ನಿತ್ಯದ ಮಾರುಕಟ್ಟೆ ಆಗಿರುವುದರಿಂದ ಮತ್ತು ಸಂಪೂರ್ಣ ಅಂತರ್ರಾಷ್ಟ್ರೀಯ ಮಾರುಕಟ್ಟೆಯನ್ನೇ ಅವಲಂಬಿಸಿರುವುದರಿಂದ  ದರವು ಚಂಚಲವಾಗಿರುತ್ತದೆ ಎಂದರು.
ಸೋಮವಾರಪೇಟೆಯ  ಬ್ಲಾನ್‌ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ನವೀನ್‌ ಅವರೊಂದಿಗೆ ಈ ವರದಿಗಾರ ಮಾತನಾಡಿದಾಗ  ಇಂದು ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿಯನ್ನು 15,400 ರೂಪಾಯಿಗಳಿಗೆ ಖರೀದಿಸಲಾಗುತ್ತಿದೆ ಎಂದರು. ಅರೇಬಿಕಾ ಚೆರಿ ಕಾಫಿಯ ದರ 6500
ರೂಪಾಯಿ ಇದೆ ಎಂದರಲ್ಲದೆ  ಈ ದರ ಸರ್ವಕಾಲಿಕ ಏರಿಕೆಯಾಗಿದೆ ಎಂದರು. 2008 ನೇ ಇಸವಿಯಲ್ಲೂ  ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿ ದರ 50 ಕೆಜಿಯ ಚೀಲಕ್ಕೆ 11,700 ರೂಪಾಯಿಗಳಿಗೆ ತಲುಪಿದ್ದು ಅದು ಆಗಿನ ದಾಖಲೆ ಬೆಲೆ  ಎಂದು ಅವರು ಹೇಳಿದರು. ಕಳೆದ ಜುಲೈ ತಿಂಗಳ ಅಂತ್ಯದಲ್ಲಿ ಕಾಫಿ ದರ ಚೀಲಕ್ಕೆ 14,500 ದಾಟಿದ್ದರೂ ಈ ದರ ಹೆಚ್ಚು ದಿನ ಇರಲಿಲ್ಲ. ಈ ಕುರಿತು ಮಾತನಾಡಿದ ಚೌಡ್ಲು ಗ್ರಾಮದ ಕಾಫಿ ಬೆಳೆಗಾರ  ರಾಜೀವ್‌ ಕುಶಾಲಪ್ಪ ಅವರು ಈಗ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ  ಕಾಫಿಯು ಕೊಯ್ಲು ಮಾಡಿದ್ದರೂ ಒಣಗಿಸಲು ಸಾಧ್ಯವಾಗುತ್ತಿಲ್ಲ  ಕಾಫಿಯ ದರವು ಸ್ಥಿರವಲ್ಲದ್ದರಿಂದ ಕಾಫಿ ಒಣಗಿದ ನಂತರ ದರ ಕುಸಿಯುವ ಆತಂಕವೂ ಬೆಳೆಗಾರರರಿಗೆ ಇದೆ ಎಂದರು. ಅಕಾಲಿಕ ಮಳೆಯಿಂದ ಬಹುತೇಕ ತೋಟಗಳಲ್ಲಿ
ಕಾಫಿ ಹಣ್ಣು ಉದುರಿ ನೆಲದಲ್ಲೇ ಕೊಳೆಯುತ್ತಿದೆ. ಇದನ್ನು ಹೆಕ್ಕಲು  ಕಾರ್ಮಿಕರು ದೊರೆಯುತ್ತಿಲ್ಲ.

See also  ಅ.7ರಿಂದ 17ರವರೆಗೆ ಮಡಿಕೇರಿ ಪ್ರವಾಸಿಗರ ಪ್ರವೇಶವ ನಿರ್ಬಂಧ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್

ಕಾರ್ಮಿಕರಿಗೆ ದಿನಗೂಲಿ ನೀಡಿ ಹೆಕ್ಕಿಸಿದರೂ ಚೆರಿ ಕಾಫಿ ಮಾಡಬಹುದಾಗಿದ್ದು ಬೆಳೆಗಾರರಿಗೆ ಹೆಚ್ಚಿನ ಲಾಭವಿಲ್ಲ. ಕಾಫಿಗೆ ಬಂಪರ್‌  ಬೆಲೆ ಬಂದಿದ್ದರೂ  ಮಳೆಯಿಂದಾಗಿ ಬೆಳೆಗಾರರು ಸಂತಸ ಪಡಲು ಆಗುತ್ತಿಲ್ಲ ಎಂದು ವಿಷಾದಿಸಿದರು. ಕಳೆದ ವರ್ಷ ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿ ದರ 11 ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿದ್ದು ಈಗಿನ ದರಕ್ಕೆ ಹೋಲಿಸಿದರೆ ಶೇಕಡಾ 35 ರಿಂದ 40 ರಷ್ಟು ಏರಿಕೆ ದಾಖಲಾಗಿದೆ. ದೇಶದ ಒಟ್ಟು ಸರಾಸರಿ ಕಾಫಿ ಉತ್ಪಾದನೆ  ವಾರ್ಷಿಕ 3.6 ಲಕ್ಷ ಟನ್‌ ಗಳಷ್ಟಾಗಿದ್ದು ಇದರಲ್ಲಿ ಅರೇಬಿಕಾ ಕಾಫಿಯ ಪಾಲು 1.3 ಲಕ್ಷ ಟನ್‌   ಆಗಿದೆ. ಈ ಬಾರಿ ಅಕಾಲಿಕ ಮಳೆಯಿಂದ  ಉತ್ಪಾದನೆಗೆ ಹೊಡೆತ ಬಿದ್ದಿದ್ದು ಶೇಕಡಾ 30 ರಷ್ಟು ಫಸಲು ನಾಶವಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ಅಂದಾಜಿಸಿದ್ದಾರೆ. ದೇಶದ ಕಾಫಿಉತ್ಪಾದನೆಯಲ್ಲಿ  ರಾಜ್ಯದ ಕಾಪಿ ಉತ್ಪಾದನೆಯು ಸುಮಾರು 2.6 ಲಕ್ಷ ಟನ್‌ ಗಳಷ್ಟಿದೆ. ಇದರಲ್ಲಿ ಅರೇಬಿಕಾ ಕಾಫಿಯ ಉತ್ಪಾದನೆ 1.05 ಲಕ್ಷ ಟನ್‌ ಗಳಷ್ಟಿದ್ದು ರೋಬಸ್ಟ ಪಾಲು 1.55 ಲಕ್ಷ ಟನ್‌ ಗಳಷ್ಟಿದೆ. ಕೊಡಗಿನ ಒಟ್ಟು ಕಾಫಿ ಉತ್ಪಾದನೆ ವಾರ್ಷಿಕ 1.3 ಲಕ್ಷಟನ್‌ ಗಳಷ್ಟಿದ್ದು ಇದು ದೇಶದ ಒಟ್ಟು ಕಾಫಿ ಉತ್ಪಾದನೆಯ ಶೇಕಡಾ 30 ಕ್ಕೂ ಅಧಿಕ ಇರುವುದು ಈ ಪುಟ್ಟ ಜಿಲ್ಲೆಯ ಹೆಗ್ಗಳಿಕೆ ಆಗಿದೆ. ಜಿಲ್ಲೆಯಲ್ಲಿ  24 ಸಾವಿರ ಟನ್‌ ಗಳಷ್ಟು ಅರೇಬಿಕಾ ಕಾಫಿ ಉತ್ಪಾದನೆ ಆಗುತಿದ್ದು ರೊಬಸ್ಟಾ ಪಾಲು ಒಂದು ಲಕ್ಷ ಟನ್‌ ಗಳಿಗೂ ಅಧಿಕವಾಗಿದೆ.

ಸೋಮವಾರಪೇಟೆ ತಾಲ್ಲೂಕು ದೇಶದಲ್ಲೇ ಅತ್ಯಂತ ಹೆಚ್ಚು ಅರೇಬಿಕಾ ಕಾಫಿ ಉತ್ಪಾದಿಸುವ ತಾಲ್ಲೂಕಾಗಿ ಗುರುತಿಸಿಕೊಂಡಿದ್ದು ಜಿಲ್ಲೆಯ ಶೇಕಡಾ 95 ಕ್ಕೂ ಅಧಿಕ ಅರೇಬಿಕಾ ಕಾಫಿ ಉತ್ಪಾದನೆ ಈ ತಾಲ್ಲೂಕಿನದ್ದಾಗಿದೆ.  ಕಾಫಿಯ ದರವು ಅರೇಬಿಕಾ ಮಾದರಿಗೆ ಮಾತ್ರ ಹೆಚ್ಚಾಗಿದ್ದು ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ  ಹೆಚ್ಚು ಫಸಲುನಷ್ಟ ಅನುಭವಿಸಿದ್ದೂ ಅರೇಬಿಕಾ ಬೆಳೆಗಾರರೇ ಆಗಿದ್ದಾರೆ. ಇದೀಗ ಅರೇಬಿಕಾ ತಳಿಗೆ ಮಾತ್ರ ದರ ಹೆಚ್ಚಾಗಿರುವುದು ಕಾಕತಾಳೀಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು