ಮಡಿಕೇರಿ: ಕಸ್ತೂರಿರಂಗನ್ ವರದಿಯಿಂದ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ಮರು ಪರಾಮರ್ಶೆ ನಡೆಸುವ ಸಂಬಂಧ ಜಂಟಿ ಸದನ ಸಮಿತಿಯೊಂದನ್ನು ರಚಿಸಲಾಗಿದ್ದು, 31 ಸದಸ್ಯ ಬಲದ ಸಮಿತಿಯಲ್ಲಿ ಕರ್ನಾಟಕದಿಂದ ಏಕೈಕ ಪ್ರತಿನಿಧಿಯಾಗಿ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ನೇಮಕಗೊಂಡಿದ್ದಾರೆ.
ಕೇಂದ್ರ ಪರಿಸರ ಸಚಿವ ಭುಪೇಂದ್ರ ಯಾದವ್ ನೇತೖತ್ವದ ಈ ಸಮಿತಿ ಕಸ್ತೂರಿ ರಂಗನ್ ವರದಿ ಸೇರಿದಂತೆ ದೇಶದ ಜೀವವೈವಿಧ್ಯತೆ ಸಂಬಂಧಿತ 2002 ರ ಕಾಯ್ದೆ ಕುರಿತು ಪರಾಮರ್ಶಿಸಲಿದ್ದು, ಮುಂಬರುವ ಫೆಬ್ರವರಿಯೊಳಗಾಗಿ ವರದಿ ನೀಡಬೇಕಿದೆ.
ಕಸ್ತೂರಿರಂಗನ್ ವರದಿಯನ್ನು ಪಶ್ಚಿಮಘಟ್ಟದ ಜಿಲ್ಲೆಗಳ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಜಾರಿಗೊಳಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಅದಕ್ಕೆ ಪೂರಕವಾಗಿ, ವರದಿಯಲ್ಲಿರುವ ಸಾಧಕ-ಬಾಧಕಗಳ ಬಗ್ಗೆಯೂ ಸಮಿತಿ ಪರಾಮರ್ಶೆ ನಡೆಸಲಿದೆ.
ಸಮಿತಿಯಲ್ಲಿ ಸಂಸದ ಪ್ರತಾಪ್ ಸಿಂಹ ಒಳಗೊಂಡಂತೆ ದೇಶದ 21 ಸಂಸದರು, ರಾಜ್ಯಸಭೆಯ 10 ಸದಸ್ಯರ ನೇಮಕವಾಗಿದ್ದು, ಕರ್ನಾಟಕದಿಂದ ಏಕೈಕ ಸದಸ್ಯರಾಗಿ ಪ್ರತಾಪ್ ಸಿಂಹ ನೇಮಕವಾಗಿದ್ದಾರೆ.