ಮಡಿಕೇರಿ ಡಿ.21: ಇತ್ತೀಚೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ 2ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಬೆಸ್ಟ್ ಡೈರೆಕ್ಟರ್ ಅವಾರ್ಡ” ಪಡೆದಿದ್ದ “ನಾಡ ಪೆದ ಆಶಾ” ಕೊಡವ ಚಲನಚಿತ್ರ ಇದೀಗ ಮತ್ತೊಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದೆ.
ಬೆಂಗಳೂರಿನಲ್ಲಿ ನಡೆದ 3ನೇ ಅಂತರರಾಷ್ಟ್ರೀಯ ಪನೋರಮ ಚಿತ್ರೋತ್ಸವದಲ್ಲಿ “ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ” ಎನ್ನುವ ಕಿರೀಟವನ್ನು ಗೆದ್ದು “ನಾಡ ಪೆದ ಆಶಾ” ಬೀಗಿದೆ.
ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ, ವಿಕೆ3 ಪಿಕ್ಚರ್ಸ್ ಬ್ಯಾನರಿನಡಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣದ ಕೊಡವ ಚಿತ್ರ ಇದಾಗಿದ್ದು, ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ಕಾದಂಬರಿಯನ್ನು ಆಧರಿಸಿ ಚಿತ್ರಿಸಲಾಗಿದೆ.
ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಕೊಂಡಾಜ್ಜಿ ಬಸಪ್ಪ ಸಭಾಂಗಣದಲ್ಲಿ ಫಿಲಂಹೋಲಿಕ್ ಫೌಂಡೇಶನ್ ನ ಸಹಯೋಗದಲ್ಲಿ ನಡೆದ 3ನೇ ಅಂತರರಾಷ್ಟ್ರೀಯ ಪನೋರಮ ಚಿತ್ರೋತ್ಸವದಲ್ಲಿ ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ, ಖ್ಯಾತ ನಿರ್ಮಾಪಕ ಹಾಗೂ ಛಾಯಾಗ್ರಾಹಕ ಜೆ.ಜೆ.ಕೃಷ್ಣ, ಖ್ಯಾತ ನಟಿಯರಾದ ರೇಖಾ ದಾಸ್, ನೀತು ಶೆಟ್ಟಿ, ನಿಶ್ವಿಕಾ ನಾಯ್ಡು, ಫಿಲಂಹೋಲಿಕ್ ಫೌಂಡೇಶನ್ ಅಧ್ಯಕ್ಷ ಹಾಗೂ ಚಿತ್ರೋತ್ಸವದ ನಿರ್ದೇಶಕ ಆದಿತ್ಯ ಅವರುಗಳ ಉಪಸ್ಥಿತಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್ ಅವರಿಂದ “ನಾಡ ಪೆದ ಆಶಾ” ಚಿತ್ರದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು “ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ”ಯನ್ನು ಸ್ವೀಕರಿಸಿದರು.
ನಂತರ ಮಾತನಾಡಿದ ಅವರು ಪ್ರಶಸ್ತಿಯನ್ನು ನಿರ್ದೇಶಕರು ಹಾಗೂ ಇಡೀ ಚಿತ್ರತಂಡಕ್ಕೆ ಸಮರ್ಪಿಸುವುದಾಗಿ ತಿಳಿಸಿದರು.
ಅಲ್ಲದೆ ಚಿತ್ರದ ಯಶಸ್ಸಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಚಲನಚಿತ್ರೋತ್ಸವಕ್ಕೆ ಬಂದಿದ್ದ 100 ಕ್ಕೂ ಅಧಿಕ ಚಿತ್ರಗಳಲ್ಲಿ 8 ಚಿತ್ರಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಗೊಂಡವು. ಇವುಗಳಲ್ಲಿ “ನಾಡ ಪೆದ ಆಶಾ” ಚಿತ್ರ ಕೂಡ ಒಂದು. 2020ನೇ ಸಾಲಿನ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ವಿಜೇತ “ನಾಡ ಪೆದ ಆಶಾ” ಕೊಡವ ಕಾದಂಬರಿ ಆಧಾರಿತ ಚಿತ್ರದಲ್ಲಿ ಬೊಳ್ಳಜಿರ ಬಿ.ಅಯ್ಯಪ್ಪ, ನೆಲ್ಲಚಂಡ ರಿಷಿ ಪೂವಮ್ಮ, ಅಡ್ಡಂಡ ಅನಿತಾ ಕಾರ್ಯಪ್ಪ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ವಾಂಚಿರ ವಿಠಲ್ ನಾಣಯ್ಯ, ಚೇರುವಾಳಂಡ ಸುಜಲ ನಾಣಯ್ಯ, ಈರಮಂಡ ಹರಿಣಿ ವಿಜಯ್, ಕುಶಿ ಕಾವೇರಮ್ಮ, ಕೇಸರಿ ಬೋಜಮ್ಮ, ಕೊಟ್ಟುಕತ್ತೀರ ಆರ್ಯ ದೇವಯ್ಯ, ಮಾಚಂಗಡ ಶರತ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ 7ನೇ ಡೆಹ್ರಡೂನ್, 2ನೇ ಚಂಢೀಗಡ್, 27ನೇ ಕೊಲ್ಕತ್ತಾ, 2ನೇ ಕರ್ನಾಟಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಐತಿಹಾಸಿಕ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ “ನಾಡ ಪೆದ ಆಶಾ” ಪ್ರದರ್ಶನ ಕಂಡು ಜನಮೆಚ್ಚುಗೆ ಗಳಿಸಿದೆ.
2021ರ ಫೆಬ್ರವರಿ ತಿಂಗಳಿನಲ್ಲಿ ಮೂರ್ನಾಡು ಕೊಡಂಬೂರು ಗ್ರಾಮದ ಶ್ರೀ ಭದ್ರಕಾಳಿ ದೇವರ ಸನ್ನಿದಿಯಲ್ಲಿ ಸೆಟ್ಟೇರಿದ ಈ ಚಿತ್ರ ಬೇತ್ರಿ ಮುಕ್ಕಾಟಿರ ಐನ್ಮನೆ ಮತ್ತು ಕೊಡಗಿನ ವಿವಿಧ ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಕೊಡಗಿನ ರೈತರ ಸಮಸ್ಯೆಗಳ ಚಿತ್ರಣ, ಸಂಸ್ಕೃತಿ, ಪದ್ಧತಿ, ಪರಂಪರೆಗಳ ಅನಾವರಣ, ಅಂಗನವಾಡಿ ಕಾರ್ಯಕರ್ತೆಯ ಜೀವನದ ಮೇಲೆ ಬೆಳಕು ಚೆಲ್ಲಿದೆ. ಸ್ತ್ರೀ ಪ್ರಧಾನ ಕಥಾವಸ್ತುವಿನ “ನಾಡ ಪೆದ ಆಶಾ” 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡು ಕೊಡಗು ಜಿಲ್ಲೆಯಾದ್ಯಂತ 123 ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.
ಚಿತ್ರಕ್ಕೆ ಪ್ರಶಸ್ತಿಗಳು ದೊರೆಯುತ್ತಿರುವ ಬಗ್ಗೆ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದ್ದು, ಈ ಪ್ರಶಸ್ತಿ ಮತ್ತಷ್ಟು ಚಿತ್ರಗಳ ನಿರ್ದೇಶನಕ್ಕೆ ಪ್ರೇರಣೆ ನೀಡಿದೆ ಎಂದರು.