ಕೊಡಗು: ಭಾರತೀಯ ರೈತ ಪರ ಸಂಘಟನೆಗಳ ಒಕ್ಕೂಟ (ಸಿ.ಐ.ಎಫ್.ಎ-ಸಿಫಾ) ಬೆಂಬಲದೊಂದಿಗೆ ಕೊಡಗಿನ ಎಲ್ಲಾ ಬೆಳೆಗಾರರಿಗೆ ಲಾಭದಾಯಕ ಬೆಲೆ ಹಾಗೂ ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಿಸಬೇಕೆಂದು ಹೋರಾಟ ನಡೆಸಲಾಗುವುದು. 2024 ಲೋಕಸಭಾ ಚುನಾವಣೆಯೊಳಗೆ ಈ ಬಗ್ಗೆ ಘೋಷಿಸಲು ಬೆಂಗಳೂರಿನಲ್ಲಿ ನಡೆದ ಭಾರತ ದೇಶದ ಎಲ್ಲಾ ರಾಜ್ಯಗಳ ರೈತ ಪರ ಸಂಘಟನೆಗಳ ಒಕ್ಕೂಟದ ಸಮಾವೇಶದಲ್ಲಿ ನಿರ್ಣಯ ಮಂಡಿಸಲಾಗಿದೆ ಎಂದು ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ವಿಶೇಷ ಆಹ್ವಾನಿತರಾಗಿ ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನ ಸಂಚಾಲಕರಾಗಿ ಭಾಗವಹಿಸಿ ಕಾಫಿ ಬೆಳೆ ಗಾರರ ಸಮಸ್ಯೆ ಬಗೆ ಗಮನ ಸೆಳೆಯಲಾಗಿದೆ ಎಂದು ಅವರು ತಿಳಿಸಿದರು.
ಸಮಾವೇಶದಲ್ಲಿ ಸಿಫಾ ರಾಷ್ಟ್ರೀಯ ಅಧ್ಯಕ್ಷ ಮಹಾರಾಷ್ಟ್ರದ ರಘುನಾಥ್ ದಾದಾ ಪಾಟೀಲ್, ಸಂಚಾಲಕರಾದ ತೆಲಂಗಾಣ ರಾಜ್ಯದ ಪಿ ಚಂಗಲ್ ರೆಡ್ಡಿ ಕರ್ನಾಟಕ ರಾಜ್ಯದ ಸಿಫಾ ಸಂಚಾಲಕ ಸಂಕರ ನಾರಾಯಣ ರೆಡ್ಡಿ ಹಾಗೂ ವಿವಿಧ ರಾಜ್ಯಗಳ ಸಂಚಾಲಕರು ಭಾಗವಹಿಸಿದ್ದರು.
ಕಾಫಿ ಬೆಳೆ ಉತ್ಪಾದನಾ ವೆಚ್ಚ ಬಹಳಷ್ಟು ಹೆಚ್ಚಾಗಿದೆ.ದೇಶದಲ್ಲಿ ಒಟ್ಟು ಕಾಫಿ ಉತ್ಪಾದನೆ ಮಾಡುವ ವಿಸ್ತೀರ್ಣ ಹಾಗೂ ಅದಕ್ಕೆ ಅನುಸಾರ ಕಾಫಿ ಉತ್ಪಾದನೆ ಸರಾಸರಿ ತೆಗೆದುಕೊಂಡರೆ ಪ್ರತಿ ಎಕರೆಗೆ 10 ರಿಂದ 15 ಚೀಲ ಕಾಫಿ ಮಾತ್ರ ಬೆಳೆಯಲಾಗುತ್ತದೆ. ಇದರಿಂದ ಪ್ರತಿ ಎಕರೆಗೆ ಉತ್ಪಾದನಾ ವೆಚ್ಚ 30 ರಿಂದ 40 ಸಾವಿರ ನಷ್ಟವಾಗುತ್ತಿದೆ ಎಂದು ಗಮನ ಸೆಳೆಯಲಾಗಿದೆ ಎಂದು ರವೀಂದ್ರ ತಿಳಿಸಿದರು.
ಸಮಾವೇಶದಲ್ಲಿ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಕನಿಷ್ಠ 100 ಸಂಸದರೊಂದಿಗೆ ದೆಹಲಿಗೆ ತೆರಳಿ ದೇಶದ ಇತರ ಬೆಳೆಗಾರರ ಸಮಸ್ಯೆ ಹಾಗೂ ಕೊಡಗು ಜಿಲ್ಲೆಯ ಕಾಫಿ ಬೆಳೆದಾರರ ಸಮಸ್ಯೆಯನ್ನು ಸಹ ಪರಿಗಣಿಸಿ ಒತ್ತಡ ಹೇರಲಾಗುವುದೆಂದು ಸಿಫಾ ರಾಷ್ಟ್ರೀಯ ಅಧ್ಯಕ್ಷ ರಘುನಾಥ್ ದಾದಾ ಪಾಟೀಲ್ ಅವರು ಭರವಸೆ ನೀಡಿದ್ದಾರೆ ಎಂದು ರವೀಂದ್ರ ವಿವರಿಸಿದರು.
ಕಾಫಿ ಉತ್ಪಾದನೆಯಲ್ಲಿ ಸಣ್ಣ ಬೆಳೆಗಾರರ ಪಾತ್ರ ಹೆಚ್ಚಾಗಿದೆ. ಒಟ್ಟು ಕಾಫಿ ಬೆಳೆಗಾರರ ಅಂಕಿ ಅಂಶ ಪ್ರಕಾರ ಶೇಕಡ 90ರಷ್ಟು ಸಣ್ಣ ಬೆಳೆಗಾರರಿದ್ದಾರೆ. ಆದರೆ ಭಾರತೀಯ ಕಾಫಿ ಮಂಡಳಿಯಲ್ಲಿ ಸಣ್ಣ ಕಾಫಿ ಬೆಳೆಗಾರರಿಗೆ ಸೂಕ್ತ ಪ್ರಾತಿನಿತ್ಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಕೊಡಗಿನ ಕಾಫಿ ತೋಟ ಕಾವೇರಿ ನದಿ ಸೇರಿದಂತೆ ಜಿಲ್ಲೆಯ ಹಲವು ನದಿಗಳಿಗೆ ಜೀವಂತಿಕೆಯನ್ನು ನೀಡುವ ಜಲಾನಯನ ಪ್ರದೇಶವಾಗಿದೆ.ಕಾವೇರಿ ನದಿಯನ್ನು ದಕ್ಷಿಣ ಭಾರತದ ಸುಮಾರು 8 ಕೋಟಿ ಜನರು ಕೃಷಿ,ಕುಡಿಯಲು,ಕೈಗಾರಿಕೆಗೆ ಅವಲಂಬಿಸಿದ್ದಾರೆ. ಪ್ರತಿ ಎಕರೆ ಕಾಫಿ ತೋಟದಲ್ಲಿ ಇರುವ ನೂರಾರು ಕಾಫಿ ಮರ ಮತ್ತು ಕಾಡು ಮರಗಳು, ಜಿಲ್ಲೆಯ ಬೆಟ್ಟಗುಡ್ಡ, ಭತ್ತದ ಗದ್ದೆಗಳು ಕಾವೇರಿ ಹಾಗೂ ಇತರ ಉಪನದಿಗಳಿಗೆ ಜೀವಂತಿಕೆಯನ್ನು ನೀಡುವ ಪ್ರದೇಶವಾಗಿದೆ. ನದಿಗಳ ಜೀವಂತಿಕೆ ಉಳಿಸಿಕೊಳ್ಳಲು ಕೊಡಗು ಜಿಲ್ಲೆಯ ಕಾಫಿ ತೋಟಗಳು, ಬೆಟ್ಟಗುಡ್ಡಗಳು,ಭತ್ತದ ಗದ್ದೆಗಳು ಅನಿವಾರ್ಯವಾಗಿ ಉಳಿಸಿಕೊಳ್ಳಬೇಕಾಗಿದೆ ಎಂದು ಗಮನ ಸೆಳೆಯಲಾಗಿದೆ ಎಂದು ರವೀಂದ್ರ ಅವರು ತಿಳಿಸಿದರು.
ಕಾಫಿ ಕೆಫೆಗಳಲ್ಲಿ ಒಂದು ಕೆಜಿ ಕಾಫಿ ಬೀಜಕ್ಕೆ ರೂ. 1520 ಬೆಲೆ ಇದ್ದು,ಇದರ ಪ್ರಕಾರ ಒಂದು ಚೀಲ ಚೆರಿ ಕಾಫಿ ಬೆಳೆಗೆ ರೂ.38000 ಬೆಲೆ ದೊರೆಯಬೇಕಾಗಿದೆ. ಆದರೆ ಕಾಫಿ ಬೆಳೆಯುವ ರೈತನಿಗೆ ಕೇವಲ ರೂ.3500 ರಿಂದ 4000 ಪ್ರಸ್ತುತ ಸಿಗುತ್ತಿದೆ. ಕಾಫಿ ಬೆಳೆ ಬೆಳೆಯುವ ಬೆಳೆಗಾರನಿಗೆ ಕಾಫಿ ಕೆಫೆಗಳಲ್ಲಿ ದೊರೆಯುವ ದರದ ಅರ್ಧ ಭಾಗವಾದರೂ ಸಿಗಬೇಕು ಇದಕ್ಕೆ ಸಿಫಾ ಬೆಂಬಲ ನೀಡಬೇಕೆಂದು ಕೋರಲಾಗಿದೆ. ಈ ಸಂದರ್ಭ ಕೊಡಗಿನ ಇತರ ಬೆಳೆ ಕಾಳುಮೆಣಸುಗೆ ವಿದೇಶದಿಂದ ಆಮದಾಗುವ ಕಳಪೆ ಗುಣಮಟ್ಟದ ಕಾಳುಮೆಣಸನ್ನು ಮಿಶ್ರ ಮಾಡಿ ದೇಶೀಯ ಮಾರುಕಟ್ಟೆ ಬಿಡುಗಡೆ ಮಾಡುತ್ತಿದ್ದು,ಇದಕ್ಕೆ ಕಡಿವಾಣ ಹಾಕಲು ನಿರ್ಣಯ ಕೈಗೊಳ್ಳಲಾಗಿದೆ.ಅಡಿಕೆ ಬೆಳೆಗೆ ಕಪ್ಪು ಚುಕ್ಕೆ ಮತ್ತು ಹಳದಿರೋಗ ನಿಯಂತ್ರಿಸಲು ಸರ್ಕಾರ ತಕ್ಷಣ ಕೃಷಿ ತಜ್ಞರ ತಂಡ ನೇಮಿಸಿ ಅದಕ್ಕೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ರವೀಂದ್ರ ತಿಳಿಸಿದರು.
ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನದ ಹೋರಾಟದ ಫಲವಾಗಿ ದಕ್ಷಿಣ ಭಾರತದಲ್ಲಿ ಸಂಚರಿಸುವ ರೈಲುಗಳಲ್ಲಿ ಕಾಫಿಯನ್ನು ವಿತರಿಸಲಾಗುತ್ತಿತ್ತು.ಅನಂತರ ಅದು ಸ್ಥಗಿತವಾಯಿತು. ಮತ್ತೆ ಕಾಫಿಯನ್ನು ಪುನರ್ ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮನವಿ ಮಾಡಲಾಗಿದೆ.ಕೋವಿಡ್ ಲಾಕ್ ಡೌನ್ ನಲ್ಲಿ ದೇಶದ ಎಲ್ಲಾ ರಂಗಗಳು ಮಾಸ್ಕ್ ಹಾಕಿ ಮನೆಯೊಳಗೆ ಉಳಿದುಕೊಂಡರು. ಆದರೆ ರೈತರು ಉತ್ಪಾದನೆಯನ್ನು ಸ್ಥಗಿತ ಮಾಡಲಿಲ್ಲ .ಎಂದಿನಂತೆ ಕೃಷಿ ಚಟುವಟಿಕೆಯನ್ನು ಅವರು ಕೈಗೊಳ್ಳುವ ಮೂಲಕ ದೇಶದ ಎಲ್ಲಾ ಜನರಿಗೆ ಆಹಾರವನ್ನು ನೀಡಿದರು ಎಂದು ಗಮನ ಸೆಳೆಯಲಾಗಿದೆ ಎಂದು ಎಂದು ರವೀಂದ್ರ ತಿಳಿಸಿದರು.ಆದ್ದರಿಂದ ಸರಕಾರ ರೈತರಿಗೆ ಪ್ರಾಮುಖ್ಯತೆ ನೀಡಬೇಕಾದ ಅನಿವಾರ್ಯತೆ ಬಗ್ಗೆ ವಿವರಿಸಲಾಗಿದೆ ಎಂದು ಅವರು ಗಮನ ಸೆಳೆದರು.
ವೇದಿಕೆಯಲ್ಲಿ ಕೆಜಿಎಫ್ ಅಧ್ಯಕ್ಷ ಡಾ.ಎಚ್ .ಡಿ ಮೋಹನ್ ಕುಮಾರ್, ಹಾಸನ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಕೆ.ಎನ್ .ಸುಬ್ರಮಣಿ, ರಿಸರ್ಚ್ ಫೌಂಡೇಶನ್ ಅಧ್ಯಕ್ಷರಾದ ಮುರುಳಿಧರ್,ರಾಜ್ಯ ಕೃಷಿ ಬೆಲೆ ಆಯೋಗ ಅದ್ಯಕ್ಷ ಡಾ.ಪ್ರಕಾಶ್, ಭಾಜಪ ರಾಷ್ಟ್ರೀಯ ಕೃಷಿ ಮೋರ್ಚ ಸದಸ್ಯರಾದ ಕೆ. ವೇಣುಗೋಪಾಲ್, ಕೊಡಗಿನ ಮಾಜಿ ಭಾಜಪ ಪ್ರಭಾರಿಗಳಾದ ಶಂಕರನಾರಾಯಣ ರೆಡ್ಡಿ ,ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನ ಸಮಿತಿಯ ಕಾರ್ಯದರ್ಶಿ ಮತ್ರಂಡ ಪ್ರವೀಣ್ ಕುಶಾಲಪ್ಪ ಹಾಗೂ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಹಾಜರಿದ್ದರು.
TV ONE NEWS UPDATE