ಮಡಿಕೇರಿ, ಡಿ.30: ಜಿಲ್ಲೆಯಲ್ಲಿ ಜನವರಿ, 15 ರಂದು ಯೋಗಥಾನ್ ಆಯೋಜಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಥಾನ್ ಆಯೋಜಿಸಲು ನಿರ್ಧರಿಸಲಾಯಿತು.
ಯೋಗಥಾನ್ ಏರ್ಪಡಿಸುವ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿಗಳು ಯೋಗಥಾನ್ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು. ಜೊತೆಗೆ ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ, ಎನ್ಎಸ್ಎಸ್ ಹೀಗೆ ಹಲವರನ್ನು ಒಳಗೊಂಡು ಯೋಗಥಾನ್ ಕಾರ್ಯಕ್ರಮ ಯಶಸ್ಸಿಗೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಯೋಗಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಹೆಸರು ನೋಂದಾಯಿಸಬೇಕು. ಯೋಗಥಾನ್ನಲ್ಲಿ ಪಾಲ್ಗೊಳ್ಳುವವರು ಕಾರ್ಪೆಟ್/ ಮ್ಯಾಟ್ ತರುವುದು, ಪಾಲ್ಗೊಳ್ಳುವವರಿಗೆ ವಾಹನ ಸೌಲಭ್ಯ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ಮಾತನಾಡಿ ಸರ್ಕಾರವು ಜನವರಿ, 15 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯೋಗಥಾನ್ ಕಾರ್ಯಕ್ರಮ ಆಯೋಜಿಸಲು ನಿರ್ದೇಶನ ನೀಡಿದೆ. ಆ ನಿಟ್ಟಿನಲ್ಲಿ ಜನವರಿ, 13 ಮತ್ತು 14 ರಂದು ಪೂರ್ವಾಭ್ಯಾಸ ಮಾಡಿಕೊಳ್ಳಬೇಕಿದೆ. ಗಿನ್ನಿಸ್ ದಾಖಲೆ ಮಾಡಬೇಕಿರುವುದರಿಂದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನಿಷ್ಠ 5 ಸಾವಿರ ಮಂದಿ ಯೋಗಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಅವರು ಹೇಳಿದರು.
ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ.ರೇಣುಕಾ ದೇವಿ ಅವರು ಮಾತನಾಡಿ ಯೋಗಥಾನ್ ಕಾರ್ಯಕ್ರಮಕ್ಕೆ ಈಗಾಗಲೇ 4,600 ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ನಿರ್ಮಲ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯೋಗಥಾನ್ ಬಗ್ಗೆ ಹಲವು ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಸುಬ್ರಮಣ್ಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಜಿ.ಪಂ.ಎಂಜಿನಿಯರ್ ನಾಗೇಂದ್ರಪ್ಪ, ಸೆಸ್ಕ್ ಎಇಇ ವಿನಯ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎನ್.ಮಂಜುನಾಥ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ದಿವಾಕರ, ನಗರಸಭೆ ಎಂಜಿನಿಯರ್ ಸೌಮ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ತಹಶೀಲ್ದಾರ್ ಪಿ.ಎಸ್.ಮಹೇಶ್ ಇತರರು ಇದ್ದರು.
ಮತ್ತಷ್ಟು ಮಾಹಿತಿ: ಸಾವಿರಾರು ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿದ, ಭಾರತದಲ್ಲಿ ಜನ್ಮ ತಳೆದ ಯೋಗವನ್ನು ದೈನಂದಿನ ಜೀವನದ ಒಂದು ಭಾಗವಾಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಆಯುಷ್ ಟಿವಿಯು ಕರ್ನಾಟಕದಾದ್ಯಂತ ಸಾವಿರಕ್ಕಿಂತಲೂ ಹೆಚ್ಚು ಯೋಗ ಬೋಧಕರನ್ನು ಆನ್ಲೈನ್ ಪರೀಕ್ಷೆಯ ಮೂಲಕ ನಡೆಸಲು ಚಾಲನೆ ನೀಡುತ್ತಿದೆ. ಆದ್ದರಿಂದ ರಾಜ್ಯದ ಎಲ್ಲಾ ಯೋಗಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 8310471614 ವೆಬ್ಸೈಟ್ : www.ayushtv.in/prcb ನ್ನು ಸಂಪರ್ಕಿಸಬಹುದು ಎಂದು ಆಯುಷ್ ವಾಹಿನಿಯ ಕಾರ್ಯಕ್ರಮ ನಿರ್ವಹಕರಾದ ಸತೀಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕರ ಆಶಾಕಿರಣ ಸ್ವಾಮಿ ವಿವೇಕಾನಂದರ ಜನ್ಮ ದಿನ ಹಾಗೂ ರಾಷ್ಟ್ರೀಯ ಯುವ ಸಪ್ತಾಹದ ನಿಮಿತ್ತ ಯೋಗಥಾನ್ ಕಾರ್ಯಕ್ರಮವು ಜನವರಿ, 15 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಮೂಹಿಕ ‘ಯೋಗಥಾನ್’ ನಡೆಯಲಿದೆ ಎಂದು ಆಯುಷ್ ವಾಹಿನಿಯ ಕಾರ್ಯಕ್ರಮ ನಿರ್ವಹಕರಾದ ಸತೀಶ್ ತಿಳಿಸಿದರು.