ಕೊಡಗು: ಅರಣ್ಯ ಹಕ್ಕು ಕಾಯಿದೆ-2006 ಅನುಷ್ಢಾನದಲ್ಲಿ ಚಾಲ್ತಿಯಲ್ಲಿನ ಕಾನೂನನ್ನು ಗಾಳಿಗೆ ತೂರಿ ಅರಣ್ಯ ಪ್ರದೇಶವನ್ನು ಅನರ್ಹರಿಗೆ ಹಂಚಿಕೆ ಮಾಡುತ್ತಿರುವುದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೊಡಗು ಏಕೀಕರಣ ರಂಗ ಜಿಲ್ಲಾಧಿಕಾರಿ ಸೇರಿದಂತೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳ ಕಾಜೂರು, ಬೆಳ್ಳೂರು, ಎಡಪಾರೆ, ನಂಜರಾಯಪಟ್ಟಣ, ಎಡವನಾಡು, ವಿರೂಪಾಕ್ಷಪುರ, ಮಸ್ಕೋಡು, ಹೊಸಪಟ್ಟಣ, ತಣ್ಣೀರಳ್ಳ, ಗೊಂದಿಬಸವನ ಹಳ್ಳಿ ಮುಂತಾದ ಗ್ರಾಮಗಳಲ್ಲಿ ಸಾಂಪ್ರಾದಾಯಿಕ ಅರಣ್ಯವಾಸಿಗಳಿಗೆ ವೈಯಕ್ತಿಕ ಹಕ್ಕು ಗುರುತಿಸಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ .
ಸದ್ಯದಲ್ಲಿಯೇ ಎದುರಾಗುತ್ತಿರುವ ವಿಧಾನಸಭಾ ಚುನಾವಣೆಗಳ ಹಿನ್ನಲೆಯಲ್ಲಿ ಸಂಪೂರ್ಣ ಆಡಳಿತಾತ್ಮಕವಾದ ಹಾಗೂ ಅರೆ ನ್ಯಾಯಾಂಗದ ಈ ಪ್ರಕ್ರಿಯೆಗೆ ರಾಜಕೀಯ ಹಸ್ತಕ್ಷೇಪವಾಗುತ್ತಿದೆ.
ಅರಣ್ಯ ಹಕ್ಕು ಕಾಯಿದೆ-2006ರಲ್ಲಿ ನಿಗಧಿಪಡಿಸಿರುವ ಮಾನದಂಡಗಳನ್ನು ಉಲ್ಲಂಘಿಸಿ ಅನರ್ಹರಿಗೆ ಹಕ್ಕು ಮಂಜೂರು ಮಾಡುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ. ಸದ್ಯದಲ್ಲಿಯೇ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳಿಂದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ತರಾತುರಿಯಲ್ಲಿ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.