ಕೊಡಗು: ಜಿಲ್ಲೆಯ ಕುಟ್ಟಾ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯೊಳಗೆ ಎರಡು ಕೂಲಿ ಕಾರ್ಮಿಕರ ಜೀವಗಳನ್ನು ಬಲಿ ತೆಗೆದುಕೊಂಡ ನರಹಂತಕ ಹುಲಿಯನ್ನು ಕೂಡಲೇ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅನುಮತಿ ನೀಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ನರಹಂತಕ ಹುಲಿಯನ್ನು ಹಿಡಿದು ಮತ್ತೊಂದು ಜಾಗಕ್ಕೆ ಸ್ಥಳಾಂತರ ಮಾಡಿ ನಂತರ ಅಲ್ಲಿಯೂ ಮತ್ತೊಂದು ಅವಘಡ ನಡೆಯುವುದಕ್ಕಿಂತ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಈ ನರಹಂತಕ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಆದೇಶ ನೀಡಬೇಕಿದೆ. ಇಲ್ಲವೇ ಈ ಕೂಡಲೇ ಕಾರ್ಯಾಚರಣೆ ಮೂಲಕ ಸೆರೆಹಿಡಿದು ಬೇರೆ ಜಾಗಕ್ಕೆ ಸ್ಥಳಾಂತರ ಮಾಡದೆ, ಮೃಗಾಲಯದಲ್ಲಿಯೇ ಕೂಡಿಡಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಒಮ್ಮೆ ಮನುಷ್ಯರ ರಕ್ತದ ರುಚಿ ನೋಡಿರುವ ವ್ಯಾಘ್ರ ಮತ್ತೊಮ್ಮೆ ಮನುಷ್ಯರ ಮೇಲೆಯೇ ದಾಳಿ ಮಾಡುತ್ತದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಕುಟ್ಟಾ ಸಮೀಪದ ಕೆ.ಬಾಡಗ ವ್ಯಾಪ್ತಿಯ ಚೂರಿಕಾಡುವಿನಲ್ಲಿ ನಡೆದ ಮತ್ತೊಂದು ದುರ್ಘಟನೆ ಸಾಕ್ಷಿಯಾಗಿದೆ. ಈ ಕೂಡಲೇ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಿದ್ದರೆ ಗ್ರಾಮಸ್ಥರು ಕೂಡ ಇಲಾಖೆಗೆ ಸಾಥ್ ನೀಡುತ್ತಾರೆ. ಕಾನೂನಿಗೆ ಬೆಲೆ ಕೊಡುವ ಮಂದಿ ಜಿಲ್ಲೆಯವರಾಗಿರುವ ಕಾರಣ ವನ್ಯಮೃಗಗಳ ಕಾಟವನ್ನು ಈಗಲೂ ಸಹಿಸಿಕೊಂಡಿದ್ದಾರೆ ಹಾಗೂ ಇವತ್ತು ಹುಲಿ ಮನುಷ್ಯನನ್ನು ಕೊಂದಿದೆ, ಇಲ್ಲವೆಂದರೆ ಹುಲಿಯನ್ನೇ ಬೇಟೆಯಾಡುವ ತಾಕತ್ತು ಈಗಲೂ ಈ ಭಾಗದ ಜನರಿಗೆ ಇದೆ. ಈ ಹಿಂದೆ ಹುಲಿಯನ್ನು ಕೊಂದು ಅದರೊಂದಿಗೆ ಮದುವೆ ಮಾಡಿಕೊಂಡ ಕೊಡವರಿಗೆ ಈ ಹುಲಿ ದೊಡ್ಡದೇನು ಅಲ್ಲಾ, ಇಲಾಖೆ ಸಾಧ್ಯವಾಗದಿದ್ದರೆ ಸ್ಥಳೀಯರಿಗೆ ಅನುಮತಿ ನೀಡಿ 24 ಗಂಟೆಯೊಳಗೆ ಅದೇ ನರಭಕ್ಷಕ ಹುಲಿ ಇಲಾಖೆಯ ಅಂಗಳದಲ್ಲಿರುತ್ತದೆ ಎಂದು ಅವರು ಕಿಡಿಕಾರಿದ್ದಾರೆ. ಈಗಾಗಲೇ ಅರಣ್ಯದ ಗಡಿಭಾಗದ ಗುರುತಿಗೆ ಕಲ್ಲುಗಳನ್ನು ಹಾಕುವ ನೆಪದಲ್ಲಿ ಈ ಭಾಗದ ರಸ್ತೆಗಳನ್ನು ಸೇರಿಸಿ ಮಾಲಿಕರುಗಳ ತೋಟದಂಚಿಗೆ ಗಡಿ ಗುರುತಿನ ಕಲ್ಲುಗಳನ್ನು ಹಾಕಿದೆ. ಅರಣ್ಯದ ಗಡಿ ಗುರುತಿಸುವ ಇಲಾಖೆಗೆ ಕಾಡಿನೊಳಗಿರುವ ವನ್ಯ ಮೃಗಗಳು ಆ ಗಡಿದಾಟಿ ರೈತರ ಜಮೀನಿಗೆ ಬಾರದಂತೆ ತಡೆಯಲು ಯೋಜನೆ ರೂಪಿಸಬಹುದಲ್ಲವೇ ಎಂದು ಅವರು ಪ್ರೆಶ್ನೆ ಮಾಡಿದ್ದಾರೆ.
ಇದೀಗ ಅಕಾಲಿಕ ಮಳೆಯ ಕಾರಣ ಮತ್ತೆ ಕಾಫಿ ಕೆಲಸ ತಡವಾಗಿ ಆರಂಭವಾಗಿದೆ ಹಾಗೂ ಹಲವಾರು ತೋಟದ ಮಾಲಿಕರು ನೀರು ಹಾಯಿಸಲು ಸುರು ಮಾಡಿದ್ದಾರೆ, ವರ್ಷದ ಬದುಕನ್ನು ಕಟ್ಟಿಕೊಳ್ಳುವ ಸಮಯದಲ್ಲಿ ಪ್ರತಿವರ್ಷವೂ ರೈತರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಕಳೆದ ಬಾರಿಯೂ ಅಷ್ಟೆ ಬೆಳ್ಳೂರು ಶ್ರೀಮಂಗಲ ವ್ಯಾಪ್ತಿಯಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಬೆಳೆಗಾರ ತತ್ತರಿಸಿದರು. ಇದೀಗ ಕುಟ್ಟಾ ಭಾಗದಲ್ಲಿ ಈ ನರಹಂತಕ ವ್ಯಾಘ್ರನ ಉಪಟಳದಿಂದ ಬೆಳೆಗಾರರು ಕಂಗಾಲಾಗಿದ್ದಾರೆ, ಕಾರ್ಮಿಕರು ಭಯಭೀತರಾಗಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ, ಈಗಾಗಲೇ ಕಾರ್ಮಿಕರ ಸಮಸ್ಯೆಯಿಂದ ಬೆಳೆಗಾರ ಕಂಗಾಲಾಗಿದ್ದಾನೆ, ಕೂಡಲೇ ಈ ನರಹಂತಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಬೇಕಿದೆ ಹಾಗೂ ಇದಕ್ಕೆ ಇನ್ನಷ್ಟು ಸಮಯ ಹಿಡಿದರೆ ರೈತರು ಹಾಗೂ ಸಾರ್ವಜನಿಕರು ರಸ್ತೆಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಎಚ್ಚರಿಸಿದೆ.