ಮಂಡ್ಯ: 12 ನೇ ಶತಮಾನದ ಭವ್ಯತೆಯ ಭಾಗವಾಗಿ ಭವಿಷ್ಯದ ಮತ್ತು ವರ್ತಮಾನ ಭಾರತಕ್ಕೆ ತಮ್ಮದೇ ಆದಂತಹ ವಿಶೇಷವಾದ ದೈವಿಕ ಸಂದೇಶಗಳನ್ನು ನೀಡಿ ಕನ್ನಡ ನಾಡಿನಲ್ಲಿ ಶ್ರೇಷ್ಠತೆಯ ಚೈತನ್ಯವನ್ನು ತಂದು ಕೊಟ್ಟು ಕಾಯಕಕ್ಕೆ ಹೆಚ್ಚು ಒತ್ತು ನೀಡಿದ ಮಹನೀಯರಲ್ಲಿ ನುಲಿಯ ಚಂದಯ್ಯ ನವರು ಒಬ್ಬರು ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್.ನಾಗರಾಜು ತಿಳಿಸಿದರು.
ನಗರ ಕಲಾಮಂದಿರದಲ್ಲಿ ನಡೆದ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಶ್ರೀ ನುಲಿಯ ಚಂದಯ್ಯ ರವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ,12ನೇ ಶತಮಾನದಲ್ಲಿ ಬಸವಣ್ಣನವರ ಸಂಗಡಿಗರಾಗಿ ಅವರು ಮಾಡಿದ ಕ್ರಾಂತಿಗಳಿಗೆ ದೊಡ್ಡ ಭಗವಾಗಿ, ಶೋಷಿತರ ಸಮುದಾಯವನ್ನು ಸಾಂಸ್ಕೃತಿಕ ದಿಕ್ಕಿಗೆ ಕರೆದುಕೊಂಡು ಹೋಗಲು ಕಾರಣಕರ್ತರಾದವರು ನುಲಿಯ ಚಂದಯ್ಯ ನವರು ಎಂದರು.
ರಾಜ್ಯ ಸರ್ಕಾರ ಮೊಟ್ಟ ಮೊದಲ ಬಾರಿಗೆ ನುಲಿಯ ಚಂದಯ್ಯ ರವರ ಜನ್ಮ ದಿನಾಚರಣೆಯನ್ನು ಆಚರಿಸಲು ಆದೇಶಿಸಿದೆ ಅದರಂತೆ ಜಿಲ್ಲೆಯಲ್ಲಿ ಆಚರಿಸುತ್ತಿದೇವೆ. ಬಸವಣ್ಣನವರ ಜೊತೆ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡು ತಮ್ಮದೇ ಆದ ಛಾಪು ಮೂಡಿಸಿದವರು ನುಲಿಯ ಚಂದಯ್ಯ ನವರು. ಅವರ ಕೃತಿ,ವಚನ ತತ್ವಗಳಿಗೆ ದೊಡ್ಡ ವಚನಕಾರರು ಗೌರವ ಸಲ್ಲಿಸಿದ್ದಾರೆ. ಚಂದಯ್ಯ ನವರ ಬಗ್ಗೆ ಓದಿಕೊಂಡಾಗ ಅವರ ಕೊಡುಗೆ ಅರ್ಥವಾಗುತ್ತದೆ ಎಂದರು
ವಿಜಯಪುರ ಜಿಲ್ಲೆಯ ಶಿವಳ್ಳಿ ಎಂಬ ಸಣ್ಣ ಸಮುದಾಯ ದಲ್ಲಿ ಜನಿಸಿದರು. ಉತ್ತಮಕಾಯಕ ಸಂಸ್ಕೃತಿಯನ್ನು ಹೊಂದಿದ್ದರು. ಕಾಯಕ ತತ್ವದ ಮೂಲಕ ಬಂದಂತಹ ಹಣವನ್ನು ಅನುಭವ ಮಂಟಪಕ್ಕೆ ದಾರೆಎರೆದು ಲಿಂಗ, ಜಂಗಮ, ದಾಸೋಹಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದವರು ಶರಣರಾದ ನುಲಿಯ ಚಂದಯ್ಯ ನವರು. ಇದರಿಂದ ಬಸವಣ್ಣನವರಿಗೆ ಬಹಳ ಪ್ರೀತಿ ಪಾತ್ರರಾದರು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಎನ್. ಉದಯಕುಮಾರ್,ನಗರಸಭೆ ಅಧ್ಯಕ್ಷರಾದ ಹೆಚ್.ಎಸ್.ಮಂಜು, ಉಪ ತಹಶೀಲ್ದಾರ್ ವಸಂತ ಕುಮಾರ್, ಜಿಲ್ಲಾ ಕುಳುವ ಸಮಾಜದ ಸಂಸ್ಥಾಪಕ ಅಧ್ಯಕ್ಷರಾದ ತಿರುಮಲಾಪುರ ಕೆ.ಗೋಪಾಲ್,ಹಿರಿಯ ಮುಖಂಡರಾದ ವೆಂಕಟೇಶ್,ಗುರಪ್ಪ, ಕೃಷ್ಣ ಕುಮಾರ್,ಕರಿಯಪ್ಪ, ಸೋಮಶೇಖರ್ ಪುಟ್ಟರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.