ಮಂಡ್ಯ: ಎಲ್ಲೆಡೆ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಕೆರೆಕಟ್ಟೆಗಳು ತುಂಬಿದ್ದರೆ, ನದಿಗಳು ಧುಮ್ಮಿಕ್ಕಿ ಹರಿಯುತ್ತಿವೆ. ಬಹಳಷ್ಟು ಕಡೆಗಳಲ್ಲಿ ನದಿಗೆ ಅಡ್ಡಲಾಗಿ ಕಟ್ಟೆಗಳನ್ನು ಕಟ್ಟಿರುವ ಕಾರಣ ಕಟ್ಟೆ ತುಂಬಿ ಧುಮ್ಮಿಕ್ಕುವ ದೃಶ್ಯ ಸುಂದರವಾಗಿ ಗೋಚರಿಸುತ್ತಿದ್ದು, ಈ ನಿಸರ್ಗ ನೋಟವನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ತಮ್ಮ ಪ್ರಯಾಣ ಬೆಳೆಸುತ್ತಿದ್ದಾರೆ.
ನದಿಗಳು ಮಳೆಗಾಲದಲ್ಲಿ ಸೃಷ್ಠಿಸುವ ನಿಸರ್ಗ ರಮಣೀಯ ತಾಣಗಳು ಮಲೆನಾಡು ಮಾತ್ರವಲ್ಲದೆ, ಬಯಲು ಸೀಮೆಗಳಲ್ಲಿಯೂ ನಾವು ನೋಡಬಹುದಾಗಿದ್ದು, ಇಂತಹ ಪ್ರವಾಸಿ ತಾಣಗಳ ನಡುವೆ ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ಕೆ.ಆರ್.ಪೇಟೆಗೆ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಹೇಮಗಿರಿ ಅಣೆಕಟ್ಟೆ ಕೂಡ ಒಂದಾಗಿದ್ದು, ನಿಸರ್ಗ ಪ್ರೇಮಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ನಿಜವಾಗಿ ಹೇಳಬೇಕೆಂದರೆ, ಹೇಮಗಿರಿ ಅಣೆಕಟ್ಟೆಯಿರುವ ಪ್ರದೇಶ ನಿಸರ್ಗ ಸುಂದರ ತಾಣವಾಗಿದ್ದು, ಪೇಟೆ, ಪಟ್ಟಣದ ಜನಜಂಗುಳಿಯಲ್ಲಿ ಒತ್ತಡದಿಂದ ಕೆಲಸ ಮಾಡುವ ಜನರಿಗೆ ಒಂದಷ್ಟು ಮಾನಸಿಕ ನೆಮ್ಮದಿ ನೀಡುವ ತಾಣವೆಂದರೆ ತಪ್ಪಾಗಲಾರದು, ಕಣ್ಣು ಹಾಯಿಸಿದಷ್ಟು ಜಲರಾಶಿ ಅದರಾಚೆಯಾಗಿ ಶ್ವೇತಧಾರೆಯಾಗಿ ಧುಮ್ಮಿಕ್ಕುವ ಜಲಧಾರೆ, ಬೀಸುವ ತಂಗಾಳಿ ಎಲ್ಲೆಡೆಯೂ ಹರಡಿದ ಹಸಿರು… ಮನುಷ್ಯನೊಬ್ಬ ನೆಮ್ಮದಿಯಾಗಿ ಕಾಲ ಕಳೆಯಲು ಇದಕ್ಕಿಂತ ಇನ್ನೇನು ಬೇಕು?.
ಹೇಮಗಿರಿ ಸಮೀಪದಲ್ಲಿಯೇ ಚಂದಗೋನಹಳ್ಳಿ ಅಮ್ಮನವರ ದೇವಸ್ಥಾನವಿದ್ದು ವಾರದ ನಾಲ್ಕು ದಿನಗಳು ಅಲ್ಲಿ ಪರ, ಬೀಗರ ಔತಣ, ನಾಮಕರಣ, ಸೇರಿದಂತೆ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇನ್ನು ಹೇಮಗಿರಿ ಪ್ರವಾಸಿತಾಣವಾಗಿದ್ದು, ಇತಿಹಾಸ ಪ್ರಸಿದ್ಧವಾದ ದನಗಳ ಜಾತ್ರೆಯೂ ಪ್ರತಿವರ್ಷ ಇಲ್ಲಿ ನಡೆಯುತ್ತದೆ. ಭೃಗ ಮಹರ್ಷಿಗಳು ತಪಸ್ಸು ಮಾಡಿದ ಪವಿತ್ರ ಸ್ಥಳವೂ ಇದಾಗಿದೆ. ಇಷ್ಟೆಲ್ಲ ಇದ್ದರೂ ಈ ತಾಣವನ್ನು ಅಭಿವೃದ್ಧಿ ಮಾಡುವತ್ತ ಯಾರೂ ಚಿತ್ತ ಹರಿಸದಿರುವುದು ಎದ್ದು ಕಾಣುತ್ತಿದೆ. ಅದು ಏನೇ ಇರಲಿ ಧುಮ್ಮಿಕ್ಕುವ ನೀರ ಝರಿ… ಸುತ್ತಲೂ ಹರಡಿ ನಿಂತ ಹಚ್ಚ ಹಸುರಿನ ನಿಸರ್ಗ… ಹೇಮಗಿರಿಯ ವಿಶೇಷತೆಯಾಗಿದ್ದು ಇಲ್ಲಿ ನೆಮ್ಮದಿಯಾಗಿ ಒಂದಷ್ಟು ಕ್ಷಣಗಳನ್ನು ಕಳೆಯಲು ಪ್ರವಾಸಿಗರು ಬರುತ್ತಲೇ ಇರುತ್ತಾರೆ.