ಮೈಸೂರು: ನಗರದ ವಿದ್ಯಾರಣ್ಯಂಪುರಂನ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ನಡೆದಿರುವ ದರೋಡೆಗೆ ಸಂಬಂಧಿಸಿದಂತೆ ಬುಧವಾರ ಕೂಡ ಪರಿಶೀಲನೆ ನಡೆದಿದ್ದು, ಆರೋಪಿಗಳ ಪತ್ತೆಗಾಗಿ ರಚಿಸಿರುವ ತಂಡದ ಪೊಲೀಸರು ಬೆಂಗಳೂರು ಸೇರಿದಂತೆ ವಿವಿಧೆಡೆಗೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಇನ್ನು ನಾಲ್ಕು ದಿನಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವ ಎಲ್ಲ ಸಾಧ್ಯತೆಗಳಿವೆ.
ಸೋಮವಾರ ಮದ್ಯಾಹ್ನ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೆಸ್ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು, ಮಳಿಗೆಯಲ್ಲಿ ಚಿನ್ನಾಭರಣ ದೋಚಿದ್ದಲ್ಲದೆ ಗುಂಡು ಹಾರಿಸಿ ಅಮಾಯಕ ಯುವನೋರ್ವನನ್ನು ಹತ್ಯೆಗೈದಿದ್ದರು.ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೆಸ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆ ಮಾಡಿದವರು ಅನ್ಯ ರಾಜ್ಯದವರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೂ ಕೂಡ ಆರೋಪಿಗಳು ಇನ್ನು ರಾಜ್ಯದ ಗಡಿಯ ಒಳಗೇ ಇರಬಹುದು ಎಂಬ ಅನುಮಾನದ ಮೇಲೆ ಪೊಲೀಸರು ಬೆಂಗಳೂರು ಹಾಗೂ ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಆರೋಪಿಗಳ ಬೆನ್ನು ಹತ್ತಿದ ಪೊಲೀಸರ ತಂಡ ಪ್ರಾರಂಭಿಕ ಯಶಸ್ಸು ಪಡೆದಿದ್ದಾರೆ ಎನ್ನಲಾಗಿದೆ. ಆರೋಪಿಗಳ ಬಗ್ಗೆ ಮಹತ್ವದ ಸುಳಿವನ್ನು ಪಡೆದಿರುವ ಪೊಲೀಸರ ತಂಡ ಅವರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಹಗಲಿರುಳೆನ್ನದೆ ತನಿಖೆ ನಡೆಸುತ್ತಿರುವ ಪೊಲೀಸರು ಆದಷ್ಟು ಶೀಘ್ರವಾಗಿ ದುಷ್ಕರ್ಮಿಗಳನ್ನು ಬಂಧಿಸುವ ಹುಮ್ಮಸ್ಸಿನಲ್ಲಿದ್ದಾರೆ.ಇನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೆಸ್ ಮಾಲೀಕ ಧರ್ಮೇಂದ್ರ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಚಿನ್ನದಂಗಡಿ ದರೋಡೆ, ಶೂಟೌಟ್ ಪ್ರಕರಣ: ತನಿಖೆ ಚುರುಕು, 4 ದಿನಗಳಲ್ಲಿ ಆರೋಪಿಗಳ ಬಂಧನ ಸಾಧ್ಯತೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.