ಮೈಸೂರು: ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಮಹಾರಾಜ ಕಾಲೇಜು ಯುವರಾಜ ಕಾಲೇಜಿನ ಯುವಕರಿಗೆ ಅಗ್ನಿಪಥ್ ಯೋಜನೆಯ ಉಪಯೋಗಗಳ ಮಾಹಿತಿಯ ಕರಪತ್ರ ನೀಡುವ ಮೂಲಕ ಅಗ್ನಿಪಥ್ ಯೋಜನೆಗೆ ಬೆಂಬಲಿಸಿ ಯುವಕರು ದೇಶ ಸೇವೆಗೆ ಮುಂದಾಗಿ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ದೇಶದ ರಕ್ಷಣೆ ಮತ್ತು ಯುವ ಸಮುದಾಯದ ಭವಿಷ್ಯದ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯನ್ನು ಕೆಲವರು ರಾಜಕೀಯವಾಗಿ ಮತ್ತು ಪ್ರಚಾರದ ತೆವಲಿಗಾಗಿ ವಿರೋಧಿಸುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ದೇಶಸೇವೆ ಮಾಡಿ ನಿವೃತ್ತಿಯ ನಂತರ ಎಲ್ಲರಿಗೂ ವಿವಿದೆಢೆ ಉದ್ಯೋಗ ಸಿಗುವ ರೀತಿಯಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಯಾವ ಹಂತದಲ್ಲೂ ಯುವಕರಿಗೆ ಮೋಸವಾಗುವದಿಲ್ಲ ಕೆಲವರು ಸುಳ್ಳು ಆರೋಪಗಳನ್ನು ನಂಬಲು ಹೋಗಬಾರದು. ಅಗ್ನಿಪಥ್ ಯೋಜನೆಗೆ ಬೆಂಬಲ ನೀಡಿ ಅರ್ಹತೆ ಪಡೆದಿರುವ ಎಲ್ಲ ಯುವಕರು ಸೈನ್ಯಕ್ಕೆ ಸೇರಿ ಎಂದು ಕರೆ ನೀಡಿದರು
ಪ್ರಜ್ಞಾವಂತ ನಾಗರಿಕ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಮಾತನಾಡಿ, ಅನ್ಯ ರಾಷ್ಟ್ರಗಳಲ್ಲೂ ಸಹ ಇಪ್ಪತ್ತು ವರ್ಷ ತುಂಬಿದ ಪ್ರತಿಯೊಬ್ಬ ಯುವಕರು 2ವರ್ಷ ಸೈನಿಕ ಶಿಕ್ಷಣ ಪಡೆಯುವುದು ಕಡ್ಡಾಯವಾಗಿದೆ. ನಮ್ಮ ದೇಶದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ವಿವಿಧ ಉದ್ಯೋಗಕ್ಕೆ ಮೀಸಲಾತಿ ನೀಡುತ್ತಾರೆ. ಪ್ರತಿಯೊಬ್ಬ ಭಾರತೀಯನಿಗೂ ಮೊದಲು ದೇಶ ಸಂರಕ್ಷಣೆ ವಿಚಾರಕ್ಕೆ ಕೈಜೋಡಿಸಬೇಕು ಎಂದರು.
ಸಿಆರ್ ಪಿಎಫ್ ಹಾಗೂ ಅಸ್ಸಾಂ ರೈಫಲ್ ನಲ್ಲಿ ಅಗ್ನಿ ವೀರ್ ಗಳಿಗೆ ಶೇ. 10ರಷ್ಟು ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಆಯಾಯ ರಾಜ್ಯ ಸರ್ಕಾರಗಳು ಸಹ ಪೊಲೀಸ್ ನೇಮಕಾತಿಯಲ್ಲಿ ನಿವೃತ್ತ ಸೈನಿಕರಿಗೆ ಪ್ರಥಮ ಆದ್ಯತೆ ನೀಡಲು ಮುಂದಾಗಿವೆ .ಆದ್ದರಿಂದ ಅಗ್ನಿಪಥ್ ಯೋಜನೆ ದೇಶ ಸೇವೆ ಮಾಡಲಿಕ್ಕೆ ಯುವ ಜನಾಂಗಕ್ಕೆ ಸಿಕ್ಕಿರುವ ಒಳ್ಳೆಯ ಸಮಯ ಸದ್ಭಳಕೆ ಮಾಡಿಕೊಳ್ಳುವಲ್ಲಿ ಯುವಕರು ಮುಂದಾಗಬೇಕಿದೆ ಎಂದು ಮನವಿ ಮಾಡಿದರು.