ಮೈಸೂರು: ಶಿಕ್ಷಕರು ವಿದ್ಯಾರ್ಥಿಗಳ ಬೌದ್ಧಿಕ ಪೋಷಕರಿದ್ದಂತೆ. ಉತ್ತಮ ಶಿಕ್ಷಕರು ಜ್ಞಾನದೊಂದಿಗೆ ಮೌಲ್ಯಯುತವಾದ ಬದುಕನ್ನು ರೂಪಿಸಲು ಮಾರ್ಗದರ್ಶನ ತೋರುವ ಗುರುಗಳಾಗಿರುತ್ತಾರೆ ಎಂದು ಶಾರದಾ ವಿಲಾಸ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಹನುಮಂತಾಚಾರ್ ಜೋಶಿ ಹೇಳಿದರು.
ನಗರದ ವಿಜಯ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ . ಮಾತನಾಡಿದ ಅವರು, ಡಾ. ರಾಧಾಕೃಷ್ಣನ್ ಅಂತಹ ಮಹಾನ್ ಸಾಧಕರು ತಮ್ಮ ಸರಳತೆ ಮತ್ತು ಕಾರ್ಯಕ್ಷಮತೆಯಿಂದ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಸಂಪೂರ್ಣ ಪರಿಶ್ರಮ ಮತ್ತು ಆಸಕ್ತಿಯಿಂದ ಪ್ರಯತ್ನಿಸಿದಲ್ಲಿ ಯಶಸ್ಸು ದೊರಕಲಿದೆ ಎಂದರು.
ವಿದ್ಯಾರ್ಜನೆಯೊಂದಿಗೆ ಬಿಡುವಿನ ವೇಳೆಯಲ್ಲಿ ಒಳ್ಳೆಯ ಪುಸ್ತಕವನ್ನು ಓದುವುದು ಮತ್ತು ಅದರಿಂದ ಪ್ರೇರಣೆ ಪಡೆಯುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ವರ್ತನೆಯಲ್ಲಿ ವಿನಯವಿರಬೇಕು, ಮಾತಿನಲ್ಲಿ ಸಿಹಿ ಇರಬೇಕು ಮತ್ತು ಮನಸ್ಸಿನಲ್ಲಿ ರಾಷ್ಟ್ರಪ್ರೇಮ ನಿರಂತರವಾಗಿರಬೇಕು. ಇಂತಹ ಸದ್ಗುಣಗಳುಳ್ಳವನಿಗೆ ಎಲ್ಲೆಡೆಯೂ ಮನ್ನಣೆ ಮತ್ತು ಗೌರವ ದೊರೆಯುತ್ತದೆ. ವಿಜ್ಞಾನ ಕ್ಷೇತ್ರ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಹೊಂದಿರಬೇಕು. ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾಗಬೇಕು ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ಮಾತನಾಡಿ ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಹಣದ ಹಿಂದೆ ಬೀಳದೆ ಮೌಲ್ಯಯುತವಾದ ಜೀವನ ಶೈಲಿಯಿಂದ ಯಶಸ್ವಿಗಳಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ. ಹನುಮಂತಾಚಾರ್ ಜೋಶಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಸತ್ಯಪ್ರಸಾದ್, ಉಪನ್ಯಾಸಕರಾದ ಕೆ.ಎಸ್. ಪ್ರದೀಪ್, ಮಯೂರಲಕ್ಷ್ಮಿ, ಅನ್ನಪೂರ್ಣರಾವ್ ಅವರು ಉಪಸ್ಥಿತರಿದ್ದರು.
ಮೇಘನಾ ಪ್ರಾರ್ಥಿಸಿ, ರಿಚಾ ಥಾಮಸ್ ನಿರೂಪಿಸಿ, ಪ್ರಾರ್ಥನಾ ಸ್ವಾಗತಿಸಿ, ಗೌರಂಗ್ ಲೂಥ್ರಾ ವಂದಿಸಿ, ದೀಪಕ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು.