ಮೈಸೂರು: ಮೈಸೂರು ದಸರಾದ ಆಕರ್ಷಣೆಯಲ್ಲಿ ಒಂದಾದ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಫಲಪುಷ್ಪ ಪ್ರದರ್ಶನವು ತೋಟಗಾರಿಕಾ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ, ಕರ್ಜನ್ ಪಾರ್ಕ್ ಮೈಸೂರು ರವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿದ್ದು ಸಾರ್ವಜನಿಕರು ಸ್ಪರ್ಧೆಗಳಲ್ಲಿ ಭಾಗವಹಿಸಲು ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕಾ ಸಂಘ ಕರ್ಜನ್ ಪಾರ್ಕ್ ಅವರ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ.
ಫಲಪುಷ್ಪ ಪ್ರದರ್ಶನದಲ್ಲಿ ಸೆ. 27 ರಂದು ಬೆಳಗ್ಗೆ 10 ಗಂಟೆಗೆ ಚುಕ್ಕಿ ರಂಗೋಲಿ ಸ್ಪರ್ಧೆಯನ್ನು, ಸೆ.28 ರಂದು ಬೆಳಗ್ಗೆ 10 ಗಂಟೆಗೆ ಪುಷ್ಪ ರಂಗೋಲಿ ಸ್ಪರ್ಧೆ, ಸೆ.29 ರಂದು ಬೆಳಗ್ಗೆ 10 ಗಂಟೆಗೆ ತರಕಾರಿ ಕೆತ್ತನೆಯ ಸ್ಪರ್ಧೆ, ಸೆ.30 ರಂದು ಬೆಳಗ್ಗೆ 10 ಗಂಟೆಗೆ ಭಾರತೀಯ ಪುಷ್ಪಕಲಾ ಸ್ಪರ್ಧೆ, ಅ. 01 ರಂದು ಬೆಳಗ್ಗೆ 10 ಗಂಟೆಗೆ ikebana ಸ್ಪರ್ಧೆಯನ್ನು, ಅ.02 ರಂದು ಬೆಳಗ್ಗೆ 10 ಗಂಟೆಗೆ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಜಿಲ್ಲಾ ತೋಟಗಾರಿಕೆಯ ಸಂಘದ ಪದನಿಮಿತ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.