ಮೈಸೂರು: ಬಾಲ ಕಾರ್ಮಿಕತೆ ಕಿಶೋರ ಕಾರ್ಮಿಕತೆ ಸಮಸ್ಯೆಗಳು ಸೇರಿದಂತೆ ಇಂದು ನಮ್ಮ ನಾಗರೀಕ ಸಮಾಜಕ್ಕೆ ಬಹುದೊಡ್ಡ ಸವಾಲಾಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿಯಂತ್ರಿಸಲು ಹಾಗೂ ತಳಮಟ್ಟದಿಂದ ಸಂಪೂರ್ಣವಾಗಿ ತೊಡೆದು ಹಾಕಲು ಸರ್ಕಾರದೊಡನೆ ಯುವಜನರು ಮತ್ತು ವಿದ್ಯಾರ್ಥಿಗಳ ಸಹಿತ ಸಮಸ್ತ ನಾಗರಿಕರೂ ಕೈಜೋಡಿಸಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಲಕ್ಷ್ಮಿ ವಿಲಾಸ ರಸ್ತೆಯಲ್ಲಿರುವ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರು ವಿಭಾಗದ ಕಾರ್ಮಿಕ ಇಲಾಖೆ ಏರ್ಪಡಿಸಿದ್ದ ಬಾಲ ಕಾರ್ಮಿಕತೆ, ಕಿಶೋರ ಕಾರ್ಮಿಕತೆ ನಿಷೇಧ ಹಾಗೂ ನಿಯಂತ್ರಣ, ಮಾನವ ಕಳ್ಳ ಸಾಗಾಣಿಕೆ,ಭಿಕ್ಷಾಟನೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಾಗೂ ಸ್ವಯಂ ರಕ್ಷಣೆಯ ಬಗ್ಗೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಸಮಸ್ಯೆ ಮತ್ತು ತೊಂದರೆಗಳಿಗೂ ಸರ್ಕಾರವನ್ನೇ ಕಾಯದೆ ತಾವೇ ಸ್ವತಃ ಬಗೆಹರಿಸಿಕೊಂಡು ವಿಶೇಷವಾಗಿ ಸ್ವಯಂರಕ್ಷಣೆ ಮಾಡಿಕೊಳ್ಳುವತ್ತ ಜನ ಜಾಗೃತರಾಗಬೇಕೆಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುತ್ತೇವೆ. ಹಾಗೆಯೇ ಅಂತಹ ಮಕ್ಕಳನ್ನು ಭವಿಷ್ಯದ ಸತ್ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿಯನ್ನು ಅವನಿವನು, ಅವರಿವರನ್ನದೆ ಎಲ್ಲರೂ ಹೊರಬೇಕಾಗಿದೆ. ಇಲ್ಲವೆಂದರೆ ಮಕ್ಕಳು ದಾರಿ ತಪ್ಪಿ ವಿದ್ಯೆಯಿಲ್ಲದೆ, ಬುದ್ಧಿ ಇಲ್ಲದೆ, ವಿವೇಕವಿಲ್ಲದೆ, ಬಾಲಕಾರ್ಮಿಕರಾಗಿ, ಕಿಶೋರ ಕಾರ್ಮಿಕರಾಗಿ, ಬಾಲಾಪರಾಧಿಗಳಾಗಿ ಕೊನೆಗೆ ಭಿಕ್ಷುಕರಾಗಿ ಅವರಿಗೆ ಸರಿಯಾದ ಬದುಕಿಲ್ಲದೆ ಮುಂದೊಂದು ದಿನ ದೇಶವನ್ನು ಹಾಳು ಮಾಡುವ ದುಷ್ಟರಾಗುವ ಅಪಾಯವಿದೆ. ಆದ್ದರಿಂದ ಶಿಕ್ಷಣದಿಂದ ದೂರ ಉಳಿದಿರುವ ಮಕ್ಕಳನ್ನು ಮನವೊಲಿಸಿ ಅವರ ಪೋಷಕರಿಗೆ ತಿಳಿಹೇಳಿ ವಿದ್ಯಾರ್ಥಿಗಳೇ ಕರೆತಂದು ಸುಶಿಕ್ಷಿತರನ್ನಾಗಿಸ ಬೇಕೆಂದ ಅವರು, ವಿಶೇಷವಾಗಿ ಮೈಸೂರು ವಿಭಾಗದ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಕುಮಾರಿ ನಾಜಿಯಾ ಸುಲ್ತಾನರ ಸಾರಥ್ಯದಲ್ಲಿ ಬಹಳ ಕಾಳಜಿಯಿಂದ ಹೆಣ್ಣು ಮಕ್ಕಳೇ ಕಲಿಯುತ್ತಿರುವ ಇಂತಹ ಕಾಲೇಜಿನಲ್ಲಿ ಸ್ವಯಂರಕ್ಷಣೆಯ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಗಿಡಕ್ಕೆ ನೀರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿಗಳೂ ಆದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಅವರು ಮಾತನಾಡಿ, ಜಗತ್ತಿನಲ್ಲಿ ಏನನ್ನೂ ನಿರೀಕ್ಷೆ ಮಾಡದವರೆಂದರೆ ಅವರು ತಂದೆ-ತಾಯಿಗಳು ಮತ್ತು ಶಿಕ್ಷಕರು ಮಾತ್ರ.ಆದರೆ ಅವರು ವಿದ್ಯಾರ್ಥಿಗಳಾದ ನಿಮ್ಮ ಮೇಲೆ ಬಹಳ ನಿರೀಕ್ಷೆ ಇಟ್ಟು ಕೊಂಡಿರುತ್ತಾರೆ. ಹಾಗಾಗಿ ಅವರ ನಿರೀಕ್ಷೆಯಂತೆ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಆದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವರಾಜ ಭೂತೆ ಹಾಗೂ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ಕುಮಾರಿ ನಾಜಿಯಾ ಸುಲ್ತಾನ ಅವರುಗಳು ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ತಮ್ಮನ್ನು ತಾವು ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ವಿ.ಸೋಮಣ್ಣ ಪ್ರಾಸ್ತಾವಿಕ ವಾಗಿ ಮಾತನಾಡಿದರು ಅಧ್ಯಾಪಕರಾದ ಡಾ. ಸಿ. ತೇಜೋವತಿ, ಮಹೇಶ್, ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು. ಅಪಾಯಗಳ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಯಾವ ರೀತಿ ಸ್ವಯಂರಕ್ಷಣೆ ಮಾಡಿಕೊಳ್ಳಬಹುದೆಂಬುದರ ಬಗ್ಗೆ ಅಂತರಾಷ್ಟ್ರೀಯ ಖ್ಯಾತಿಯ ಯೋಧ ಮಾರ್ಷಲ್ ಅಕಾಡೆಮಿಯ ರಾಕೇಶ್ ಯಾದವ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.