ಮೈಸೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ ಯುವಕನ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗಪುರ ಗ್ರಾಮದ 21 ವರ್ಷದ ಎಸ್.ಎ.ಸಚಿನ್ ಈಚೆಗೆ ಅಪಘಾತಕ್ಕೀಡಾಗಿ ಮೆದುಳಿನ ತೀವ್ರ ರಕ್ತಸ್ರಾವದಿಂದ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ರೋಗಿಯ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಮತ್ತು ಬದುಕುಳಿಯುವ ಸಾಧ್ಯತೆ ಬಗ್ಗೆ ಪೋಷಕರಿಗೆ ವಿವರಿಸಿದರು. ಹೀಗಾಗಿ ಅಂಗಾಂಗ ದಾನ ಪ್ರಕ್ರಿಯೆಗೆ ಯುವಕನ ಕುಟುಂಬಸ್ಥರು ಸಮ್ಮತಿ ಸೂಚಿಸಿದರು.
ವೈದ್ಯರ ತಂಡ ಯುವಕನ ಹೃದಯ, ಎರಡು ಕಾರ್ನಿಯಾ (ಕಣ್ಣುಗಳು), ಎರಡು ಕಿಡ್ನಿ ಮತ್ತು ಲಿವರ್ ಕೊಯಲು ಮಾಡಿ ಅವಶ್ಯಕತೆಯಿದ್ದ ರೋಗಿಗಳಿಗೆ ಕಸಿಮಾಡಲು ಹೃದಯವನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆ ಮತ್ತು ಒಂದು ಕಿಡ್ನಿ ಮತ್ತು ಲಿವರ್ ಅನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಗ್ರೀನ್ ಕಾರಿಡಾರ್ ಮುಖಾಂತರ ರವಾನಿಸಲಾಯಿತು. ಕಾರ್ನಿಯಾ (ಕಣ್ಣುಗಳು)ಗಳ ಅವಶ್ಯಕತೆಯಿದ್ದವರು ಈ ಸಂದರ್ಭದಲ್ಲಿ ಸಿಗದ ಕಾರಣ, ಎರಡೂ ಕಾರ್ನಿಯಾಗಳನ್ನು ಬೆಂಗಳೂರಿನ ಲಯನ್ಸ್ ಆಸ್ಪತ್ರೆಗೆ ರವಾನಿಸಲಾಯಿತು.