ಮೈಸೂರು: ಮನುಷ್ಯ ಜನ್ಮಪಡೆಯುವುದು ಬದುಕಿನ ಸಾರ್ಥಕತೆ ಭಾಗವೆನ್ನಲಾಗಿದ್ದು, ಭಗವಂತನು ಕೊಟ್ಟ ವರಪ್ರಸಾದ ಹುಟ್ಟಿದ ಪ್ರತಿಯೊಬ್ಬನೂ ತನ್ನ ಜೀವವನ್ನು ಸಾರ್ಥಕಪಡಿಸಿಕೊಳ್ಳಲು ಎಲ್ಲರನ್ನು ಸಮಾನತೆಯಿಂದ ನೋಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ಸಂಸ್ಥಾಪಕ ಎಚ್.ಜಿ.ಗಿರಿಧರ್ ತಿಳಿಸಿದರು.
ಕಲ್ಯಾಣಗಿರಿಯ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನ ವತಿಯಿಂದ ವಿಷ್ಣು ದೀಪೋತ್ಸವ ಪ್ರಯುಕ್ತ ಲಕ್ಷ ದೀಪೋತ್ಸವ ಹಾಗೂ 5000 ಮಹಿಳೆಯರಿಂದ ಏಕಕಾಲಕ್ಕೆ ದೀಪಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರ ಪೂಜೆ, ಧಾರ್ಮಿಕ ಕಾರ್ಯಕ್ರಮ, ಹವನ, ಹೋಮ, ಆಧ್ಯಾತ್ಮಿಕ ಚಿ೦ತನೆ, ಸಾಮಾಜಿಕ ಸೇವಾಚಟುವಟಿಕೆಗಳು, ಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಸಮಾಜದ ಎಲ್ಲರನ್ನೂ ಸಮಾನತೆಯಿಂದ ನೋಡುವ ಮುಂತಾದ ಗುಣಗಳ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನಮ್ಮೆಲ್ಲರ ಬದುಕಿಗೆ ಹೆಚ್ಚು ಚೈತನ್ಯ ತುಂಬುವ ಶಕ್ತಿ ಆಧ್ಯಾತ್ಮಿಕ ಚಿಂತನೆಯಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಬಸವ ಮೂರ್ತಿ ಮಾಧಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಸಹಾಸ್ರಾರು ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿರುವ ಈ ಸೌಹಾರ್ದ, ಸಾಮರಸ್ಯವನ್ನ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ದೇಶದ ನಾಗರಿಕರ ಮುಂದೆ ಇದೆ. ಇದು ಉಳಿದಾಗಲಷ್ಟೆ ದೇಶದ ಏಕತೆ ಮತ್ತು ಸಮಗ್ರತೆ ಉಳಿಯಲು ಸಾಧ್ಯ, ಸಂವಿಧಾನದ ಆಶಯಗಳು ಮುಂದುವರೆಯಲಿಕ್ಕೆ ಸಾಧ್ಯ, ಪ್ರಜಾಸತ್ತೆ ಉಳಿಯಲು ಸಾಧ್ಯ, ದೇಶದ ಅಭಿವೃದ್ಧಿಯಾಗಲು ಸಾಧ್ಯ. ಇದೆಲ್ಲವೂ ಸಾಧ್ಯವಾಗಬೇಕಾದರೆ ಎಲ್ಲರೂ ಒಗ್ಗೂಡಿ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.
ಇದೇ ವೇಳೆ 5000 ಭಕ್ತರಿಗೆ 25 ಲೀಟರ್ ವಾಟರ್ ಬಾಟಲ್ ವಿತರಿಸಲಾಯಿತಲ್ಲದೆ, ಪ್ರಸಾದ ವಿನಿಯೋಗಿಸಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್,ಆರ್ ಎಸ್ ಎಸ್ ಪ್ರಾಂತ್ಯ ಕಾರ್ಯಕಾರಿ ಸದಸ್ಯರಾದ ವೆಂಕಟರಾಮ್, ಬಿಜೆಪಿ ನಗರಾಧ್ಯಕ್ಷರಾದ ಟಿ ಎಸ್ ಶ್ರೀ ವತ್ಸ, ಬಿಜೆಪಿ ಮುಖಂಡರಾದ ಹೆಚ್ ವಿ ರಾಜೀವ್, ಅನಿಲ್ ಥಾಮಸ್, ಜೋಗಿ ಮಂಜು, ಜಯರಾಮ್ ಹಾಗೂ ಇನ್ನಿತರರು ಇದ್ದರು.