ಮೈಸೂರು: ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ನೀಡಲಾಗುವ ‘ಕುವೆಂಪು ಗೌರವ ಪುರಸ್ಕಾರ’ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಹಿರಿಯ ಸಾಹಿತಿ ಹಾಗೂ ಜಾನಪದ ವಿದ್ವಾಂಸರಾದ ಡಾ. ರಾಮೇಗೌಡ (ರಾಗೌ) ಆಯ್ಕೆಯಾಗಿದ್ದಾರೆ ಎಂದು ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.
ಬಹುಶ್ರುತ ಪ್ರತಿಭಾವಂತ ವಿದ್ವಾಂಸರರಾಗಿರುವ ಡಾ. ರಾಗೌ ಅವರು ಕಾವ್ಯ, ವಿಮರ್ಶೆ, ಸಂಶೋಧನೆ, ಸಂಪಾದನೆ ಹಾಗೂ ಜಾನಪದ ಸಾಹಿತ್ಯ ಪ್ರಕಾರಗಳಲ್ಲಿ ನಲವತ್ತಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಯಾತ್ರೆ, ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಆರದಿರಲಿ ಈ ಬೆಳಕು, ಮಾತು ಮಾರ್ಗ, ನಿನ್ನೆ ನಾಳೆಗಳ ನಡುವೆ (ಸಮಗ್ರ), ದೊರೆ ದುರ್ಯೋಧನ, ಕುಮಾರ ರಾಮ, ಕಂದನ ಕವನಗಳು, ಕಾವ್ಯಾನುಶೀಲನ, ಅವಗಾಹನ, ಕುವೆಂಪು ಸಾಹಿತ್ಯ ವಿಮರ್ಶನ, ಲಕ್ಷೀಶನ ಕಾವ್ಯ ಪ್ರವೇಶ, ರನ್ನನ ಕಾವ್ಯಾಧ್ಯಯನ, ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು, ಕಿಟ್ಟೆಲ್ ಕೋಶದ ಗಾದೆಗಳು, ಕರ್ಣಾಟಕದ ಜನಪದ ಕಥೆಗಳು, ನಮ್ಮ ಒಗಟುಗಳು, ಜನಪದ ನಂಬಿಕೆಗಳು, ಕನ್ನಡ ಶಿಶು ಪ್ರಾಸಗಳು, ಜನಪದ ರಾಮಾಯಣ, ಜಾನಪದ ಸಂಕೀರ್ಣ, ಜನಪದ ಸಾಹಿತ್ಯ ರೂಪಗಳು, ಜಾನಪದ ಸಂಶೋಧನ ಮೊದಲಾದ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಹೊಸ ಕಸುವು ತುಂಬಿದ್ದಾರೆ.
ಸಾಹಿತ್ಯ, ಸಂಶೋಧನೆ ಹಾಗೂ ಜಾನಪದ ಕ್ಷೇತ್ರದಲ್ಲಿ ಡಾ. ರಾಗೌ ಸಲ್ಲಿಸಿರುವ ಅಗಾಧವಾದ ಸೇವೆಯನ್ನು ಪರಿಗಣಿಸಿ ‘ಕುವೆಂಪು ಗೌರವ ಪುರಸ್ಕಾರ’ ನೀಡಲಾಗುತ್ತಿದ್ದು, ಡಿ. ೧೮ ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ‘ಕುವೆಂಪು ದರ್ಶನ ಮತ್ತು ಪ್ರಸ್ತುತತೆ’ ವಿಚಾರ ಸಂಕಿರಣದ ಸಮಾರೋಪದಲ್ಲಿ ಖ್ಯಾತ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.