ಮೈಸೂರು: ಮೈಸೂರಿನ ರಂಗಯಾನ ಟ್ರಸ್ಟ್ ಮತ್ತು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ನಡೆದ ಎರಡು ದಿನಗಳ ಮುಸ್ಸಂಜೆ ಮಕ್ಕಳ ರಂಗೋತ್ಸವ ಪ್ರೇಕ್ಷಕರ ಮನರಂಜಿಸಿತು.
ಕಾರ್ಯಕ್ರಮವನ್ನು ಬಣ್ಣ ಮತ್ತು ಅರಗು ಕಾರ್ಖಾನೆಯ ನಿಕಟಪೂರ್ವ ಅಧ್ಯಕ್ಷ ಎನ್.ವಿ ಫಣೇಶ್ ಉದ್ಘಾಟಿಸಿ ಮಾತನಾಡಿ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳು ದಿನಪ್ರತಿ ನಡೆಯುತ್ತಿರುತ್ತವೆ ಆದರೆ ಗ್ರಾಮಮಟ್ಟದಲ್ಲಿ ಅದರಲ್ಲಿಯೂ ಮೂರು ತಾಲ್ಲೂಕು ಮಟ್ಟದ ಶಾಲಾ ಮಕ್ಕಳನ್ನು ಸಂಘಟಿಸಿ ಅವರನ್ನು ವೇದಿಕೆಗೆ ತರುವ ಮೂಲಕ ಆಧುನಿಕ ರಂಗಭೂಮಿಯನ್ನು ಪರಿಚಯಿಸುತ್ತಿರುವ ರಂಗಯಾನ ಟ್ರಸ್ಟ್ ಮೈಸೂರು ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ರಮ್ಯ ಮತ್ತು ತಂಡ ದವರಿಂದ ಡೊಳ್ಳು ಕುಣಿತದ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಮತ್ತು ಪ್ರೇಕ್ಷಕರನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಿಂದ ವೇದಿಕೆಯವರೆಗೆ ಕಲಾತಂಡದ ಮೆರವಣಿಗೆಯೊಂದಿಗೆ ಕರೆತರಲಾಯಿತು. ನಂತರ ಶ್ರೀಮತಿ ರಾಧಾ ಕೊಡಗು ಮತ್ತು ತಂಡ ವಿರಾಜಪೇಟೆ ಅವರಿಂದ ಮಕ್ಕಳ ಅಭಿನಯ ಗೀತೆ, ಶ್ರೀ ನಟರಾಜ ಪರ್ಫಾಮಿಂಗ್ ಆರ್ಟ್ ಸೋಟರ್ ಮಕ್ಕಳಿಂದ ನೃತ್ಯರೂಪಕ, ನಂತರ ಶ್ರೀ ಲಕ್ಷ್ಮಿ ನರಸಿಂಹ ಶಾಲೆ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಜೀವನ ಚರಿತ್ರೆ ಆಧಾರಿತ ಮಂಜು ಭಗತ್ ನಿರ್ದೇಶನದ ‘ನಮ್ಮ ನಡಿಗೆ ಸ್ವಾತಂತ್ರ್ಯದ ಕಡೆಗೆ”ಎಂಬ ನಾಟಕ ಪ್ರದರ್ಶನ ವಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ.ಪಂ ಸದಸ್ಯರಾದ ಡಿ.ಎಂ.ಲೋಕೇಶ್, ಯೋಗಮಾರ್ತಿ, ನಾಗಮ್ಮ ಗ್ರಾಮದ ಮುಖಂಡರಾದ ವೀರಭದ್ರಸ್ವಾಮಿ, ನಂಜಪ್ಪ, ಮುಕುಂದಾಚಾರಿ, ಲಕ್ಷ್ಮೀ ನರಸಿಂಹ ಶಾಲೆಯ ಮುಖ್ಯ ಶಿಕ್ಷಕಿ ನಾಗಮ್ಮ, ಬ್ಯಾಂಕ್ ಮಿತ್ರ ವೀರಭದ್ರಸ್ವಾಮಿ ಮತ್ತು ರಂಗಯಾನ ಟ್ರಸ್ಟ್ ಮೈಸೂರು ಅಧ್ಯಕ್ಷ ವಿಕಾಸ್ ಚಂದ್ರ ಹಾಜರಿದ್ದರು.
ಎರಡನೇ ದಿನದ ಕಾರ್ಯಕ್ರಮದಲ್ಲಿ ನಟರಾಜು ಹೆಚ್ ಮತ್ತು ಶಂಭು ಮತ್ತು ತಂಡದವರಿಂದ ಜಾನಪದ ಗೀತ ಗಾಯನ ಕಾರ್ಯಕ್ರಮ ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯರ್ಥಿಗಳು ಅಭಿನಯಿಸುವ ಬಿ.ವಿ ಕಾರಂತರ ಪಂಜರ ಶಾಲೆ ನಾಟಕವನ್ನು ತ್ಯಾಗರಾಜು ದೇವರಹಳ್ಳಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು.
ಮೈಸೂರಿನ ಮಹಿಳಾ ಚೆಂಡೆ ಕಲಾತಂಡದವರಿಂದ ಚಂಡೆ ವಾದ್ಯ ಕಾರ್ಯಕ್ರಮದ ತರುವಾಯ ಕ್ಯಾತನಹಳ್ಳಿಯ ಶ್ರೀ ದಯಾಶಂಕರ ಗುರುಕುಲದ ಶ್ರಮದ ಮಕ್ಕಳು ಡಾ.ಚಂದ್ರಶೇಖರ ಕಂಬಾರರ ಆಲೀಬಾಬ ಮತ್ತು ನಲವತ್ತು ಕಳ್ಳರು ನಾಟಕವನ್ನು ಪ್ರದರ್ಶನ ಮಾಡುವ ಮೂಲಕ ಮುಸ್ಸಂಜೆ ಮಕ್ಕಳ ರಂಗೋತ್ಸವ” ಕಾರ್ಯಕ್ರಮ ಸಂಪನ್ನ ಗೊಂಡಿತು.