ಮೈಸೂರು: ಸತ್ಯವನ್ನು ತಿರುಚಿ ಮಾಡಿರುವ ಬಿಬಿಸಿ ಸಾಕ್ಷ್ಯಚಿತ್ರವನ್ನೂ ಸಿದ್ದರಾಮಯ್ಯನವರೂ ವಿರೋಧಿಸಬೇಕು. ದೇಶದಲ್ಲಿ ಆಂತರಿಕವಾಗಿ ಭಿನ್ನಾಭಿಪ್ರಾಯಗಳೇನೇ ಇದ್ದರೂ, ದೇಶದ ಗೌರವದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ಅವರು ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಬಿಸಿ ಸಾಕ್ಷ್ಯ ಚಿತ್ರ ನಿರ್ಬಂಧ ಮಾಡುವ ಕುರಿತು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಇದು ಇಡೀ ದೇಶದ ಗೌರವದ ಪ್ರಶ್ನೆ. ಉದ್ದೇಶಪೂರ್ವಕವಾಗಿ ಚರಿತ್ರೆ ಬದಲಾವಣೆ ಮಾಡಿ, ದೇಶದ ಚಾರಿತ್ರ್ಯ ಹರಣ ಮಾಡುವಾಗ ಜನ ಸಹಜವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಸತ್ಯ ತಿರುಚಿ ಮಾಡಿರುವ ಈ ಸಾಕ್ಷ್ಯಚಿತ್ರವನ್ನು ಸಿದ್ದರಾಮಯ್ಯನವರೂ ವಿರೋಧ ಮಾಡಬೇಕು. ರಾಜಕೀಯವಾಗಿ ಭಿನ್ನಾಭಿಪ್ರಾಯ ಇದ್ದರೂ, ದೇಶದ ಗೌರವದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ನುಡಿದರು.
ಕಾಗಿನೆಲೆ ಶ್ರೀಗಳು ನಮ್ಮ ಗುರುಗಳು
ಕಾಗಿನೆಲೆ ಮಠದ ಗುರುಗಳ ಮೈಕ್ ಕಿತ್ತುಕೊಳ್ಳುವ ಪ್ರಶ್ನೆ ಇಲ್ಲ. ಅವರು ನಮ್ಮ ಗುರುಗಳು. ಅವರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ. ನಂತರ ಅವರೂ ಮಾತನಾಡಿದ್ದಾರೆ. ವಿಶ್ವನಾಥ್ ಅವರು ಅಲ್ಲಿರಲಿಲ್ಲ ಎಂದರು.