ಮೈಸೂರು: ಬೆರಳು ತೋರಿದರೆ ಹಸ್ತವನ್ನೇ ನುಂಗುವಷ್ಟು ಪ್ರಸ್ತುತ ದಿನಮಾನದ ಮಕ್ಕಳು ಜನ್ಮತಃ ಅತಿಬುದ್ಧಿವಂತರಾಗಿದ್ದು ಒಳ್ಳೆಯದಕ್ಕಿಂತಲೂ ಹೆಚ್ಚಾಗಿ ಕೆಟ್ಟದ್ದಕ್ಕೆ ಬಹುಬೇಗ ಆಕರ್ಷಿತ ರಾಗುವುದರಿಂದ ಅವರ ಭವಿಷ್ಯಕ್ಕೆ ಮುಳುವಾಗುವ ಮೊಬೈಲ್ ನಂಥ ಅಪಾಯಕಾರಿ ವಸ್ತುವನ್ನು ಪೋಷಕರು ಮಕ್ಕಳಿಗೆ ಕೊಡಬಾರದೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಆಲನಹಳ್ಳಿ ಬಡಾವಣೆಯಲ್ಲಿರುವ ವಿವೇಕು ವಿದ್ಯಾಲಯದ ಆವರಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳೇ ಕೈ ಬರಹದಿಂದ ರೂಪಿಸಿದ್ದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೊಬೈಲ್ ಎಂಬ ಭೂತ ಎಲ್ಲೆಡೆ ಸರ್ವಾಂತರ್ಯಾಮಿಯಾಗಿದ್ದು ಓದುವ ಮಕ್ಕಳಿಗೆ ಅತ್ಯಂತ ಅಪಾಯಕಾರಿಯಾಗಿರುವುದರಿಂದ ಮಕ್ಕಳು ಮೊಬೈಲ್ ಗೀಳಿಗೆ ಬೀಳದಂತೆ ಪೋಷಕರು ಎಚ್ಚರ ವಹಿಸಬೇಕೆಂದರು.
ಮಕ್ಕಳು ಭವಿಷ್ಯದ ಬೆಳಕುಗಳು. ದುರಂತವೆಂದರೆ ನಮ್ಮಲ್ಲಿ ಅನೇಕ ಶಾಲೆಗಳ ಬಹಳಷ್ಟು ಪೋಷಕರು ಏನೇನೋ ಕಾರಣಕ್ಕೆ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರು ದಾರಿ ತಪ್ಪಲು ಪರೋಕ್ಷವಾಗಿ ಅವರೇ ಕಾರಣರಾಗುತ್ತಿದ್ದಾರೆ. ಇನ್ನು ಕೆಲವು ಪೋಷಕರಂತೂ ಮಕ್ಕಳು ಓದುವ ವೇಳೆಗೆ ಸರಿಯಾಗಿ ಟಿವಿಯಲ್ಲಿ ಬರುವ ಕೆಲಸಕ್ಕೆ ಬಾರದ ಧಾರಾವಾಹಿಗಳಿಗೆ ದಾಸರಾಗಿ ಆ ಸಮಯದಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ತಾವು ಟಿವಿ ಧಾರಾವಾಹಿ ನೋಡುವಲ್ಲಿ ತಲ್ಲಿನರಾಗಿರುತ್ತಾರೆ. ಮಕ್ಕಳನ್ನು ತಿದ್ದಿ ತೀಡಿ ವಿದ್ಯೆ ಕಲಿಸುವುದು ಶಾಲೆಯ ಮತ್ತು ಶಿಕ್ಷಕರ ಜವಾಬ್ದಾರಿ ಎಂಬ ಭಾವನೆ ಅವರದು. ಆದರೆ ವಾಸ್ತವವಾಗಿ ಶಿಕ್ಷಕರಿಗಿಂತಲೂ ಎರಡು ಪಟ್ಟು ಹೆಚ್ಚಿನ ಜವಾಬ್ದಾರಿ ಪೋಷಕರಿಗೆ ಇರಬೇಕು. ಸಂತಸದ ವಿಚಾರವೆಂದರೆ ಈ ವಿವೇಕು ವಿದ್ಯಾಲಯದಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರು ಬಹಳ ಜವಾಬ್ದಾರಿವಂತರಾಗಿದ್ದು, ಒಂದು ಶಾಲಾ ವಾರ್ಷಿಕ ವಿಶೇಷ ಸಂಚಿಕೆಯನ್ನು ರೂಪಿಸುವಷ್ಟು ಮಕ್ಕಳು ಜಾಣರಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮೈಸೂರು ದಕ್ಷಿಣ ವಲಯ ಐಜಿಪಿ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಬಿ.ಬಿ.ಲಕ್ಷ್ಮೆಗೌಡ ಅವರು ಮಾತನಾಡಿ, ಅನ್ನ ಮತ್ತು ಅಕ್ಷರ ಹಾಗೂ ಜ್ಞಾನದ ಮಹತ್ವವನ್ನು ಅರಿತು ಮಕ್ಕಳನ್ನು ವಿದ್ಯೆಯಲ್ಲಿ ಬಲಿಷ್ಠ ಗೊಳಿಸಬೇಕೆಂದು ಅವರು ಪೋಷಕರು ಮತ್ತು ವಿದ್ಯಾರ್ಥಿಗಳ ಅರಿವಿಗೆ ಪೂರಕವಾದ ಅನೇಕ ಪುಟ್ಟ ಪುಟ್ಟ ಕಥೆಗಳೊಡನೆ ಸುದೀರ್ಘ ಉಪನ್ಯಾಸ ನೀಡಿದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಪ್ರಾರಂಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಜೆ. ನಾರಾಯಣ ಕಿಕ್ಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಬಿ.ಪಲ್ಲವಿ ಶಾಲೆಯ ವಾರ್ಷಿಕ ವರದಿ ಮಂಡಿಸಿದರು. ಕುರುಹಿನ ಶೆಟ್ಟಿ ವಿಚಾರವೇದಿಕೆ ಅಧ್ಯಕ್ಷರಾದ ಕೆ.ಎಚ್. ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅರಕಲಗೂಡು ಬಸವರಾಜು, ಜೆ.ಪಟ್ಟಸ್ವಾಮಿ, ರೋಟಿರಿಯನ್ ಪುಟ್ಟರಾಜು, ಎಚ್.ಎನ್. ನಾಗರಾಜು, ಜಿ.ಎನ್. ಮದನ್ ರಾಜು, ಕೆ.ಎನ್. ಗೋವಿಂದಶೆಟ್ಟಿ, ಡಾ.ಡಿ.ಉಮಾಪತಿ, ವಿಶ್ರಾಂತ ಶಿಕ್ಷಕರಾದ ರಾಜು ಶೆಟ್ಟಿ, ಹರ್ಷ ರಾಜ್, ಚಿತ್ರಕಲಾ ಶಿಕ್ಷಕ, ಎಂ. ಆರ್.ಮನೋಹರ್ ಹಾಗೂ ಶಿಕ್ಷಕಿಯರಾದ ಎಸ್. ಪ್ರೀತಿ, ಶ್ವೇತಾ, ಶುಭ, ಸ್ವರ,ಅನಿತಾ, ಗೀತಾ, ಲಲಿತಾ, ಅಶ್ವಿನಿ ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.