ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಾಯಿತು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಂದೋಲನ ದಿನ ಪತ್ರಿಕೆಯ ಹಿರಿಯ ಉಪಸಂಪಾದಕ ಮುಳ್ಳೂರು ರಾಜು, ಹಿರಿಯ ವರದಿಗಾರ ರಮೇಶ್ ನಾಯಕ್, ವಿಜಯವಾಣಿ ಪತ್ರಿಕೆ ಹಿರಿಯ ಉಪಸಂಪಾದಕ ಮುಳ್ಳೂರು ರಾಜು, ದಿ ಹಿಂದೂ ಪತ್ರಿಕೆ ಹಿರಿಯ ವರದಿಗಾರ ಶಂಕರ್ ಬೆನ್ನೂರು. ವಿಜಯ ಕರ್ನಾಟಕದ ಹಿರಿಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ, ಪಬ್ಲಿಕ್ ಟಿವಿಯ ಹಿರಿಯ ವರದಿಗಾರ ಕೆ.ಪಿ.ನಾಗರಾಜ್, ಹುಣಸೂರು ತಾಲೂಕು ವಿಜುಂವಾಣಿ ವರದಿಗಾರ ಶಿವಕುಮಾರ್ ವಿ.ರಾವ್, ಉದಯವಾಣಿ ಗ್ರಾಮೀಣ ಸುದ್ದಿ ವಿಭಾಗದ ಮುಖ್ಯಸ್ಥ ಅ.ಮ.ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡುವ ಮುಂಚೆ ಕನಿಷ್ಠ ಎರಡ್ಮೂರು ವರ್ಷವಾದರೂ ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡಬೇಕು. ಇದರಿಂದ ಪತ್ರಿಕೋದ್ಯಮದ ಗುಣಮಟ್ಟದ ಹೆಚ್ಚಾಗಲಿದೆ. ಇಂದು ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಬಹುಪಾಲು ಮಂದಿಗೆ ಕನ್ನಡ ಭಾಷೆಯ ಮೇಲೆ ಹಿಡಿತವಿಲ್ಲ. ಅವರ ಭಾಷೆ ಸುಧಾರಿಸಬೇಕಾದರೆ ಕನಿಷ್ಠ ನಾಲ್ಕು ವರ್ಷಗಳ ಕಾಲ ಪತ್ರಿಕಾ ಕಚೇರಿಯಲ್ಲಿ ಅನುಭವ ಪಡೆದಿರಬೇಕು. ಅಂತಹವರನ್ನು ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸಲು ಆಯ್ಕೆ ಮಾಡಿದರೆ ಕನ್ನಡ ಪದಗಳನ್ನು ಅಪಭ್ರಂಶ ಮಾಡುವುದು ತಪ್ಪಲಿದೆ. ಪ್ರಸ್ತುತ ದೃಶ್ಯ ಮಾಧ್ಯಮಗಳಲ್ಲಿ ಉನ್ನತ ಸ್ಥಾನದಲ್ಲಿರುವವರೆಲ್ಲರೂ ಮುದ್ರಣ ಮಾಧ್ಯಮದಿಂದಲೇ ಬಂದವರಾಗಿದ್ದಾರೆ. ಮುದ್ರಣದಲ್ಲಿ ಪತ್ರಿಕೋದ್ಯಮದ ಅನುಭವವನ್ನು ಪಡೆದರೆ ಇನ್ನೂ ಉತ್ತಮ ಪತ್ರಕರ್ತರು ಹೊರಬರಲಿದ್ದಾರೆ ಎಂದರು.
ಮಾಧ್ಯಮದಲ್ಲಿ ಕೆಲಸ ಮಾಡಲು ಬಯಸುವ ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿಯೇ ಪತ್ರಿಕೆ ಕಚೇರಿಗೆ ಹೋಗಿ ವರದಿಗಾರಿಕೆ, ಸುದ್ದಿ ಮನೆಯ ಕಾರ್ಯಚಟುವಟಿಕೆಗಳನ್ನು ತಿಳಿದುಕೊಂಡಿರಬೇಕು. ನಾನು ರಾಜಕೀಯ ಕ್ಷೇತ್ರದಲ್ಲಿದ್ದರೂ ನನ್ನೊಳಗಿನ ಪತ್ರಕರ್ತನನ್ನು ಸದಾ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತೇನೆ. ಪತ್ರಿಕೆಗಳಲ್ಲಿ ಬರುವ ಟೀಕೆಗಳನ್ನು ಮತ್ತು ವರದಿಗಳನ್ನು ಸಕರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಹೀಗಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಲಿದೆ ಎಂದರು.
ಮೈಸೂರು ದಿಗಂತ ಪತ್ರಿಕೆ ಸಂಪಾದಕ ಮಳಲಿ ನಟರಾಜ್ ಕುಮಾರ್ ಅವರ ಪುತ್ರ ಘನವಂತ, ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಹಿರಿಯ ವರದಿಗಾರ ಕೆ.ಶಿವಕುಮಾರ್ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು. ಮಾಧ್ಯಮ ಅಕಾಡೆಮಿ ಸದಸ್ಯರಾದ ಸಿ.ಕೆ.ಮಹೇಂದ್ರ, ಕೂಡ್ಲಿ ಗುರುರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಉಪಾಧ್ಯಕ್ಷ ಎಂ.ಎಸ್. ಬಸವಣ್ಣ, ಧರ್ಮಾಪುರ ನಾರಾಯಣ್, ಕಾರ್ಯದರ್ಶಿಗಳಾದ ಪಿ.ರಂಗಸ್ವಾಮಿ, ಎಂ.ಮಹದೇವ್ ಸೇರಿದಂತೆ ಹಲವರು ಇದ್ದರು.