ಮೈಸೂರು: ಜವಳಿ ಮಂತಾಲಯ ಗುಜರಾತಿನ ಜೀವನ್ ಜ್ಯೋತ್ ವೆಲ್ಫೇರ್ ಫೆಡರೇಷನ್ ಸಂಯುಕ್ತ ಆಶ್ರಯದಲ್ಲಿ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಆಯೋಜಿಸಿರುವ 10 ದಿನಗಳ ಕ್ರಾಫ್ಟ್ ಬಜಾರ್ ಉತ್ಸವ ಆರಂಭಗೊಂಡಿದೆ.
ಕ್ರಾಫ್ಟ್ ಬಜಾರ್ ಉತ್ಸವಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಸಿ.ಶಿವರಾಜು ಮೇಳಕ್ಕೆ ಚಾಲನೆ ನೀಡಿ, ಮಾತನಾಡಿ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ಪಡೆದ ಕುಶಲ ಕರ್ಮಿಗಳಿಂದ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಂಡಿದ್ದು, ಕೈಯಲ್ಲೇ ತಯಾರಿಸಿದ ಉತ್ಪನ್ನಗಳು ಗಮನ ಸೆಳೆಯುತ್ತಿವೆ. ಕರಕುಶಲಕರ್ಮಿಗಳು ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದು, ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಮೇಳ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಗುಜರಾತ್, ಅಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ ಹಾಗು ಇನ್ನು ಕೆಲವು ರಾಜ್ಯಗಳ ಕುಶಲಕರ್ಮಿಗಳು ಭಾಗವಹಿಸಿದ್ದಾರೆ. ಮಹಾರಾಷ್ಟ್ರದ ಟಸ್ಕರ್ ರೇಷ್ಮೆ ಸೀರೆ, ಕೊಲ್ಲಾಪುರ್ ಚಪ್ಪಲಿಗಳು, ದೆಹಲಿಯ ಮಣ್ಣಿನಿಂದ ತಯಾರಿಸಿರುವ ಗೃಹಳಂಕಾರಿಕ ಸೂಜಿಗಳು, ಪೀಠೋಪಕರಣಗಳು, ಡ್ರೆಸ್‌ಗಳು ಗುಜರಾತ್ ರಾಜ್ಯದ ಬಣ್ಣದ ಹೂಕುಂಡಗಳು, ಕುಚ್ ವೊಲ್ಟನ್ ಶಾಲು ಮತ್ತು ಪ್ಯಾಚ್‌ವರ್ಕ್, ಪಶ್ಚಿಮ ಬಂಗಾಳದ ಸೆಣಬಿನ ವಸ್ತುಗಳು, ಬಾಟಿಕ್ ಸೀರೆಗಳು, ಜದೋಷಿ ಸೀರೆಗಳು, ಕಾಂತ ಎಂಬ್ರಾಯಿಡರಿ ಸೀರೆಗಳು, ಟೆರೆಕೋಟಾ, ಈಶಾನ್ಯ ರಾಜ್ಯಗಳ ಬಿದಿರಿನ ಗೃಹಪಯೋಗಿ ವಸ್ತುಗಳು ಮತ್ತು ಕೃತಕ ಹೂವುಗಳು, ಅರಗಿನ ಬಳೆಗಳು, ವರ್ಣಚಿತ್ರಗಳು, ಎಂಬ್ರಾಯಿಡರಿ, ಸಾಂಪ್ರದಾಯಿಕ ಗೊಂಬೆಗಳು ಮತ್ತು ಕೂಟಾ ಸೀರೆಗಳು ಸೇರಿದಂತೆ ಹಲವು ಉತ್ಪನ್ನಗಳು ದೊರೆಯಲಿವೆ. ಮಾ.16ರವರೆಗೂ ಮೇಳ ಇರಲಿದ್ದು, ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಉಚಿತ ಪ್ರವೇಶವಿರುತ್ತದೆ.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಲೆಕ್ಕ ಮತ್ತು ಲೆಕ್ಕ ಪರಿಶೋಧಕ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ, ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್.ಮಹದೇವಸ್ವಾಮಿ, ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್.ಸುನೀಲ್ ಕುಮಾರ್, ಜೀವನ್ ಜ್ಯೋತ್ ವೆಲ್ಫೇರ್ ಫೆಡರೇಷನ್‌ನ ನಿರ್ದೇಶಕ ಮಿತ್ರಾ ಗೋಡ್ ಬೋಲೆ, ತನಿಷ್ಕಾ, ಸುಂದರಪ್ಪ ಸೇರಿದಂತೆ ಹಲವರು ಇದ್ದರು.