ಮೈಸೂರು: ನಗರದ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಇತ್ತೀಚೆಗಷ್ಟೇ ನಡೆದ ಸಿಐಐನ ಮೈಸೂರು ವಿಭಾಗದ ವಾರ್ಷಿಕ ಸಭೆಯಲ್ಲಿ ಸಿಐಐ ಕರ್ನಾಟಕದ ಅಧ್ಯಕ್ಷರಾದ ಅರ್ಜುನ್ ರಂಗ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು. ಸಿಐಐನ ಮೈಸೂರು ವಿಭಾಗದ ಚೇರ್‌ಮನ್ ಆಗಿ ಶೆವರನ್ ಲ್ಯಾಬೊರೇಟರೀಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ಸ್ಯಾಮ್ ಚೆರಿಯನ್ ಹಾಗೂ ಜೆಕೆ ಟಯರ್ಸ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವರ್ಕ್ಸ್ ವಿಭಾಗದ ಉಪಾಧ್ಯಕ್ಷರಾದ ಈಶ್ವರ ರಾವ್ ಉಪಚೇರ್‌ಮನ್ ಆಗಿ ಆಯ್ಕೆಯಾದರು.
1988ಯಲ್ಲಿ ಶೆವರನ್ ಲ್ಯಾಬೊರೇಟರೀಸ್ ಆರಂಭಿಸಿದ ಸ್ಯಾಮ್ ಚೆರಿಯನ್ ಮೈಸೂರಿನ ಪ್ರಖ್ಯಾತ ಉದ್ಯಮಿ. ಮೈಸೂರಿನ ಈ ಸಂಸ್ಥೆಯು ಸ್ವಚ್ಛತಾ ಸಲಕರಣೆಗಳು ಹಾಗೂ ಉಪಕರಣಗಳನ್ನು ಉತ್ಪಾದಿಸುತ್ತದೆ. ಸ್ಯಾಮ್ ಚೆರಿಯನ್ ಅವರು ಶೆವರನ್ ಇನೋವೇಶನ್ ಸೆಂಟರ್ ಎಂಬ ಉನ್ನತ ವಿಜ್ಞಾನಿಗಳ ತಂಡವೊಂದನ್ನು ಸಹ ರಚಿಸಿದ್ದಾರೆ.
ಈ ಸಂಸ್ಥೆ ಆರಂಭಿಸುವ ಮುನ್ನ ಸ್ಯಾಮ್ ಚೆರಿಯನ್ ಅವರು ಯುಎಸ್‌ಎ ಹಾಗೂ ಯುರೋಪ್‌ನ ಸಾಕಷ್ಟು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇವರು ಕೇರಳ ವಿಶ್ವವಿದ್ಯಾನಿಲಯದಿಂದ ಎಕನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಜರ್ಮನಿಯ ಶಿಲ್ಲರ್ ಹೀಡಲ್‌ಬರ್ಗ್‌ನಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದಾರೆ. ಸ್ಕಾಶ್ ಅಚೀವರ್ಸ್ ಅವಾರ್ಡ್, ಇಂಡಿಯಾ ಎಸ್‌ಎಂಇ 100, ಇಂಡಿಯಾಸ್ ಸ್ಮಾಲ್ ಜೇಂಟ್ಸ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ.
ಮೆಕಾನಿಕಲ್ ಇಂಜಿನಿಯರಿಂಗ್ ಹಾಗೂ ಎಂಬಿಎ ವ್ಯಾಸಂಗ ಮಾಡಿರುವ ಈಶ್ವರ ರಾವ್ ಅವರು ಆಪರೇಷನ್ ಮ್ಯಾನೇಜ್‌ಮೆಂಟ್ (ಪೆಟ್ರೋ ಕೆಮಿಕಲ್ಸ್, ಪ್ಲಾಸ್ಟಿಕ್, ರಬ್ಬರ್, ಬೆಲ್ಟ್, ಟಯರ್ ಹಾಗೂ ಶುಗರ್) ಕ್ಷೇತ್ರದಲ್ಲಿ 27 ವರ್ಷಗಳ ಅನುಭವ ಹೊಂದಿದ್ದಾರೆ. ಭಾರತದ ವಿವಿಧ ಭಾಗಗಳ ಉತ್ಪಾದನಾ ಘಟಕಗಳಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ.