ಮೈಸೂರು: ಭಾರತೀಯ ಚುನಾವಣ ಆಯೋಗ ವಿಧಾನಸಭೆ ಚುನಾವಣೆ ವೇಳಪಟ್ಟಿ ಪ್ರಕಟಿಸಿರುವುದರಿಂದ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಎಲ್ಲರೂ ಸಹಕಾರ ನೀಡಬೇಕು. ನೀತಿ ಸಂಹಿತೆ ಉಲ್ಲಂಸಿದರೆ ಪ್ರಜಾಪ್ರತಿನಿಧಿ ಕಾಯಿದೆ ಅನುಸಾರ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಿಷ್ಪಕ್ಷಪಾತ, ಶಾಂತಿಯುತ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸರ್ಕಾರದ ಯಾವುದೇ ಹೊಸ ಕಾರ್ಯಕ್ರಮ, ಘೋಷಣೆ ಸೇರಿದಂತೆ ಇನ್ನಿತರೆ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಬಾರದು. ವಿವಿಧ ನಿಗಮ, ಮಂಡಳಿ ಅಧಕ್ಷರು, ಜನಪ್ರತಿನಿಧಿಗಳು ಬಳಸುವ ಸರ್ಕಾರಿ ಕಾರುಗಳನ್ನು ಜಿಲ್ಲಾಡಳಿತದ ವಶಕ್ಕೆ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಶೇ.90 ಮತದಾನಕ್ಕೆ ಗುರಿ ಹೊಂದಲಾಗಿದ್ದು, ಚುನಾವಣಾ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರ ಜತೆಗೆ ಒಬ್ಬ ಕ್ರೀಡಾಪಟು, ತೃತೀಯ ಲಿಂಗಿ ಹಾಗೂ ಶತಾಯುಷಿ ಒಬ್ಬರನ್ನು ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲು ನಿಧರಿಸಲಾಗಿದೆ ಎಂದು ವಿವರಿಸಿದರು.
ನೀತಿ ಸಂಹಿತೆ ಜಾರಿ ಹಿನ್ನೆಲೆ ಜಿಲ್ಲೆಯ ಸರ್ಕಾರಿ ಕಟ್ಟಡಗಳು, ಕಚೇರಿಗಳ ಆವರಣದಲ್ಲಿರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಒಳಪಡುವಂತಹ ಗೋಡೆ ಬರಹಗಳು, ಭಿತ್ತಿಚಿತ್ರಗಳು, ಬ್ಯಾನರ್, ಕಟೌಟ್, ಹೋರ್ಡಿಂಗ್ಸ್, ಬಾವುಟಗಳನ್ನು ತೆರವುಗೊಳಿಸಲಾಗುವುದು ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ಹೊಸದಾಗಿ ಹೆಸರು ಸೇರಿಸಲು ಫಾರಂ 6 ಮತ್ತು ಫಾರಂ 8ರ ಮೂಲಕ ಅರ್ಜಿ ಸಲ್ಲಿಸಲು ಏ.11ರವರೆಗೆ ಅವಕಾಶ ನೀಡಲಾಗಿದೆ. ಚುನಾವಣೆ ವೇಳೆಯಲ್ಲಿ ಸಾರ್ವಜನಿಕರು ದಾಖಲೆ ಇಲ್ಲದೇ 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸುವಂತಿಲ್ಲ. 50 ಸಾವಿರಕ್ಕಿಂತ ಕಡಿಮೆ ಹಣ ವರ್ಗಾವಣೆಗೆ ಯಾವುದೇ ಅಡ್ಡಿಯಿಲ್ಲ. ಒಂದೇ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ಬೇರೆ ಬೇರೆ ಖಾತೆಗೆ ಹಣ ವರ್ಗಾವಣೆಯಾಗುವ ಬಗ್ಗೆ ಹಾಗೂ 20 ಲಕ್ಷಕ್ಕಿಂತ ಹೆಚ್ಚು ಹಣ ಡ್ರಾ ಮಾಡುವವರ ಬಗ್ಗೆ ಮಾಹಿತಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ನಾವಣಾ ಕಾರ್ಯಕ್ಕೆ ಮತಗಟ್ಟೆ ಅಧಿಕಾರಿಗಳು ಸೇರಿದಂತೆ 13ರಿಂದ 14 ಸಾವಿರ ಸಿಬ್ಬಂದಿ ಅಗತ್ಯವಿದ್ದು, ಸೆಕ್ಟರ್ ಆಫಿಸರ್, ಫ್ಲೈಯಿಂಗ್ ಸ್ಕ್ವಾರ್ಡ್, ಸ್ಟ್ಯಾಟಿಕ್ ಸರ್ವೆಲೆನ್ಸ್, ವೀಡಿಯೋ ವೀವಿಂಗ್, ವೀಡಿಯೋ ಸರ್ವೆಲೆನ್ಸ್, ಅಸಿಸ್ಟೆಂಟ್ ಎಲೆಕ್ಷನ್ ಅಬ್ಸರ್ವರ್‌ಗಳಿರುವ ತಂಡಗಳನ್ನು ರಚಿಸಲಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆ ಸಂಬಂಧ ರಾಜಕೀಯ ಮುಖಂಡರ ಸಭೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರನ್ನು ಆಹ್ವಾನಿಸಿ ವಿವಿ ಪ್ಯಾಡ್, ಮತ ಯಂತ್ರಗಳ ಪ್ರಾತ್ಯಕ್ಷಿಕೆ ನೀಡುತ್ತೇವೆ. ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳನ್ನು ಸಂರಕ್ಷಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಿಂಕ್ ಮತಗಟ್ಟೆ ಸ್ಥಾಪಿಸಲಾಗುತ್ತದೆ. ಅಲ್ಲಿ ಮಹಿಳಾ ಸಿಬ್ಬಂದಿ ನಿಯೋಜಿಸಲಾಗುವುದು. ಜತೆಗೆ ಈ ಬಾರಿ ವಿಶೇಷವಾಗಿ ಯುವ ಮತದಾರರನ್ನು ಸೆಳೆಯಲು ಆಯ್ದ ಮತಗಟ್ಟೆಗಳಲ್ಲಿ ಯುವ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಗೃಹ, ಅಂಗವಿಕಲರಿಗೆ ರಾಂಪ್ ಸೇರಿದಂತೆ ಇನ್ನಿತರೆ ಸೌಲಭ ನೀಡಲು ಕ್ರಮಕೈಗೊಳ್ಳಲಾಗುವುದು. ಹಾಡಿಗಳಲ್ಲಿ ಸಾಂಪ್ರದಾಯಿಕ ಮತಗಟ್ಟೆ ರಚಿಸಲು ನಿಧರಿಸಲಾಗಿದೆ. ಉಚಿತ ಸಹಾಯವಾಣಿ 1950 ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಲಿದೆ. ಚುನಾವಣಾ ಸಂಬಂಧಿತ ದೂರುಗಳ ಸಿ-ವಿಜಿಲ್ ಎಂಬ ತಂತ್ರಾಂಶ ರೂಪಿಸಲಾಗಿದೆ. ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಚಾರ ಸಂಬಂಧಿತ ಗೋಡೆ ಬರಹ ತೆರವು ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ಈಗಾಗಲೇ 40 ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು, ಈವರೆಗೆ 41ಲಕ್ಷ ರೂ. ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹಾಗೆಯೇ 68 ಲಿಕ್ಕರ್ ಕೇಸ್ ದಾಖಲಾಗಿದ್ದು, ಚುನಾವಣೆಗೆ 5ಪ್ಯಾರಾ ಮಿಲಿಟರಿ ಪೋರ್ಸ್ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.