ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ

ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ

Y.K.   ¦    Oct 17, 2020 09:46:51 AM (IST)
ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಶನಿವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಇದರಿಂದ ಸಾಂಸ್ಕೃತಿಕ ನಗರಿಯಲ್ಲಿ ದಸರಾ ಚಟುವಟಿಕೆಗಳು ಗರಿಕೆದರಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಮೈಸೂರು ದಸರಾ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದೆ.

ಇಂದು ಬೆಳಗ್ಗೆ 7.45 ರ ಶುಭ ಮುಹೂರ್ತದಲ್ಲಿ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ನವರಾತ್ರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿಯೊಂದಿಗೆ ಬೆಟ್ಟಕ್ಕೆ ಬಂದ ಡಾ.ಸಿ.ಎನ್. ಮಂಜುನಾಥ್‌ ಅವರು ಮೊದಲಿಗೆ ದೇವಸ್ಥಾನಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಪಕ್ಕದಲ್ಲೇ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ, ಬೆಳ್ಳಿರಥದಲ್ಲಿ ವಿಶೇಷವಾಗಿ ಅಲಂಕರಿ ಸರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈಯ್ಯುವ ಮೂಲಕ ಚಾಲನೆ ನೀಡಿದರು.

ಸಂಜೆ ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ ಸಿಗಲಿದೆ. ಅ.26ರಂದು ಅರಮನೆ ಆವರಣದಲ್ಲಿ ಜಂಬೂ ಸವಾರಿ ನಡೆಯಲಿದ್ದು, ಗಜಪಡೆಯ ಕ್ಯಾಪ್ಟನ್‌ ಅಭಿಮನ್ಯು ಚಾಮುಂಡೇಶ್ವರಿ ಉತ್ಸವ ಮೂರ್ತಿ ಇರುವ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದ್ದಾನೆ.

ಸರಳವಾದರೂ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರ ಕಂಕಣಧಾರಿಯಾಗಿ ಖಾಸಗಿ ದರ್ಬಾರ್ ಆರಂಭಿಸಿದರು. ಇಂದಿನಿಂದ 9 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯಲಿದೆ.