ಶವಸಂಸ್ಕಾರಕ್ಕೆ ಶುಲ್ಕ ಪಡೆಯದಂತೆ ಸಚಿವ ನಾರಾಯಣಗೌಡ ಸೂಚನೆ

ಶವಸಂಸ್ಕಾರಕ್ಕೆ ಶುಲ್ಕ ಪಡೆಯದಂತೆ ಸಚಿವ ನಾರಾಯಣಗೌಡ ಸೂಚನೆ

May 01, 2021 02:12:51 PM (IST)
 ಶವಸಂಸ್ಕಾರಕ್ಕೆ ಶುಲ್ಕ ಪಡೆಯದಂತೆ ಸಚಿವ ನಾರಾಯಣಗೌಡ ಸೂಚನೆ

ಕೆ.ಆರ್.ಪೇಟೆ: ಕೋವಿಡ್ ಸೋಂಕಿನಿಂದ ಗುಣಮುಖರಾಗದೇ ಮೃತರಾದ ವ್ಯಕ್ತಿಗಳ ಶವಸಂಸ್ಕಾರವನ್ನು ತಾಲೂಕು ಆಡಳಿತವೇ ನಿರ್ವಹಿಸಬೇಕು. ಮೃತರಾದ ವ್ಯಕ್ತಿಗಳ ಬಂಧುಗಳು ಹಾಗೂ ಸ್ನೇಹಿತರಿಂದ ಶವಸಂಸ್ಕಾರಕ್ಕೆ ಯಾವುದೇ ಶುಲ್ಕವನ್ನು ಪಡೆಯಬಾರದು, ಶವಸಾಗಾಣಿಕೆ ವಾಹನದ ಶುಲ್ಕ, ಪೂಜಾ ಸಾಮಗ್ರಿಗಳು ಸೇರಿದಂತೆ ಎಲ್ಲ ವೆಚ್ಚವನ್ನು ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಗಳು ನಿರ್ವಹಣೆ ಮಾಡಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಸೂಚಿಸಿದ್ದಾರೆ.
ಕೋವಿಡ್ ಹೆಲ್ತ್‍ಕೇರ್ ಸೆಂಟರ್‍ನಲ್ಲಿ ಭಯದ ವಾತಾವರಣದಿಂದ ಮುಕ್ತವಾಗಿ ಮಾತೃ ಆರೈಕೆಯಂತೆ ಪ್ರೀತಿ ವಿಶ್ವಾಸದಿಂದ ನಡೆಯಲಿ, ಕೋರೋನಾ ಸೋಂಕಿತರನ್ನು ಪ್ರೀತಿ-ವಿಶ್ವಾಸದಿಂದ ಕಂಡು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಗುಣಮುಖರಾಗುವಂತೆ ನೋಡಿಕೊಳ್ಳಬೇಕು. ಕೋವಿಡ್ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡಬೇಕು. ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ರಾಜ್ಯಾದ್ಯಂತ 144ನೇ ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆಯಲ್ಲದೇ ಜನತಾ ಕಫ್ರ್ಯೂ ಕೂಡ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದೆಯಾದರೂ ಜನಸಾಮಾನ್ಯರು ನಿಷೇಧಾಜ್ಞೆಯ ಸಮಯದಲ್ಲಿ ಪಟ್ಟಣಕ್ಕೆ ಬಂದು ಸುಮ್ಮನೆ ಅಡ್ಡಾಡುವುದೇಕೆ ಈ ಬಗ್ಗೆ ಪೋಲಿಸ್ ಅಧಿಕಾರಿಗಳು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸಕಾರಣವಿಲ್ಲದೇ ಪಟ್ಟಣದಲ್ಲಿ ಜನತಾ ಕಫ್ರ್ಯೂ ಸಮಯದಲ್ಲಿ ತಿರುಗಾಡುವ ವ್ಯಕ್ತಿಗಳ ವಿರುದ್ಧ ದಂಡ ವಿಧಿಸಿ ಕ್ರಮಕೈಗೊಳ್ಳಿ ಎಂದು ಹೇಳಿದ್ದಾರೆ.
ಮೇ.10 ರವರೆಗೆ ರಾಜ್ಯಾದ ಯಂತ ಜನತಾ ಕಫ್ರ್ಯೂ ಜಾರಿಯಲ್ಲಿರುವುದರಿಂದ ಕೊರೋನಾ 2ನೇ ಅಲೆಯ ತೀವ್ರತೆಯನ್ನು ತಡೆಯುವ ನಿಟ್ಟಿನಲ್ಲಿ ತಾಲೂಕು ಆಡಳಿತದೊಂದಿಗೆ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು. ಕೊರೋನಾ ಸೋಂಕಿತರಲ್ಲಿರುವ ಭಯದ ವಾತಾವರಣವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ತುಂಬಿ ಕೊರೋನಾ ಯುದ್ಧವನ್ನು ಗೆದ್ದು ಆರೋಗ್ಯವಂತರಾಗಿ ಮನೆಗೆ ತೆರಳುವಂತೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.