ಕೋವಿಡ್‌ ಸಂಕಷ್ಟದಲ್ಲಿರುವಾಗ ಸ್ವಿಮ್ಮಿಂಗ್‌ ಪೂಲ್‌ ಬೇಕಿತ್ತಾ: ಡಿಸಿಗೆ ಸಾ.ರಾ ಪ್ರಶ್ನೆ

ಕೋವಿಡ್‌ ಸಂಕಷ್ಟದಲ್ಲಿರುವಾಗ ಸ್ವಿಮ್ಮಿಂಗ್‌ ಪೂಲ್‌ ಬೇಕಿತ್ತಾ: ಡಿಸಿಗೆ ಸಾ.ರಾ ಪ್ರಶ್ನೆ

May 16, 2021 01:47:16 PM (IST)
ಕೋವಿಡ್‌ ಸಂಕಷ್ಟದಲ್ಲಿರುವಾಗ ಸ್ವಿಮ್ಮಿಂಗ್‌ ಪೂಲ್‌ ಬೇಕಿತ್ತಾ: ಡಿಸಿಗೆ ಸಾ.ರಾ ಪ್ರಶ್ನೆ

ಮೈಸೂರು: ಕೋವಿಡ್‌ ಸಂಕಷ್ಟದಲ್ಲಿರುವಾಗ ಜಿಮ್‌, ಸ್ವಿಮ್ಮಿಂಗ್‌ ಪೂಲ್‌ ಬೇಕಿತ್ತಾ ಎಂದು ಮೈಸೂರು ಜಿಲ್ಲಾಧಿಕಾರಿಗೆ ಶಾಸಕ ಸಾ.ರಾ.ಮಹೇಶ್‌ ಪ್ರಶ್ನಿಸಿದರು.
ನನ್ನ ಮೇಲೆ ಆರೋಪ ಮಾಡಿದವರು ಕ್ಷಮೆ ಕೇಳಬೇಕು ಎಂಬ ಡಿಸಿ ರೋಹಿಣಿ ಸಿಂಧೂರಿ ಹೇಳಿಕೆಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದು ಸುಳ್ಳಾ? ನಿಮ್ಮ ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ ತೀರ್ಪು ಬಂತು. ಈಗ ಅದರ ತೀರ್ಪು ಬರದಂತೆ ಸಿಎಟಿ ಮ್ಯಾನೇಜ್ ಮಾಡಿದ್ದು ಸುಳ್ಳ? ವಾಲ್ಮೀಕಿ ಜಯಂತಿ ಆಚರಣೆಗೆ ಬರಲಿಲ್ಲ, ಬಂಡೀಪುರಕ್ಕೆ ಹೋಗಿದ್ದು ಸುಳ್ಳಾ ಎಂದು ಸಾ.ರಾ.ಮಹೇಶ್‌ ಕೇಳಿದರು.
ಸೋಂಕಿತರಿಗೆ ಮಾತ್ರೆ ಕೊಡಲು ದುಡ್ಡಿಲ್ಲ. ಕೊರೊನಾ ಸಂಕಷ್ಟದಲ್ಲಿ ಜಿಮ್‌, ಸ್ವಿಮ್ಮಿಂಗ್‌ ಪೂಲ್‌ ಏಕೆ? ಅದೂ ಪಾರಂಪರಿಕ ಕಟ್ಟಡದಲ್ಲಿ ಈಜುಕೊಳಕ್ಕೆ ಅನುಮತಿ ಕೊಟ್ಟವರು ಯಾರು, ಇದಕ್ಕೆ ಹಣ ಎಲ್ಲಿಂದ ಬಂತು. ಅದು ಕಟ್ಟಿರೋದು ಸುಳ್ಳಾ. ರಾಜ್ಯದ ಸಿಎಂ, ರಾಷ್ಟ್ರದ ಪಿಎಂ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ ಸ್ವಿಮ್ಮಿಂಗ್‌ ಪೂಲ್‌ ಇಲ್ಲ. ನಾವು, ನೀವು ಜನರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.ಕರ್ನಾಟಕದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳ? ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯ ಹೊತ್ತಿ ಉರಿಯುತ್ತಿದೆ. ಈಜುಕೊಳದ ವೆಚ್ಚ 50 ಲಕ್ಷ ರೂ. ಅನ್ನು ಕೊರೊನಾ ನಿರ್ವಹಣೆಗೆ ಬಳಸಬಹುದಿತ್ತು. ನಿಮ್ಮನ್ನು ಯಾರು ಕೇಳಬೇಕು? ಇದಕ್ಕೆ ಸೂಕ್ತ ವೇದಿಕೆಯಲ್ಲಿ ತಕ್ಕ ಉತ್ತರ ನೀಡುವೆ. ಇದೆಲ್ಲಾ ಏನೇ ಇರಲಿ ನೊಂದವರ ನಿಟ್ಟುಸಿರ ಶಾಪ ತಟ್ಟದೇ ಬಿಡುವುದಿಲ್ಲ ಎಂದರು.
ಕೆ.ಆರ್.ನಗರದಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಅಲ್ಲಿನ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಸ್ಟೆರಾಯಿಡ್ ನೀಡುತ್ತಿದ್ದಾರೆ. ಇದು ಗೊತ್ತಿದ್ದರೆ ಕ್ರಮ ಏಕೆ ಕೈಗೊಂಡಿಲ್ಲ? ಇದಕ್ಕೆ ಜವಾಬ್ದಾರರು ಯಾರು? ಇದನ್ನು ಕೇಳುವುದೇ ತಪ್ಪಾಗಿದೆ. ವಿರೋಧ ಪಕ್ಷದವರು ಎಚ್ಚರಿಸುವ ಕೆಲಸ ಮಾಡುತ್ತೇವೆ. ಎಲ್ಲಕ್ಕೂ ಕಾಲವೇ ಉತ್ತರ ನೀಡಲಿದೆ. ಇಲ್ಲಿ ಯಾರು ಶಾಶ್ವತ ಅಲ್ಲ, ಕಾಲ ಚಕ್ರ ಉರುಳುತ್ತದೆ. ಕೋವಿಡ್ ಮುಗಿಯಲಿ ಕೆಲ ದಾಖಲೆಗಳಿವೆ ಬಿಡುಗಡೆ ಮಾಡುವೆ. ಜಿಲ್ಲಾಧಿಕಾರಿಗಳ ವಿಚಾರವಾಗಿ ದಾಖಲೆ ಬಿಡುಗಡೆ ಮಾಡುವೆ ಎಂದು ತಿಳಿಸಿದರು.