ಜಂಬೂಸವಾರಿಯಂದು ಜಟ್ಟಿಗಳ ರೋಚಕ ವಜ್ರಮುಷ್ಠಿ ಕಾಳಗ

ಜಂಬೂಸವಾರಿಯಂದು ಜಟ್ಟಿಗಳ ರೋಚಕ ವಜ್ರಮುಷ್ಠಿ ಕಾಳಗ

Oct 07, 2019 02:41:26 PM (IST)
ಜಂಬೂಸವಾರಿಯಂದು ಜಟ್ಟಿಗಳ ರೋಚಕ ವಜ್ರಮುಷ್ಠಿ ಕಾಳಗ

ಮೈಸೂರು ದಸರಾದಂದು ನಡೆಯುವ ಜಂಬೂ ಸವಾರಿ ಆಕರ್ಷಣೀಯವಾದರೂ ಅದರ ಸುತ್ತ ನಡೆಯುವ ಹಲವು ವಿಧಿ ವಿಧಾನಗಳು ವೈಶಿಷ್ಟ್ಯತೆಯಿಂದ ಕೂಡಿ ಪಾರಂಪರಿಕ ಆಚರಣೆಯಾಗಿ ಬಂದಿರುವುದನ್ನು ನಾವು ಕಾಣಬಹುದಾಗಿದೆ.

ಜಂಬೂ ಸವಾರಿ ಹೊರಡುವ ಮುನ್ನ ನಡೆಯುವ ಆಚರಣೆಯಲ್ಲಿ ವಜ್ರಮುಷ್ಠಿ ಕಾಳಗವೂ ಒಂದಾಗಿದೆ. ಇದು ಮೈಸೂರು ದಸರಾ ಜಂಬೂಸವಾರಿ ನಡೆಯುವ ದಿನದಂದು ಬೆಳಿಗ್ಗೆ ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯುತ್ತದೆ. ಇದು ಸಾಂಪ್ರದಾಯಿಕವಾಗಿ ನಡೆದು ಬಂದ ರೂಢಿಯಾಗಿದೆ. ಇದು ಎಲ್ಲ ಫೈಲ್ವಾನ್‍ಗಳಿಂದ ಸಾಧ್ಯವಾಗುವುದಿಲ್ಲ. ಇದಕ್ಕೆಂದೇ ನುರಿತ ಫೈಲ್ವಾನ್ ಗಳಿದ್ದು ಅವರಷ್ಟೆ ಪಾಲ್ಗೊಂಡು ಶೋಭೆ ತರುತ್ತಾರೆ.

ಇನ್ನು ಈ ವಜ್ರಮುಷ್ಠಿ ಕಾಳಗ ಮೈಸೂರು ಜಂಬೂ ಸವಾರಿಯಲ್ಲಿ ಹೇಗೆ ರೂಢಿಗೆ ಬಂತು ಎಂಬುವುದನ್ನು ನೋಡುವುದಾದರೆ ಮೈಸೂರು ಒಡೆಯರ್ ದುರ್ಗಾ ಮಾತೆಯ ಶಾಂತಿಗಾಗಿ ನವರಾತ್ರಿಯಲ್ಲಿ ಆಚರಣೆಗೆ ತಂದರು ಎನ್ನಲಾಗುತ್ತದೆ.

ವಜ್ರಮುಷ್ಠಿಯಲ್ಲಿ ಪಾಲ್ಗೊಳ್ಳುವ ಫೈಲ್ವಾನ್‍ಗಳು ತಲೆಬೋಳಿಸಿ ದೃಢಕಾಯವಾಗಿರುವ ಅನುಭವಿ ವಸ್ತಾದ್ ತನ್ನ ಬಲಗೈಗೆ (ಆನೆದಂತ ಅಥವಾ ಸಾರಂಗದ ಕೊಂಬಿನಿಂದ ತಯಾರಿಸಿದ ಆಯುಧ) ವಜ್ರನಖವನ್ನು ಹಿಡಿದು ಎಡಗೈಗೆ ಬಟ್ಟೆ ಕಟ್ಟಿಕೊಂಡಿರುತ್ತಾನೆ. ಇಂತಹ ನಾಲ್ವರು ಅಖಾಡದಲ್ಲಿ ಸೆಣೆಸಾಡುತ್ತಾರೆ. ತನ್ನ ಬಳಿಯಿರುವ ವಜ್ರನಖದಿಂದ ಎದುರಾಳಿಯ ಮೇಲೆ ಹೋರಾಡಬೇಕು ಹೊಡೆತವನ್ನು ಕೂಡ ಆತನ ತಲೆ ಮೇಲೆಯೇ ಹೊಡೆಯಬೇಕು. ಹೀಗೆ ಹೊಡೆದ ಏಟು ತಲೆಗೆ ತಾಗಿ ರಕ್ತ ಚಿಮ್ಮಿದರೆ ಆತ ಸೋತ ಎಂದರ್ಥ.

ಆದರೆ ಇಬ್ಬರೂ ದೃಢಕಾಯರಾಗಿರುವುದರಿಂದ ಪ್ರತಿ ಪ್ರಹಾರವನ್ನು ತಪ್ಪಿಸಿಕೊಂಡು ಕಾಳಗ ನಡೆಸುತ್ತಾರೆ. ಇದು ನೋಡಲು ರೋಚಕವಾಗಿರುತ್ತದೆ. ಜಟ್ಟಿಗಳ ತಲೆ ಮೇಲೆ ರಕ್ತ ಹೊರ ಬರುವವರೆಗೂ ಕಾಳಗ ನಡೆಯುತ್ತದೆ.

ಈಗ ಕೆಲವೇ ಕೆಲವು ಫೈಲ್ವಾನರು ಮಾತ್ರ ವಜ್ರಮುಷ್ಠಿ ಕಾಳಗವನ್ನು ಕರಗತ ಮಾಡಿಕೊಂಡಿದ್ದಾರೆ. ಅವರು ದಸರಾ ಸಂದರ್ಭ ನಡೆಯುವ ಕಾಳಗದಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಭಾಗವಹಿಸುವ ಫೈಲ್ವಾನರು ಕಟ್ಟುನಿಟ್ಟಿನ ವೃತವನ್ನು ಸುಮಾರು ಒಂಬತ್ತು ದಿನಗಳ ಕಾಲ ಮಾಡುವುದಲ್ಲದೆ, ಒಂದು ತಿಂಗಳ ಹಿಂದಿನಿಂದಲೇ ತಾಲೀಮು ನಡೆಸಿ ಸಿದ್ಧರಾಗುತ್ತಾರೆ. ದಸರಾ ದಿನ ತಮ್ಮ ಸಾಮಥ್ರ್ಯ ಪ್ರದರ್ಶಿಸಿ ವಜ್ರಮುಷ್ಠಿ ಕಾಳಗಕ್ಕೆ ಮೆರುಗು ತರುವುದು ಪ್ರತಿವರ್ಷವೂ ನಡೆದು ಬಂದಿದೆ.