ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಸೆಪ್ಟೆಂಬರ್‌ 22 ಕ್ಕೆ ಪೂರ್ಣ ; ಸಂಸದ ಪ್ರತಾಪ್‌ ಸಿಂಹ

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಸೆಪ್ಟೆಂಬರ್‌ 22 ಕ್ಕೆ ಪೂರ್ಣ ; ಸಂಸದ ಪ್ರತಾಪ್‌ ಸಿಂಹ

Apr 03, 2021 07:29:38 AM (IST)
 ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ  ಸೆಪ್ಟೆಂಬರ್‌ 22 ಕ್ಕೆ ಪೂರ್ಣ ; ಸಂಸದ ಪ್ರತಾಪ್‌ ಸಿಂಹ

ಮಡಿಕೇರಿ, : ಬೆಂಗಳೂರು - ಮೈಸೂರು ಚತುಷ್ಪಥ ಹೆದ್ದಾರಿ ಕಾರ್ಯ ನಿಗದಿತ ಸಮಯದಂತೆಯೇ ನಡೆಯುತ್ತಿದ್ದು 2022ರ ಸೆಪ್ಟೆಂಬರ್ ವೇಳೆಯಲ್ಲಿ ಕಾಮಗಾರಿ ಪೂರ್ಣ ಗೊಂಡು ಉದ್ಘಾಟನೆಯಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.ಮಡಿಕೇರಿಯಲ್ಲಿ ಭಾರತೀಯ ವಿದ್ಯಾಭವನ, ಕರ್ನಾಟಕ ಲಲಿತಕಲಾ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆಯೋಜಿತ ಮೂರು ದಿನಗಳ ಕಲಾಶಿಬಿರಕ್ಕೆ ಚಿತ್ರಕ್ಕೆ ಬಣ್ಣಹಚ್ಚುವ ಮೂಲಕ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಚಾಲನೆ ನೀಡಿ ಮಾತನಾಡಿದರು.ಉದ್ದೇಶಿತ ಯೋಜನೆಯಿಂದಾಗಿ ಬೆಂಗಳೂರು - ಮೈಸೂರು ರಸ್ತೆ ಪ್ರಯಾಣಕ್ಕೆ ಒಂದೂವರೆ ಗಂಟೆ ಸಾಕಾಗಲಿದೆ. ಹಾಗೇ ಶ್ರೀರಂಗಪಟ್ಟಣ - ಗುಡ್ಡೆಹೊಸೂರು ನಡುವಿನ ಹೆದ್ದಾರಿ ವಿಸ್ತರಣೆ ಕಾರ್ಯವೂ ಭರದಿಂದ ಸಾಗಿದ್ದು ಇದರಿಂದಾಗಿ ಮುಂದಿನ ವರ್ಷ ಬೆಂಗಳೂರಿನಿಂದ ಮಡಿಕೇರಿಗೆ ಕೇವಲ ಎರಡೂವರೆ ಗಂಟೆಗಳಲ್ಲಿ ತಲುಪಬಹುದಾಗಿದೆ ಎಂದು ವಿವರಿಸಿದರು.
ಕಾಫಿ ಮಂಡಳಿಯ ಉಪಶಾಖೆಗಳನ್ನು ಈ ಹಿಂದೆ ಕಾಟಾಚಾರಕ್ಕೆ ತೆರೆಯಲ್ಪಟ್ಟಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಕೆಲ ಶಾಖೆ ಬಂದ್ ಮಾಡಲಾಗುತ್ತಿದೆ. ಇಡೀ ಕಾಫಿ ಮಂಡಳಿ ವ್ಯವಸ್ಥೆಯನ್ನು ಬಂದ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.ಸರ್ಕಾರ ನೀಡುವ ಅನುದಾನವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ರಂಗಾಯಣ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡು ಅಗತ್ಯವುಳ್ಳ ಕಲಾವಿದರಿಗೆ ನೆರವಾಗುತ್ತಿದೆ ಎಂದು ಸಂಸತ್ ಸದಸ್ಯ ಪ್ರತಾಪ್ ಸಿಂಹ ಮೆಚ್ಚುಗೆ ವ್ಯಕ್ತಪಡಿಸಿದರು. ಲಲಿತಕಲಾ ಅಕಾಡೆಮಿ ಹಾಗೂ ರಂಗಾಯಣ ಈ ಆರ್ಥಿಕ ಸಾಲಿನಲ್ಲಿ ಸರ್ಕಾರದ ಅನುದಾನವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡು ಕಲಾವಿದರ ನೆರವಿಗೆ ಮುಂದಾಗಿದೆ. ಲಲಿತಕಲಾ ಅಕಾಡೆಮಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಲಾವಿದರಿಗಾಗಿ ಮೀಸಲಾಗಿದ್ದ ರೂ. 1.40 ಕೋಟಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿರುವುದು ಅಕಾಡೆಮಿ ಅಧ್ಯಕ್ಷರ ಬದ್ಧತೆಗೆ ಸಾಕ್ಷಿ ಎಂದು ಹೇಳಿದ ಪ್ರತಾಪ್ ಸಿಂಹ, ಅಂತೆಯೇ ಎಸ್.ಎಲ್.ಬೈರಪ್ಪ ಅವರ ಪರ್ವ ಕಾದಂಬರಿಯನ್ನು ರಂಗರೂಪಕ್ಕೆ ತರುವ ಮೂಲಕ ರಂಗಾಯಣ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅತ್ಯಂತ ಗಮನಾರ್ಹ ಕಾರ್ಯ ಮಾಡಿದ್ದಾರೆ. ರಂಗಾಯಣ ಈಗ ರಂಗಚಟುವಟಿಕೆಗಳ ಕೇಂದ್ರವಾಗಿದೆ ಎಂದು ಹೇಳಿದರು. ಕೊಡಗು ವೀರಸೇನಾನಿಗಳ ನಾಡಾಗಿದ್ದು ಕೊಡಗಿನ ಸೇನಾಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ದೇಶದ ರಕ್ಷಣಾ ಪಡೆಗಳ ಪ್ರಮುಖ ಹುದ್ದೆಗಳಲ್ಲಿರುವುದು ವೀರರನಾಡಿಗೆ ಹೆಮ್ಮೆಯ ವಿಚಾರವಾಗಿದೆ ಎಂದರು.