ಕೆ.ಆರ್.ಎಸ್‍ನಿಂದ ಹರಿದ ನೀರಿಗೆ ತಿ.ನರಸೀಪುರದ ತ್ರಿವೇಣಿ ಸಂಗಮ ಜಲಾವೃತ

ಕೆ.ಆರ್.ಎಸ್‍ನಿಂದ ಹರಿದ ನೀರಿಗೆ ತಿ.ನರಸೀಪುರದ ತ್ರಿವೇಣಿ ಸಂಗಮ ಜಲಾವೃತ

LK   ¦    Aug 12, 2019 05:01:19 PM (IST)
ಕೆ.ಆರ್.ಎಸ್‍ನಿಂದ ಹರಿದ ನೀರಿಗೆ ತಿ.ನರಸೀಪುರದ ತ್ರಿವೇಣಿ ಸಂಗಮ ಜಲಾವೃತ

ಮೈಸೂರು: ಕೆ.ಆರ್.ಎಸ್. ಜಲಾಶಯದಿಂದ ಲಕ್ಷಕ್ಕೂ ಹೆಚ್ಚು ನೀರನ್ನು ಹೊರಗೆ ಬಿಡಲಾಗುತ್ತಿದ್ದು, ಪರಿಣಾಮ ಮೈಸೂರು ಜಿಲ್ಲೆಯ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಹೀಗಾಗಿ ಪ್ರವಾಹದಿಂದ ಸಂತ್ರಸ್ತವಾದ ಪಟ್ಟಣದ ವಿಶ್ವಕರ್ಮ ಬೀದಿಯಲ್ಲಿನ 14 ಕುಟುಂಬ, ದಾವಣಗೆರೆ ಕಾಲೋನಿಯಲ್ಲಿ ಕೊರಚ ಸಮುದಾಯ ಹಾಗೂ ಹೆಮ್ಮಿಗೆ ರಸ್ತೆಯ ಮುಸ್ಲಿಂ ಕಾಲೋನಿಯ ಐದಾರು ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿದೆ.

ಈಗಾಗಲೇ ನದಿ ನೀರು ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯವನ್ನು ಆವರಿಸಿದ್ದು, ಹಳೇ ಸಂತೇಮಾಳದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು, ಹಿಂದುಳಿದ ವರ್ಗಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ನಿಲಯಗಳು, ಅಗ್ನಿ ಶಾಮಕ ಠಾಣೆ ಹಾಗೂ ಶ್ರೀ ಮೂಲನಾಥೇಶ್ವರ ದೇವಾಲಯಗಳು ಕೂಡ ಜಲಾವೃತವಾಗಿವೆ.

ಕಳೆದ 1993ರ ಪ್ರವಾಹದಷ್ಟೇ ಭೀಕರ ಪ್ರವಾಹ ಪಟ್ಟಣಕ್ಕೆ ಎದುರಾಗಿದ್ದು, ರಾಷ್ಟ್ರೀಯ ಹೆದ್ದಾರಿ 212ರ ಜಂಕ್ಷನ್‍ನ ತಿರುಮಕೂಡಲು ಫ್ಲೈ ಓವರ್ ಕೆಳಗಿನ ರಸ್ತೆಗಳು ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮುಂಭಾಗ ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ನೀರಿನಲ್ಲಿ ಸಂಚರಿಸುವ ವಾಹನಗಳಿಗೆ ಪರದಾಡುವುದು ಒಂದೆಡೆಯಾದರೆ, ಸ್ಥಳೀಯ ನಿವಾಸಿಗಳು ನೆರೆ ನೀರಿನಲ್ಲಿ ಮಜ್ಜನ ಮಾಡಿಸುವುದು ಕೂಡ ಕಂಡು ಬಂದಿತು. ನದಿ ನೀರಿನ ಪ್ರಮಾಣ ಹೆಚ್ಚಾಗುವುದು ಮುಂದುವರೆದರೆ ಹಳೇ ತಿರುಮಕೂಡಲು ಪ್ರವಾಹಕ್ಕೆ ಸಿಲುಕುವ ಅಪಾಯ ಎದುರಾಗಿದ್ದು, ಮುನ್ನೆಚ್ಚರಿಕೆಗೆ ತಾಲ್ಲೂಕು ಆಡಳಿತ ಮುಂದಾಗಿದೆ.

ತ್ರಿವೇಣಿ ಸಂಗಮದಲ್ಲಿ ಕಾವೇರಿ ಮತ್ತು ಕಪಿಲಾ ನದಿಗಳು ಮೈದುಂಬಿ ಹರಿಯುತ್ತಿರುವುದರಿಂದ ನದಿಗಳ ವೈಭವನ್ನು ವೀಕ್ಷಿಸಲು ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ಜನರು ಆಗಮಿಸಿ ಜಲಾವೃತವಾದ ದೃಶ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ತಾಲೂಕು ಆಡಳಿತ ವತಿಯಿಂದ ದಂಡಾಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿದ್ದಾರೆ. ನದಿಯ ಪಾತ್ರದಲ್ಲಿ ವಾಸಿಸುವ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರು ಹಾಗೂ ಜನರನ್ನು ಕರೆತರಲಾಗಿದ್ದು, ನದಿಯ ನೀರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ವಿಶ್ವಕರ್ಮ ಬೀದಿಯಲ್ಲಿನ ಕೆಲವು ಮನೆಗಳು, ದಾವಣೆಗೆರೆ ಕಾಲನಿ ಹಾಗೂ ಹೆಮ್ಮಿಗೆ ರಸ್ತೆಯ ಮುಸ್ಲಿಂ ಕಾಲನಿಗಳ ಮನೆಗಳು ನೆರೆಹಾವಳಿಗೆ ತುತ್ತಾಗಿರುವುದರಿಂದ ನಿರಾಶ್ರಿತರಿಗಾಗಿ ಪಟ್ಟಣದ ಪುರಸಭೆ ಸಿಡಿಎಸ್ ಭವನದ ಪಕ್ಕದಲ್ಲಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಪ್ರವಾಹದಿಂದ ಹೆಚ್ಚಿನ ನಿವಾಸಿಗಳು ಸಂತ್ರಸ್ತರಾದರೆ ಶ್ರೀರಾಂಪುರ ಬಡಾವಣೆಯಲ್ಲಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯವನ್ನು ಪರಿಹಾರ ಕೇಂದ್ರಕ್ಕಾಗಿ ಕಾಯ್ದಿರಿಸಲಾಗಿದೆ. ನೆರೆ ಹಾವಳಿಗೆ ತುತ್ತಾಗುವ ಗ್ರಾಮಗಳಲ್ಲಿನ ನಿರಾಶ್ರಿತರಿಗೆ ಆಶ್ರಯ ನೀಡಲು ಅಕ್ಕೂರು ಹಾಗೂ ಬೆನಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.