ಅಮವಾಸ್ಯೆ ಹಿನ್ನೆಲೆ ಮೂರು ದಿನ ಚಾಮುಂಡೇಶ್ವರಿ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧ

ಅಮವಾಸ್ಯೆ ಹಿನ್ನೆಲೆ ಮೂರು ದಿನ ಚಾಮುಂಡೇಶ್ವರಿ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧ

CI   ¦    Sep 16, 2020 08:30:58 AM (IST)
ಅಮವಾಸ್ಯೆ ಹಿನ್ನೆಲೆ ಮೂರು ದಿನ ಚಾಮುಂಡೇಶ್ವರಿ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧ

ಮೈಸೂರು:  ನಾಳೆ ಮಹಾಲಯ ಅಮಾವಾಸ್ಯೆ ಇರುವುದರಿಂದ ಇಂದಿನಿಂದ  ಶುಕ್ರವಾರದವರೆಗೆ ಮೂರು ದಿನಗಳ ವರೆಗೆ ಸಾರ್ವಜನಿಕರಿಗೆ ಚಾಮುಂಡಿಬೆಟ್ಟದ ಪ್ರವೇಶ ನಿರ್ಬಂಧಿಸಲಾಗಿದೆ.

ಅಮಾವಾಸ್ಯೆ  ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತಾದಿಗಳು  ಬೆಟ್ಟಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಕೊರೊನಾ  ಸಾಮಾಜಿಕ ಅಂತರ ಕಾಪಾಡಿಕೊಳ್ಳಲು  ಸಾಧ್ಯವಾಗದಿರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಪ್ರವೇಶ ನಿಷೇಧಿಸಲಾಗಿದೆ.

ಎಲ್ಲ  ಖಾಸಗಿ ವಾಹನಗಳನ್ನು (ಗ್ರಾಮಸ್ಥರ ವಾಹನ ಹಾಗೂ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ) ಬೆಟ್ಟಕ್ಕೆ ಬರುವುದನ್ನು ನಿಷೇಧಿಸಿದೆ. ಅಲ್ಲದೆ, ಸೆ.16ರಿಂದ ಮೂರು ದಿನ ದೇವಾಲಯದ ವತಿಯಿಂದ ಹಾಗೂ ದಾನಿಗಳಿಂದ ಸಾಮೂಹಿಕವಾಗಿ ಪ್ರಸಾದ ತಯಾರಿಕೆ ಹಾಗೂ ವಿತರಣೆಯನ್ನು ಮುಂದಿನ ಆದೇಶದ ವರೆಗೆ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಆದರೆ  ದೇವಸ್ಥಾನ ಸಿಬ್ಬಂದಿ ನಿತ್ಯದ  ಪೂಜಾ ಕೈಂಕರ್ಯ ನಡೆಸಲು ಯಾವುದೇ ಅಡ್ಡಿ ಇಲ್ಲ.

ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧದ ಬಗ್ಗೆ ಮಾಹಿತಿ ಇಲ್ಲದೆ  ಬುಧವಾರ ಮುಂಜಾನೆಯೇ ಬೆಟ್ಟಕ್ಕೆ ಆಗಮಿಸುತ್ತಿದ್ದ ಜನರನ್ನು ಪೊಲೀಸರು ತಡೆದು ವಾಪಸ್‌ ಕಳುಹಿಸುತ್ತಿದ್ದಾರೆ. ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಹಿನ್ನೆಲೆಯಲ್ಲಿ ಬೆಟ್ಟದ  ಪ್ರವೇಶ ದ್ವಾರದ  ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಅಲ್ಲದೇ, ಬೆಟ್ಟಕ್ಕೆ ಆಗಮಿಸುತ್ತಿರುವ ಸಾರ್ವಜನಿಕರನ್ನು ವಾಪಸ್‌ ಕಳುಹಿಸುತ್ತಿದ್ದಾರೆ.