9 ಮಕ್ಕಳಿದ್ದರೂ ಆಶ್ರಯವಿಲ್ಲದೆ ಬೀದಿ ಪಾಲಾದ ವೃದ್ಧೆ…

9 ಮಕ್ಕಳಿದ್ದರೂ ಆಶ್ರಯವಿಲ್ಲದೆ ಬೀದಿ ಪಾಲಾದ ವೃದ್ಧೆ…

May 01, 2021 09:45:59 AM (IST)
9 ಮಕ್ಕಳಿದ್ದರೂ ಆಶ್ರಯವಿಲ್ಲದೆ ಬೀದಿ ಪಾಲಾದ ವೃದ್ಧೆ…

ಮೈಸೂರು : ಮೈಯೆಲ್ಲ ನರೆತು ಬಾಡಿದ ಮುಖ… 9 ಮಕ್ಕಳಿದ್ದರೂ ಆಶ್ರಯವಿಲ್ಲದೆ ಬೀದಿ ಪಾಲಾದ ವೃದ್ಧೆ… ಮನೆಯಿದ್ದರೂ ಮರದ ಕೆಳಗೆ ವಾಸ…!
ಇದು ಮಕ್ಕಳಿಂದ ತಿರಸ್ಕೃತಳಾಗಿ ಬೀದಿಗೆ ಬಿದ್ದಿರುವ ವೃದ್ಧೆಯ ಕರುಣಾಜನಕ ಕಥೆ. ಪಟ್ಟಣದ ಭೀಮನಗರ ಬಡಾವಣೆಯ ಪಾಲ್ ಚಾವಡಿ ಬೀದಿ ನಿವಾಸಿ ಬಂಡರಸಮ್ಮ (80), ಹಲವು ದಿನಗಳಿಂದ ನಿರಾಶ್ರಿತರಾಗಿ 22ನೇ ವಾರ್ಡ್​ನ ಆಶ್ರಯ ಬಡಾವಣೆಯ ಬೀದಿಯಲ್ಲಿ ದಿನ ದೂಡುತ್ತಿದ್ದಾರೆ.
ಪತಿ ನಾಗಯ್ಯ, ಪುತ್ರರಾದ ಸಿದ್ದರಾಜು, ಸುಂದರ್, ಸುರೇಶ್, ಪ್ರಕಾಶ್, ಶ್ರೀಕಂಠ, ಶಂಕರ್, ಪುತ್ರಿಯರಾದ ನಾಗವೇಣಿ, ಜಯಂತಿ ಹಾಗೂ ಶುಭಗಂಗಾ ಅವರೊಟ್ಟಿಗೆ ಭೀಮನಗರದ ಪಾಲ್ ಚಾವಡಿ ಬೀದಿಯಲ್ಲಿ 50 ವರ್ಷ ಜೀವನ ಸಾಗಿಸಿದ್ದು, 2005ರಲ್ಲಿ ಪತಿಯನ್ನು ಕಳೆದುಕೊಂಡರು. ಬಳಿಕ ಪುತ್ರರು ಮನೆಯಿಂದ ಹೊರ ಹಾಕಿದ್ದಾರೆ. ಇತ್ತ ಆಶ್ರಯ ಬಡಾವಣೆಯ 2ನೇ ಕ್ರಾಸ್​ನಲ್ಲಿದ್ದ ತನ್ನ ಪತಿಯ ಇನ್ನೊಂದು ಮನೆಯಲ್ಲಿ ಆಶ್ರಯ ಪಡೆಯಲು ಮುಂದಾದ ತಾಯಿಗೆ ಆಕೆಯ ಪುತ್ರಿ ನಾಗವೇಣಿ ಅವಕಾಶ ನೀಡಿಲ್ಲ. ಇದೀಗ ಬೀದಿಯಲ್ಲಿ ನಿಲ್ಲಿಸಿರುವ ನಿರುಪಯುಕ್ತ ಜೀಪ್​ನಲ್ಲಿ ಹಗಲು-ರಾತ್ರಿ ಕಾಲ ದೂಡುತ್ತಿದ್ದಾರೆ. ಇವರ ಪರಿಸ್ಥಿತಿ ಕಂಡು ಕೆಲ ನಿವಾಸಿಗಳು ಊಟೋಪಚಾರ ನೀಡಿದ್ದಾರೆ. ಇಷ್ಟಾದರೂ ಈಕೆಯ ಮಕ್ಕಳ ಮನಸ್ಸು ಮಾತ್ರ ಕರಗಿಲ್ಲ. ನಗರಸಭೆಯ ಪರಿಸರ ವಿಭಾಗದ ಎಇಇ ಅಶ್ವಿನಿ ಹಾಗೂ ಆರೋಗ್ಯ ಸಹಾಯಕಿ ಭೂಮಿಕಾ ಅವರ ಸಮ್ಮುಖದಲ್ಲಿ. ಪುತ್ರಿ ನಾಗವೇಣಿ ಮನವೊಲಿಸಲು ಯತ್ನಿಸಿದರಾದರೂ ಅದಕ್ಕೂ ಅವರು ಒಪ್ಪಲಿಲ್ಲ.