ವೈಶಿಷ್ಟ್ಯಪೂರ್ಣ ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್

ವೈಶಿಷ್ಟ್ಯಪೂರ್ಣ ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್

B.M. Lavakumar   ¦    Dec 23, 2019 05:33:12 PM (IST)
ವೈಶಿಷ್ಟ್ಯಪೂರ್ಣ ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್

ಕೊಡಗಿನ ವಿರಾಜಪೇಟೆಯಲ್ಲಿರುವ ಇತಿಹಾಸ ಪ್ರಸಿದ್ಧ ಸಂತ ಅನ್ನಮ್ಮ ಚರ್ಚ್ ಹಲವು ವೈಶಿಷ್ಟ್ಯತೆಗಳನ್ನು ತನ್ನೊಡಲಲ್ಲಿಟ್ಟುಕೊಂಡು ದೇಶ ವಿದೇಶದ ಜನರನ್ನು ಸೆಳೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಸುಮಾರು ಎರಡು ಶತಮಾನಗಳ ಇತಿಹಾಸ ಹೊಂದಿರುವ ಈ ಚರ್ಚ್‍ನ್ನು  ಕ್ರೈಸ್ತರಿಗಾಗಿಯೇ ದೊಡ್ಡವೀರರಾಜೇಂದ್ರ ಗೋವಾದಿಂದ ಜುವಾಂವ್ ಡಿ'ಕೋಸ್ಟ ಎಂಬ ಧರ್ಮಗುರುವನ್ನು ಕರೆಸಿ 1792ರ ನವೆಂಬರ್ 10ರಂದು ಕಟ್ಟಿಸಿಕೊಟ್ಟಿರುವುದು ಇತಿಹಾಸದಿಂದ ತಿಳಿದು ಬರುತ್ತದೆ.

ಈ ದೇವಾಲಯ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಚರ್ಚ್‍ನ ಸಮಿಪದಲ್ಲಿ ಲೂರ್ದ್ ಮಾತೆಯ ಸ್ಮರಣಾರ್ಥವಾಗಿ ನಿರ್ಮಿಸಲಾದ ಫ್ರಾನ್ಸ್‍ನ "ಲೂರ್ದ್" ಮಾದರಿಯ ಸುಂದರ ಕೃತ್ರಿಮ ಗವಿಯಿದೆ. ಚರ್ಚ್ ಪ್ರಾಚೀನ-ಅವಾರ್ಚೀನ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಇದಕ್ಕೆ ಭವ್ಯ ಗಾಥಿಕ್ ಶೈಲಿಯಲ್ಲಿ ಶೃಂಗ ತ್ರಿಕೋನ ಬಾಗು ಬಾಹುಗಳ ಮುಖಗೋಪುರವಿದೆ. ದೀರ್ಘ ವೃತ್ತಾಕಾರದ ಪ್ರವೇಶ ದ್ವಾರಗಳಿವೆ. ಗೋಪುರವು ಸುಮಾರು 150 ಅಡಿಗಳಷ್ಟು ಎತ್ತರವಿದ್ದು, ಇದರ ಮೇಲೆ ಪಂಚಲೋಹದ 6 ಅಡಿ ಎತ್ತರದ ಶಿಲುಬೆ ಗಮನ ಸೆಳೆಯುತ್ತದೆ.

ಇನ್ನು ಇಲ್ಲಿರುವ ಎರಡು ಬೃಹದಾಕಾರದ ಗಂಟೆಗಳನ್ನು ಚರ್ಚ್ ಗೋಪುರದ ಸುಮಾರು ನೂರು ಅಡಿ ಎತ್ತರದಲ್ಲಿ ಅಳವಡಿಸಲಾಗಿದೆ. ಇದನ್ನು ಸಾಲ್ವದೋರ್‍ಪಿಂಟೋ ಹಾಗೂ ದೋನಾಥ್ ಲೋಬೋರವರ ಜ್ಞಾಪಕಾರ್ಥವಾಗಿ ಪ್ಯಾರೀಸ್‍ನಿಂದ ತರಿಸಲಾಗಿದೆ ಎನ್ನುವುದೇ ವಿಶೇಷವಾಗಿದೆ.

ಚರ್ಚ್‍ನ ಸ್ಥಾಪನೆಗೆ ಕಾರಣನಾದ ದೊರೆ ವೀರರಾಜೇಂದ್ರ ಒಡೆಯರು ಕಾಣಿಕೆಯಾಗಿ ನೀಡಿರುವ ಎರಡು ದೀಪಕಂಬಗಳು (ಕುತ್ತುಂಬೊಳಿಚ್ಚ) `ವಿ’ ಸಂಕೇತದಿಂದ ಕೂಡಿದ್ದು, ಬಲಿಪೀಠದ ಮೇಜಿನ ಮೇಲಿಡಲಾಗಿದೆ. ಮೇಜಿನ ಹಿಂಭಾಗದಲ್ಲಿ ಪರಮ ಪ್ರಸಾದದ ಪೆಟ್ಟಿಗೆಯಿದ್ದು,  ಪೆಟ್ಟಿಗೆಯ ಮೇಲೆ ಏಸುವನ್ನು ಶಿಲುಬೆಗೇರಿಸಿದ ಶಿಲ್ಪ ಕಂಡು ಬರುತ್ತದೆ.  ಚರ್ಚ್‍ನ ಗೋಡೆಯ ಕೇಂದ್ರಭಾಗದಲ್ಲಿ ಜಗತ್ತಿನ ಪ್ರಸಿದ್ಧ ಕಲಾವಿದ ಮೈಕಲ್ ಎಂಜಿಲೋ ರೂಪಿಸಿದಂತಹ ‘ಪಿಯಾತ್’ ಶಿಲ್ಪದ ಮಾದರಿಯ ‘ಪಿಯಾತ್’ ಸ್ಥಿತಿಯ ಅಂದರೆ ತಾಯಿ ಮೇರಿಯ ತೊಡೆ ಮೇಲೆ ಏಸುವಿನ ಮೃತ ಶರೀರ ಅಂಗಾತ ಮಲಗಿದುದನ್ನು ಕಾಣಬಹುದು. ‘ಪಿಯಾತ್’ ಗೂಡಿನ ಎಡಕ್ಕೆ ಇಡೀ ಜಗತ್ತಿಗೆ ಶಾಂತಿಯ ಮುಖ ತೋರುವ  ಪುನರುತ್ಥಾನದ ಏಸುವಿನ ಭಂಗಿ, ಅಲ್ಲದೆ ಏಸುವಿನ ಕಷ್ಟ ಕೋಟಲೆಗಳನ್ನು ಕಣ್ಣಾರೆ ಕಂಡ ಸಾಕ್ಷಿಯಾದ  ಸಂತ ಸಭಾಸ್ಟಿಯನ್ನನ ಸ್ಮಾರಕ ಶಿಲ್ಪ ಕಂಡು ಬರುತ್ತದೆ.  ಏಸುವಿನ ತೆರೆದ ಹೃದಯ ಸ್ಥಾನ ಶಿಲ್ಪದ ಬಲಬದಿಯಲ್ಲಿದ್ದು, ಪಿಯಾತ್‍ಗೂಡಿನ ಬುಡದಲ್ಲಿ  ನಜರೇತಿನ ಯೇಸು ಜ್ಯೂದರ ಅರಸ ಎಂಬ ಲ್ಯಾಟಿನ್ ಉಕ್ತಿಯಿದೆ. ಆಸನಗಳಿರುವ ಅಂಕಣವು ಬಲಿಪೀಠದ ಬಲಬದಿಗೆ ಇದ್ದು, ಬಾಲಕ ಏಸುವಿನ ಶೋಭಾಯ ಮುಖದ ಶಿಲ್ಪವು ಎಡಬದಿಗಿದೆ.

ಇದಲ್ಲದೆ, ಚರ್ಚ್‍ನ ಒಳಭಾಗದಲ್ಲಿ ಏಸುವಿನ ಶಿಲುಬೆಗೆ ಏರಿಸುವ ಹಾದಿಯನ್ನು ತೋರಿಸುವ 14 ಕಾಷ್ಠ ಶಿಲ್ಪಗಳು ಸಭಾಂಗಣದ ಗೋಡೆ ಮತ್ತು ಕಂಬಗಳ ನಡುವೆ ಇರುವುದನ್ನು ಕಾಣಬಹುದಾಗಿದೆ.

ಇನ್ನು ಚರ್ಚ್ ಬಗ್ಗೆ ಹೇಳ ಬೇಕೆಂದರೆ ಇದರ ಸಭಾಂಗಣದ ವಿನ್ಯಾಸ, ಬಲಿಪೀಠ, ಗೂಡು, ಮೂಲ ಅಂಕಣ, ಸಭಾ ಸ್ತಂಭಗಳು, ಗುರು ಸಮಾಧಿ ನೆಲೆ ಪರಿವರ ಶಿಲ್ಪ, ಪ್ರದಕ್ಷಿಣೆ ಸಭಾಕಾರ, ಮುಖಗೋಪುರಗಳನ್ನು ಎರಡು ಬಾರಿ ಪುನರ್ರಚಿಸಲಾಗಿದೆ. ಈ ಗುಡಿಯು ಹಿಂದೂ ದೇವಾಲಯದ ಗರ್ಭಾಂಕಣ, ನವರಂಗ ಮುಖಮಂಟಪ, ಗದ್ದುಗೆ ನೆಲೆಗೋಪುರಗಳನ್ನು ಹೋಲುತ್ತಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ವಿರಾಜಪೇಟೆ ನಗರದ ಮುಕುಟ ಮಣಿಯಾಗಿರುವ ಸಂತ ಅನ್ನಮ್ಮ ಚರ್ಚ್ ಹಲವಷ್ಟು ವಿಶೇಷತೆಗಳನ್ನು ಹೊಂದಿರುವ ಚರ್ಚ್ ಆಗಿದ್ದು, ಇತರೆ ಚರ್ಚ್‍ಗಳಿಗೆ ಹೋಲಿಸಿದರೆ ಇಲ್ಲಿ ಒಂದಷ್ಟು ವಿಭಿನ್ನತೆಯನ್ನು ಕಾಣಬಹುದಾಗಿದೆ.