ನಂಜನಗೂಡಿನಲ್ಲಿ ಇಂದು ಭಕ್ತಸಾಗರದಲ್ಲಿ ಪಂಚಮಹಾರಥೋತ್ಸವ

ನಂಜನಗೂಡಿನಲ್ಲಿ ಇಂದು ಭಕ್ತಸಾಗರದಲ್ಲಿ ಪಂಚಮಹಾರಥೋತ್ಸವ

LK   ¦    Mar 19, 2019 11:48:40 AM (IST)
ನಂಜನಗೂಡಿನಲ್ಲಿ ಇಂದು ಭಕ್ತಸಾಗರದಲ್ಲಿ ಪಂಚಮಹಾರಥೋತ್ಸವ

ಭಕ್ತಸಾಗರದ ನಡುವೆ ಆಕಾಶದೆತ್ತರದ ಪಂಚ ರಥಗಳು ರಥಬೀದಿಯಲ್ಲಿ ಸಾಗುವ ಸುಂದರ ದೃಶ್ಯಗಳನ್ನು ನೋಡಬೇಕೆಂದರೆ ನಂಜನಗೂಡಿಗೆ ಬರಲೇ ಬೇಕು. ಏಕೆಂದರೆ ಬಹುಶಃ ಇಂತಹದೊಂದು ದೃಶ್ಯ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿಂದು(ಮಾ.19) ಪಂಚ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ.

ಹಾಗೇ ನೋಡಿದರೆ ನಂಜನಗೂಡು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು ಇಲ್ಲಿರುವ ಶ್ರೀಕಂಠೇಶ್ವರ ದೇಗುಲ ಇತಿಹಾಸ ಪ್ರಸಿದ್ಧವಾಗಿದೆ. ವರ್ಷಂಪ್ರತಿ ಮೀನ ಮಾಸದಲ್ಲಿ ಉತ್ತರ ನಕ್ಷತ್ರದ ದಿನದಂದು ಉತ್ತಮ ಲಗ್ನದಲ್ಲಿ ನಡೆಯುವ ಪಂಚಮಹಾರಥೋತ್ಸವ ವೈಶಿಷ್ಟ್ಯ ಪೂರ್ಣವಾಗಿದ್ದು, ಇಂತಹವೊಂದು ರಥೋತ್ಸವವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಪಂಚರಥೋತ್ಸವದ ಸಂದರ್ಭ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳನ್ನು ಎಳೆಯಲಾಗುವುದು. ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದ್ದು, ಪಂಚ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಈ ರಥವು ಸುಮಾರು 205 ಟನ್ ತೂಕ, 90 ಅಡಿ ಎತ್ತರವನ್ನು ಹೊಂದಿದೆ. ವಿವಿಧ ಬಣ್ಣದ ಬಟ್ಟೆಗಳನ್ನು ಸುತ್ತಿ, ಹೂವಿನಿಂದ ಅಲಂಕರಿಸಲಾಗುವ ರಥದ ತುದಿಯಲ್ಲಿ ಧ್ವಜವನ್ನು ಕಟ್ಟಲಾಗುತ್ತದೆ. ಬಳಿಕ ನವರತ್ನ ಹಾಗೂ ಹೂವಿನಿಂದ ಕಂಗೊಳಿಸುವ ಶ್ರೀಕಂಠಸ್ವಾಮಿಯ ವಿಗ್ರಹವನ್ನು ರಥದಲ್ಲಿರಿಸಿ ಮುಂಜಾನೆ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಧಿವಿಧಾನದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಂತರ ರಥಕ್ಕೆ ಮಹಾಮಂಗಳಾರತಿಯನ್ನು ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಲಾಗುತ್ತದೆ.

ರಥೋತ್ಸವದ ಈ ಭವ್ಯ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ಭಕ್ತರು ಜೈ ಶ್ರೀಕಂಠ, ಜೈ ನಂಜುಂಡ ಎಂದು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗುತ್ತಾ ರಥಕ್ಕೆ ಎರಡು ಕಡೆಯಲ್ಲಿ ಕಟ್ಟಿದ್ದ ಹಗ್ಗವನ್ನು ಎಳೆಯುತ್ತಾರೆ. ರಥ ಮುಂದೆ ಚಲಿಸುತ್ತಿದ್ದಂತೆಯೇ ಭಾವಪರವಶಗೊಂಡ ಭಕ್ತರು ರಥದ ಮೇಲೆ ದವನ ಬಾಳೆಹಣ್ಣುಗಳನ್ನು ಎಸೆದು ತಮ್ಮ ಹರಕೆಯನ್ನು ಶ್ರೀಕಂಠನಿಗೆ ಅರ್ಪಿಸುತ್ತಾರೆ. ರಥವು ಜನಸಾಗರದೊಂದಿಗೆ ಚಲಿಸಿ ರಾಜಗೋಪುರಕ್ಕೆ ನೇರವಾಗಿ ಬಂದು ನಿಂತಾಗ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ. ನೂತನವಾಗಿ ವಿವಾಹವಾದ ನವದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ದವನ ಎಸೆಯುವ ಮೂಲಕ ತಮ್ಮ ಹರಕೆಯನ್ನು ಒಪ್ಪಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ರಥಗಳು ಭಕ್ತಸಾಗರದೊಂದಿಗೆ ರಥಬೀದಿಯಲ್ಲಿ ಸಾಗುತ್ತಿದ್ದರೆ ಆ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣುಗಳೇ ಸಾಲದು ಎಂಬಂತೆ ಭಾಸವಾಗುತ್ತದೆ.

ಅನಾದಿಕಾಲದಿಂದ ನಡೆದುಕೊಂಡು ಬರುತ್ತಿರುವ ಪಂಚರಥೋತ್ಸವಕ್ಕೆ ಇಡೀ ನಂಜನಗೂಡು ಪಟ್ಟಣವೇ ತಳಿರು ತೋರಣಗಳಿಂದ ಅಲಂಕಾರಗೊಂಡು ನವವಧುವಿನಂತೆ ಕಂಗೊಳಿಸಿದರೆ, ಮನೆಮನೆಗಳಲ್ಲಿ ಹಬ್ಬದ ವಾತಾವರಣ ನೆಲೆಸುತ್ತದೆ. ದೂರದ ಊರಿನಲ್ಲಿ ನೆಲೆಸಿರುವವರು ತಪ್ಪದೆ ತಮ್ಮ ಊರಿಗೆ ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಹಿಂದೊಮ್ಮೆ ರಥೋತ್ಸವದ ಸಂದರ್ಭ ಅವಘಡ ಸಂಭವಿಸಿ ಓರ್ವ ಮೃತಪಟ್ಟು ಮೂವರು ತೀವ್ರಗಾಯಗೊಂಡ ಹಿನ್ನಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ರಥೋತ್ಸವದಲ್ಲಿ ವಿವಿಧ ಸಂಘ ಸಂಸ್ಥೆಗಳು ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಿಸಲು ಮುಂದಾಗಿವೆ. ಇತಿಹಾಸದ ಕ್ಷಣಗಳಿಗೆ ಸಾಕ್ಷಿಯಾಗುವ ಪಂಚರಥೋತ್ಸವಕ್ಕೆ ಆಗಮಿಸುವುದೇ ಭಕ್ತರಿಗೊಂದು ಸಂಭ್ರಮ ಎಂದರೆ ತಪ್ಪಾಗಲಾರದು.