ಬೈಲುಕುಪ್ಪೆಯಲ್ಲಿ ಎದ್ದು ನಿಂತ ಮಿನಿ ಟಿಬೆಟ್

ಬೈಲುಕುಪ್ಪೆಯಲ್ಲಿ ಎದ್ದು ನಿಂತ ಮಿನಿ ಟಿಬೆಟ್

LK   ¦    Nov 12, 2020 03:32:13 PM (IST)
ಬೈಲುಕುಪ್ಪೆಯಲ್ಲಿ ಎದ್ದು ನಿಂತ ಮಿನಿ ಟಿಬೆಟ್

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಗೆ ಭೇಟಿ ನೀಡಿದ್ದೇ ಆದರೆ ಮಿನಿ ಟಿಬೆಟ್ ನೋಡಿದ ಅನುಭವವಾಗುತ್ತದೆ. ಇಲ್ಲಿನ ಮಾರುಕಟ್ಟೆ, ದೇಗುಲ, ಅಂಗಡಿ ಮುಂಗಟ್ಟುಗಳೆಲ್ಲವೂ ಗಮನಸೆಳೆಯುತ್ತಿವೆ.

ಮೈಸೂರಿನಿಂದ ಸುಮಾರು 88ಕಿ.ಮೀ. ದೂರದಲ್ಲಿರುವ ಬೈಲುಕುಪ್ಪೆ ಪ್ರವಾಸಿತಾಣವಾಗಿ ಖ್ಯಾತಿಪಡೆಯಲು ಇಲ್ಲಿ ನಿರ್ಮಿಸಲ್ಪಟ್ಟಿರುವ ಸ್ವರ್ಣದೇಗುಲ(ಗೋಲ್ಡನ್ ಟೆಂಪಲ್)ವೇ ಮುಖ್ಯ ಕಾರಣವಾಗಿದೆ. ಸ್ವರ್ಣ ದೇಗುಲದೊಂದಿಗೆ ಸುಮಾರು ಹದಿನಾರಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ಧವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, ಎಂಟು ಸ್ಥೂಪಗಳು ತನ್ನದೇ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.

ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣಗೊಂಡಿರುವುದು ಸ್ವರ್ಣ ದೇಗುಲದ ವಿಶೇಷತೆಯಾಗಿದೆ. ಪರಮ ಪೂಜ್ಯ ಪನೋರ್ ರಿನ್ ಪೋಚೆಯವರು ಇದರ ನಿರ್ಮಾಣವನ್ನು 1995ರಲ್ಲಿ ಆರಂಭಿಸಿ 1999ರಲ್ಲಿ ಪೂರ್ಣಗೊಳಿಸಿದರು. ನಾಲ್ಕು ವರ್ಷಗಳ ಸತತ ಪರಿಶ್ರಮದಿಂದ ನಿರ್ಮಾಣ ಕಾರ್ಯ ನಡೆದಿದ್ದು, ಈ ಸಂದರ್ಭ ದೇಗುಲವನ್ನು ಆಕರ್ಷಕವಾಗಿಯೂ, ವೈಶಿಷ್ಟ್ಯಪೂರ್ಣವಾಗಿಯೂ ನಿರ್ಮಿಸುವಲ್ಲಿ ಪೆನೋರ್ ರಿನ್ ಪೋಚೆಯವರ ಸಾಧನೆ ಸ್ಮರಣೀಯ.

ಬೈಲುಕುಪ್ಪೆಗೆ ತೆರಳುವ ಪ್ರವಾಸಿಗರನ್ನು ಸ್ವರ್ಣದೇಗುಲ ದೂರದಿಂದಲೇ ಕೈಬೀಸಿ ತನ್ನತ್ತ ಸೆಳೆಯತ್ತದೆ. ಇನ್ನು ದೇಗುಲವನ್ನು ಪ್ರವೇಶಿಸುತ್ತಿದ್ದಂತೆಯೇ ಮನಸ್ಸಿಗೆ ಹೊಸ ಅನುಭವವಾಗುತ್ತದೆ. ನಮ್ಮಲ್ಲಿದ್ದ ದುಃಖ, ದುಗುಡ, ದುಮ್ಮಾನಗಳು ಮಾಯವಾಗಿ ಮನಸ್ಸು ಉಲ್ಲಾಸದಿಂದ ತೇಲಾಡುತ್ತದೆ.

ದೇವಾಲಯದ ಬಗ್ಗೆ ಹೇಳುವುದಾದರೆ ಇದೊಂದು ಉತ್ಕøಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರವಾಗಿದ್ದು, ಕಲೆಗೆ ಚಿನ್ನದ ಲೇಪನ ಮೆರುಗು ನೀಡಿದೆ.

ವಿಶಾಲ ಹಜಾರವನ್ನು ಹೊಂದಿರುವ ದೇವಾಲಯದ ಪೀಠದಿಂದಲೇ ಅರವತ್ತು ಅಡಿ ಎತ್ತರದ ಭಗವಾನ್  ಬುದ್ದನ ಮೂರ್ತಿ, ಐವತ್ತೆಂಟು ಅಡಿ ಎತ್ತರದ ಗುರು ಪದ್ಮಸಂಭವ ಹಾಗೂ ಬುದ್ದ ಅಮಿತಾಯುಸ್‍ನ ಮೂರು ಬೃಹತ್ ಪ್ರಧಾನ ಮೂರ್ತಿಗಳಿದ್ದು, ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋಹದಿಂದ ನಿರ್ಮಿಸಲಾಗಿದೆ.

ಈ ಮೂರ್ತಿಗಳ ಒಳಗೆ ಧರ್ಮಗ್ರಂಥಗಳು, ಮಹಾತ್ಮರ ಭಗ್ನಾವಶೇಷಗಳು, ಜೇಡಿಮಣ್ಣಿನ ಸ್ಥೂಪಗಳು, ಎರಕದ ಅಚ್ಚುಗಳು ಮತ್ತು ಸಣ್ಣ ಮೂರ್ತಿಗಳಿವೆ. ಇವು ಭಗವಾನ್ ಬುದ್ದನ ದೇಹ ನುಡಿ ಮತ್ತು ಮನಸ್ಸಿನ ಸಂಕೇತಗಳಾಗಿವೆ. ಇವುಗಳನ್ನು ಪೂಜಿಸಿದ್ದೇ ಆದಲ್ಲಿ ಮನಸ್ಸಿನಲ್ಲಿ  ನಂಬಿಕೆ, ಶಾಂತಿ, ವಿವೇಕ, ಪ್ರೀತಿ, ದಯೆ ಮತ್ತು ಅನುಕಂಪಗಳು ಮೂಡಿ ನಮ್ಮ ಕಲ್ಮಶ ಮನಸ್ಸು ಶುದ್ಧಗೊಳ್ಳುತ್ತದೆ ಎಂಬ ನಂಬಿಕೆಯಿದೆ.

ದೇವಾಲಯದ ಗೋಡೆಗಳಲ್ಲಿ ಪ್ರಧಾನ ಮೂರ್ತಿಗಳ ಇಕ್ಕೆಲಗಳಲ್ಲಿ ಜೋಗ್‍ಬನ್‍ರವರ ಬೋಧನೆಗಳನ್ನು ಆಚರಿಸಿ ಮಹಾಸಿದ್ದಿ ಪಡೆದ ಗುರುಪದ್ಮ ಸಂಭವರವರ 25 ಶಿಷ್ಯಂದಿಯರನ್ನು ಅಲ್ಲದೆ, ಬೃಹತ್ ಮೂರ್ತಿಗಳ ಹಿಂದೆ ಕಾಣಿಕೆಯ ದೇವತೆಯನ್ನು ಕಾಣಬಹುದಾಗಿದೆ ಮೂರನೆಯ ಅಂತಸ್ತಿನ ಎರಡು ಕಡೆ ಜೋಗ್‍ಚಿನ್ ಅವರ 12 ಮಹಾ ಮಹಿಮ ಗುರುಗಳನ್ನು ಪ್ರತಿನಿಧಿಸಿದರೆ, ಎರಡನೆಯ ಅಂತಸ್ತಿನ ಚಿತ್ರಗಳು ಪಾಲ್ಯುಲ್ ಸಂಪ್ರದಾಯದ ಸಿಂಹಾಸನಾಧೀಶರನ್ನು ಮತ್ತು ಜ್ಞಂಗ್‍ಮ ಸಂಪ್ರದಾಯದ  ಮಹಾಮಹಿಮ ವಿದ್ವಾಂಸರನ್ನು ಮತ್ತು ಶ್ರೇಷ್ಠ ಬೋಧಕರನ್ನು ಪ್ರತಿನಿಧಿಸುತ್ತದೆ.

ಪ್ರವೇಶದ್ವಾರದಿಂದ  ಆರಂಭವಾಗಿ ದೇವಾಲಯಕ್ಕೆ ಸುತ್ತುವರಿದುಕೊಂಡು  ಸುಮಾರು ಸಾವಿರಕ್ಕೂ ಹೆಚ್ಚಿನ ಪ್ರಾರ್ಥನಾ ಚಕ್ರಗಳಿದ್ದು, ಈ ಪ್ರಾರ್ಥನಾ ಚಕ್ರಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿ ಅವುಗಳನ್ನು ಬಲಭಾಗದಿಂದ ತಿರುಗಿಸಿದರೆ ನಾವು ರೋಗ-ರುಜಿನಗಳಿಂದ  ಮುಕ್ತಗೊಂಡು ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ.

ದೇವಾಲಯದ ಬಳಿ ಸುಂದರ ಉದ್ಯಾನವನವನ್ನು ನಿರ್ಮಿಸಲಾಗಿದ್ದು, ಇಲ್ಲಿ ಕುಳಿತು ಪ್ರವಾಸಿಗರು ವಿಶ್ರಾಂತಿ ಪಡೆಯಬಹುದಾಗಿದೆ. ಒಂದು ಕಾಲದಲ್ಲಿ ಬೆಂಗಾಡಾಗಿ ಉಪಯೋಗಕ್ಕೆ ಬಾರದ ಜಮೀನಾಗಿದ್ದ ಬೈಲುಕುಪ್ಪೆಯನ್ನು ಟಿಬೆಟಿಯನ್ನರು ಇವತ್ತು ವಿಶ್ವವೇ ಗಮನಸೆಳೆಯುವಂತೆ ಮಾಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.