ಕೊಡಗಿನ ಸುಂದರ ಚೇಲಾವರ ಜಲಧಾರೆ

ಕೊಡಗಿನ ಸುಂದರ ಚೇಲಾವರ ಜಲಧಾರೆ

LK   ¦    Aug 27, 2020 01:33:21 PM (IST)
ಕೊಡಗಿನ ಸುಂದರ ಚೇಲಾವರ ಜಲಧಾರೆ

ಕೊಡಗಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಭೋರ್ಗರೆದು ಧುಮುಕುವ ಜಲಧಾರೆಗಳಲ್ಲಿ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಶ್ವೇತಧಾರೆಯಾಗಿ ಭೋರ್ಗರೆಯುವ ಜಲಧಾರೆಯನ್ನು ನೋಡುವುದೇ ಒಂದು ರೀತಿಯ ಮಜಾ...

ಕೊಡಗಿನಲ್ಲಿ ಹತ್ತಾರು ಜಲಧಾರೆಗಳಿದ್ದು ಅವುಗಳ ಪೈಕಿ ಚೇಲಾವರ ಜಲಧಾರೆಯೂ ಒಂದಾಗಿದೆ. ಈ ಜಲಧಾರೆಯು ಮಡಿಕೇರಿಯಿಂದ ಸುಮಾರು ಮೂವತ್ನಾಲ್ಕು ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ತೆರಳುವವರು ಚೆಯ್ಯಂಡಾಣೆಗೆ ಹೋಗಿ ಅಲ್ಲಿಂದ ಚೇಲಾವರದತ್ತ ಹೆಜ್ಜೆ ಹಾಕುವುದೇ ಮರೆಯಲಾರದ ಅನುಭವವಾಗಿದೆ. ಜಲಧಾರೆಯ ಹಾದಿ ಅಂಕುಡೊಂಕಾಗಿದ್ದು, ಸುತ್ತಲಿನಲ್ಲಿ ಕಾಣಸಿಗುವ ಕಾಫಿತೋಟ ಸೇರಿದಂತೆ ರಮಣೀಯ ದೃಶ್ಯಗಳು ಮುದ ನೀಡುತ್ತವೆ.

ಸುತ್ತಲೂ ಪರ್ವತ ಶ್ರೇಣಿಗನ್ನೊಳಗೊಂಡ ದಟ್ಟಕಾನನದ ತೂಂಗ್‍ಕೊಲ್ಲಿ ತಲುಪಿದರೆ ಅಲ್ಲಿಂದ ಎಡ ಬದಿಯ ಕಣಿವೆಯಲ್ಲಿ ತೆರಳಿದರೆ  ಜಲಪಾತದ ಭೋರ್ಗರೆತ ಕಿವಿಗೆ ಅಪ್ಪಳಿಸುತ್ತದೆ. ಕಪ್ಪಗಿನ ಹೆಬ್ಬಂಡೆಯೊಂದರ ಮೇಲಿನಿಂದ ಧುಮುಕುವ ಜಲಧಾರೆ ಕಣ್ಮನಸೆಳೆಯುತ್ತದೆ.

ತಡಿಯಂಡಮೋಳ್ ಪರ್ವತ ಶ್ರೇಣಿಯ ಚೋಮನ ಕುಂದುವಿನಿಂದ ಹರಿದು ಬರುವ ಸೋಮನ ನದಿಯಿಂದ ನಿರ್ಮಿತವಾಗಿರುವ  ಜಲಧಾರೆಯನ್ನು ಏಮೆಪಾರೆ ಜಲಪಾತ ಎಂದು ಸ್ಥಳೀಯರು ಕರೆಯುತ್ತಾರೆ. ಬಹುಶಃ ಇಲ್ಲಿನ ಹೆಬ್ಬಂಡೆ ಮೇಲ್ನೋಟಕ್ಕೆ ಆಮೆಯಂತೆ ಕಂಡು ಬರುವುದರಿಂದ ಒಟ್ಟಾಗಿ ಕೊಡವಭಾಷೆಯಲ್ಲಿ ಏಮೆಪಾರೆ ಎಂದು ಕರೆದಿರಬಹುದೇನೋ? ಹೆಬ್ಬಂಡೆಯ ಮೇಲೆ ಸುಮಾರು ನೂರು ಅಡಿಯಷ್ಟು ಎತ್ತರದಿಂದ ಹಾಲುಸುರಿದಂತೆ ಕಾಣುವ ಈ ಜಲಧಾರೆ ಎಲ್ಲರ ಗಮನಸೆಳೆಯುತ್ತದೆ.

ಇಲ್ಲಿಂದ ಮತ್ತೆ ಎಡಬದಿಯ ರಸ್ತೆಯಲ್ಲಿ ಕಾಫಿ ತೋಟದ ಹಾದಿಯಲ್ಲಿ ನಡೆದರೆ ಮತ್ತೊಂದು ಪುಟ್ಟ ಜಲಧಾರೆ ಸಿಗುತ್ತದೆ. ಇದು ಇಗ್ಗುತಪ್ಪ ಬೆಟ್ಟದಿಂದ ಹರಿದು ಬರುವ ಬಲಿಯಟ್ರನದಿಯಿಂದ ನಿರ್ಮಿತವಾಗಿದೆ. ಈ ಮಿನಿಜಲಪಾತ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಹದ್ದು. ಸುಮಾರು ಐವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ಮೂರು ಹಂತಗಳಲ್ಲಿ ತನ್ನ ಬೆಡಗನ್ನು ಪ್ರದರ್ಶಿಸುತ್ತಾ ಮುಂದಕ್ಕೆ ಹರಿದು ಹೋಗುತ್ತದೆ.

ಚೇಲಾವರ ಜಲಧಾರೆಯತ್ತ ತೆರಳುವವರು ಎಚ್ಚರವಾಗಿರಬೇಕು. ಏಕೆಂದರೆ ಇದು ರಮಣೀಯವಾಗಿದೆಯಾದರೂ ಇದು ಅನಾಹುತಕಾರಿ ಜಲಧಾರೆಯಾಗಿದೆ. ಇಲ್ಲಿನ ಜಲಧಾರೆಯಲ್ಲಿ ತಲೆಕೊಟ್ಟು ಸ್ನಾನ ಮಾಡಲು, ನೀರಿನಲ್ಲಿ ಈಜಲು  ಹೋದವರು ಸಾವನ್ನಪ್ಪಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಇರುವುದು ಅಗತ್ಯ. ಇಲ್ಲಿನ ಬಂಡೆಯ ಕೆಳಗೆ 15 ಅಡಿ ದೂರದವರೆಗೆ ಟೊಳ್ಳಾದ ಸ್ಥಳವಿದೆ. ನೀರಿಗೆ ಬಿದ್ದ ವ್ಯಕ್ತಿಗಳು ಮೇಲಿನಿಂದ ಬೀಳುವ ನೀರಿನ ರಭಸಕ್ಕೆ ಕಲ್ಲು ಬಂಡೆಯ ಸಂದಿಯಲ್ಲಿ ಸಿಲುಕಿಕೊಂಡರೆ ಮುಗೀತು. ಆತ ಈಜು ಗೊತ್ತಿದ್ದರೂ ಈಚೆಗೆ ಬರುವುದು ಮಾತ್ರ ಹೆಣವಾಗಿಯೇ. ಹೀಗಾಗಿ ದೂರದಿಂದ ಜಲಧಾರೆಯ ಸೊಬಗು ನೋಡಿಕೊಂಡು ಹಿಂತಿರುಗಿದರೆ ಒಳ್ಳೆಯದು.