ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಚಿತ್ರಣ ಇಲ್ಲಿದೆ

ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಚಿತ್ರಣ ಇಲ್ಲಿದೆ

Jan 31, 2020 04:28:28 PM (IST)
ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಚಿತ್ರಣ ಇಲ್ಲಿದೆ

ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ-ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದು ಸುಮಾರು 16ನೇ ಶತಮಾನದಲ್ಲಿ ಈ ದೇವಾಲಯವು ಸ್ಥಾಪಿಸಲ್ಪಟ್ಟಿತ್ತು ಎಂಬುದಕ್ಕೆ ಪುರಾವೆಗಳಿವೆ. ಹಳೇ ತಿರುಮಲ ದೇವಸ್ಥಾನವೆಂಬ ಹೆಸರಿನಿಂದ ಕರೆಯಲ್ಪಡುವ ಈಗಿನ ಶ್ರೀ ಮಹಾಮಾಯ ದೇವಸ್ಥಾನವನ್ನು ಸಮಾಜದ ಧಾರ್ಮಿಕ ಉಪಾಸನಾ ಕೇಂದ್ರವೆಂಬುದಾಗಿ ಆರಾಧಿಸಿಕೊಂಡು ಬಂದಿರುವ ಉಲ್ಲೇಖವಿದೆ.

ಕ್ರಿ.ಶ.1701ರಲ್ಲಿ ಹಳೇ ತಿರುಮಲ ದೇವಸ್ಥಾನಕ್ಕೆ ನಗರ ಸಂಸ್ಥಾನದ ಅರಸನಾದ ಚೆನ್ನಬಸಪ್ಪ ನಾಯಕರು ಗರ್ಭಗೃಹದ ಶಿಖರಕ್ಕೆ ತಾಮ್ರದ ತಗಡನ್ನು ಹೊದಿಸಿರುವ ಉಲ್ಲೇಖವಿದೆ.ಕ್ರಿ.ಶ.1733ರಲ್ಲಿ ಕೊಡಗಿನ ಪಾಳೆಯಗಾರರು ದೇವಸ್ಥಾನ ಅಪಾರ ಸಂಪತ್ತು ಹಾಗೂ ತಾಮ್ರದ ತಗಡು ಇತ್ಯಾದಿಗಳನ್ನು ಅಪಹರಿಸಿರುತ್ತರೆ. ಶ್ರೀ ದೇವಳದ ನವೀಕರಣ ಕಾಲದಲ್ಲಿ ಉಂಟಾದ ವೈಮನಸ್ಸಿನಿಂದ ಮಂಗಳೂರು ನಗರದ ಶ್ರೀ ಮ್ಹಾಳ ಪೈ ಮನೆತನದವರ ಹಿರಿತನದಲ್ಲಿ ಹೊಸ ತಿರುಮಲ ದೇವಸ್ಥಾನವೆಂದು ನೂತನ ದೇವಾಲಯದ ನಿರ್ಮಾಣವಾಯಿತು.ಕ್ರಿ.ಶ.1736ರಲ್ಲಿ ಶ್ರೀ ಶ್ರೀನಿವಾಸ ದೇವರು, ಮೂಲ ವೆಂಕಟರಮಣ ದೇವರು ಹಾಗೂ ಶ್ರೀ ವೀರ ವಿಠ್ಠಲ ದೇವರ ಆರಾಧನೆ ನಡೆಯುತ್ತಿರುವ ಹೊಸ ತಿರುಮಲ ದೇವಸ್ಥಾನದಲ್ಲಿ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಿಂದ ಶ್ರೀ ಗೋಪಾಲಕೃಷ್ಣ ದೇವರ ಕಂಚಿನ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಲಾಯಿತು.

ಶ್ರೀ ದೇವಳದಲ್ಲಿ ಈಗ ರಾರಾಜಿಸುವ ಕಟಿಯಲ್ಲಿ ಖಡ್ಗವನ್ನು ಧರಿಸಿದ ಅಪ್ರತಿಮ ಸುಂದರ ಶ್ರೀ ವೀರವೆಂಕಟೇಶ ದೇವರ ಪಂಚಲೋಹ ವಿಗ್ರಹವನ್ನು ಕ್ರಿ.ಶ.1804 ರಕ್ತಾಕ್ಷಿ ಸಂವತ್ಸರದ ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಶ್ರೀ ಸಂಸ್ಥಾನ ಕಾಶೀಮಠಾಧಿಪತಿ ಶ್ರೀಮದ್ ವಿಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯಹಸ್ತಗಳಿಂದ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆಗೈದು, ಉತ್ಸವಾದಿಗಳು ನಡೆಯಿತೆಂದು ಶ್ರೀ ದೇವಳದ ಐತಿಹ್ಯದಿಂದ ತಿಳಿದು ಬರುತ್ತದೆ.ತದನಂತರ ಈ ದೇವಾಲಯವನ್ನು ಕೊಡಿಯಾಲ ಶ್ರೀ ವೆಂಕಟರಮಣ ದೇವಸ್ಥಾನವೆಂದು ಕರೆಯುವಂತಾಯಿತು.

ಈ ಸುಂದರವಾದ ಮೂರ್ತಿಯನ್ನು ಊರಿಂದೂರಿಗೆ ತಿರುಗುತ್ತಿದ್ದ ಒಬ್ಬ ಸನ್ಯಾಸಿಯು ಸುಮಾರು ಇನ್ನೂರು ವರ್ಷಗಳ ಹಿಂದೆ ಮಂಗಳೂರಿನ ವೆಂಕಟರಮಣ ದೇವಸ್ಥಾನದ ಹೊರಗಡೆ ಇದ್ದ ಅಶ್ವತಮರದ ಕೆಳಗೆ ಇಟ್ಟುಕೊಂಡು ಕುಳಿತಿದ್ದ.ಭಕ್ತರು ಹಾಕಿದ ಕಾಣಿಕೆಯನ್ನು ಸಂಗ್ರಹಿಸಿ ಮುಂದಿನ ಊರಿಗೆ ಹೊರಡುವವನಿದ್ದ. ರಥಬೀದಿಯಲ್ಲಿ ಈ ಮೂರ್ತಿಯನ್ನು ಕಂಡವರು ಅದನ್ನು ತಮ್ಮದೇ ದೇವಾಲಯಕ್ಕೋಸ್ಕರ ಕೊಡಬೇಕೆಂದು, ಅದಕ್ಕೆ ತಕ್ಕ ಪ್ರತಿಫಲವನ್ನು ಕೊಡುವುದಾಗಿ ಹೇಳಿದರೂ ಒಪ್ಪದೆ, ಅಲ್ಲಿಂದ ಈ ಮೂರ್ತಿಯನ್ನು ಹಿಡಿದುಕೊಂಡು ಕೆಳಗಿನ ರಥಬೀದಿಯ ಕಡೆಗೆ ಹೋದನೆಂದೂ, ಕೆಲವು ದಿನಗಳ ಬಳಿಕ ಮಂಗಳೂರು ಸಾಹುಕಾರ ತಿಮ್ಮ ಪೈಯವರ ಭಂಡಸಾಲೆಗೆ ಬಂದ ಈ ಸನ್ಯಾಸಿಯು ತನ್ನ ಬಳಿ ಇದ್ದ ಒಂದು ಬಟ್ಟೆಯಲ್ಲಿ ಕಟ್ಟಿದ ಮೂಟೆಯನ್ನು ಕೆಲವು ದಿನಗಳವರೆಗೆ ಪೈಯವರ ಭಂಡಸಾಲೆಯಲ್ಲಿ ನ್ಯಾಸವಾಗಿ ಇಟ್ಟುಕೊಳ್ಳಬೇಕೆಂದೂ ಇಂತಿಷ್ಟು ದಿನಗಳ ಬಳಿಕ ತಾನು ಇದನ್ನು ಮರಳಿ ಪಡೆಯುವನೆಂದು ಹೇಳಿ, ಒಂದು ವೇಳೆ ತಾನು ಹೇಳಿದ ಸಮಯಕ್ಕೆ ಬರದೆ ಇದ್ದರೆ, ಈ ಮೂಟೆಯಲ್ಲಿರುವುದನ್ನು ತಮಗೆ ಉಚಿತ ಕಂಡಂತೆ ಬಳಸಬಹುದೆಂದೂ ಹೇಳಿ ಹೋದನಂತೆ. ಸಮಯ ಕಳೆದರೂ ಆತ ಬರಲಿಲ್ಲ.ಪೈಗಳಿಗೆ ತಮ್ಮ ವ್ಯಾಪಾರದ ಭರದಲ್ಲಿ ಈ ಮೂಟೆಯ ನೆನಪೂ ಆಗಲಿಲ್ಲ.ಒಂದು ದಿನ ಭಂಡಸಾಲೆಯಿಂದ ಹೊಗೆ ಬರುತ್ತಿದ್ದುದನ್ನು ಗಮನಿಸಿ,

ಆ ಸನ್ಯಾಸಿ ಹೇಳಿದ್ದ ಮಾತುಗಳನ್ನು ನೆನಪಿಗೆ ತಂದುಕೊಂಡು ಆ ಮೂಟೆಯನ್ನು ಬಿಚ್ಚಿ ನೋಡುವಾಗ, ಈ ಸುಂದರವಾದ ಮೂರ್ತಿಯನ್ನು ಕಂಡರಂತೆ.ಸಮಾಜದ ಇತರ ಗಣ್ಯರೊಂದಿಗೆ ಸಹಚಿಂತನೆ ಮಾಡಿ ಸಮಾಜದ ಧರ್ಮಗುರುಗಳಾದ ಶ್ರೀ ಕಾಶಿಮಠಾಧೀಶರ ಆದೇಶದಂತೆ ನಡೆದುಕೊಳ್ಳುವ ನಿರ್ಧಾರ ಕೈಗೊಂಡರು.ಅದರಂತೆ ಆ ಸಮಯದಲ್ಲಿ ಮಂಜೇಶ್ವರ ಸ್ವಮಠದಲ್ಲಿ ಮೊಕ್ಕಾಮು ಹೂಡಿ, ಅಲ್ಲಿಯ ದುರಸ್ತಿ ಕಾರ್ಯಗಳ ಮೇಲ್ವಿಮಾರಣೆ ನಡೆಸುತ್ತಿದ್ದ ಶ್ರೀಮದ್ ಶ್ರೀ ವಿಬುಧೇಂದ್ರ ತೀರ್ಥ ಶ್ರೀಪಾದಂಗಳವರ ಚರಣ ಕಮಲಗಳಲ್ಲಿ ನಿವೇದಿಸಿಕೊಂಡಾಗ, ಸರ್ವಾಂಗ ಸುಂದರ, ಭವ್ಯ ಶ್ರೀ ವೀರವೆಂಕಟೇಶ ಮೂರ್ತಿಯನ್ನು ಕಂಡು ಪ್ರಸನ್ನ ಚಿತ್ತರಾದ ಶ್ರೀಪಾದಂಗಳವರು, ಮಂಗಳೂರಿನ ವೆಂಕಟರಮಣ ದೇವಸ್ಥಾನದಲ್ಲಿಟ್ಟು ಪೂಜಿಸಿ, ಆರಾಧಿಸಿರೆಂದು ಹರಸಿದರು.ಈಗ ಶ್ರೀ ದೇವಳದ ಗರ್ಭಗುಡಿಯಲ್ಲಿ ಶ್ರೀದೇವಿ, ಭೂದೇವಿ ಸಹಿತ ಶ್ರೀ ವೀರವೆಂಕಟೇಶ ದೇವರಲ್ಲದೆ, ಶ್ರೀಮೂಲ ವೆಂಕಟರಮಣ, ಗರುಡವಾಹನ, ಶ್ರೀಗೋಪಾಲಕೃಷ್ಣ ಹಾಗೂ ಶ್ರೀ ವೀರ ವಿಠಲ ದೇವರನ್ನು, ಶ್ರೀ ಶ್ರೀನಿವಾಸ ದೇವರನ್ನು ಉತ್ಸವಮೂರ್ತಿಯಾಗಿಯೂ ಆರಾಧಿಸಲಾಗುತ್ತಿದೆ.ಶ್ರೀ ದೇವಸ್ಥಾನದ ನಾಲ್ಕು ಮೂಲೆಗಳಲ್ಲಿ ಚಿಕ್ಕದಾದ ಗುಡಿಗಳಲ್ಲಿ ಪರಿವಾರ ದೇವರುಗಳಾದ ಶ್ರೀಪ್ರಾಣ,

ಶ್ರೀಗಣಪತಿ, ಶ್ರೀಲಕ್ಷಿ, ಶ್ರೀಗರುಡ ದೇವರ ಶಿಲಾ ವಿಗ್ರಹಗಳು ಆರಾಧಿಸಲ್ಪಡುತ್ತಿವೆ.

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಆಚರಿಸುವ ಸರ್ವೇ ಸಾಧಾರಣ ಎಲ್ಲಾ ಹಬ್ಬಗಳನ್ನು ಈ ದೇವಸ್ಥಾನದಲ್ಲಿ ಆಚರಿಸುತ್ತಾರೆ.ಚೈತ್ರ ಶುದ್ಧ ಪಾಡ್ಯ ಯುಗಾದಿಯಿಂದ ವೈಶಾಖ ಶುದ್ಧ ಪೂರ್ಣಿಮೆಯವರೆಗೆ ವಸಂತ ಮಾಸದಲ್ಲಿ ಪ್ರತಿ ದಿವಸ ರಾತ್ರಿ ವಸಂತಪೂಜೆ ಹಾಗೂ ಈ ಸಮಯದಲ್ಲಿ ಬರುವ ಶ್ರೀ ರಾಮನವಮಿ, ಶ್ರೀ ಹನುಮಂತ ಜಯಂತಿ, ಅಕ್ಷಯ ತದಿಗೆ, ಶ್ರೀ ನರಸಿಂಹ ಜಯಂತಿ ಹಾಗೂ ವೈಶಾಖ ಹುಣ್ಣಿಮೆಯಂದು ಉತ್ಸವ, ಅವಭೃತ ನಡೆಸಲಾಗುತ್ತದೆ.ಶ್ರಾವಣ ಮಾಸದಲ್ಲಿ ಶ್ರಾವಣ ಮಾಸದ ಹೂವಿನ ಪೂಜೆ ಹಾಗೂ ಆಶ್ವೀಜ ಶು 10 ಕಾರ್ತಿಕ ಶು 10ರ ವರೆಗಿನ ಕಾರ್ತಿಕ ಮಾಸದಲ್ಲಿ ಪಶ್ಚಿಮ ಜಾಗರ ಪೂಜೆಯು ಬಹಳಷ್ಟು ವಿಜೃಂಭಣೆಯಿಂದ ನಡೆಯುತ್ತದೆ.

ಶ್ರೀ ದೇವಳದಲ್ಲಿ ಅನಾದಿಯಿಂದಲೂ ಶ್ರೀಅನಂತವೃತ, ದೀಪೋತ್ಸವ, ರಥೋತ್ಸವ ಇತ್ಯಾದಿ ಉತ್ಸವಗಳು ನಡೆದುಕೊಂಡು ಬಂದಿರುತ್ತದೆ.ಪ್ರತಿ ಮಾಘ ಮಾಸದಲ್ಲಿ ವಿಜೃಂಭಣೆಯಿಂದ ಜರಗುವ ರಥೋತ್ಸವವನ್ನು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತ್ರೋಪಾದಿಯಲ್ಲಿ ಆಚರಿಸಲ್ಪಡುತ್ತದೆ.

ಶ್ರೀ ದೇವಳದಲ್ಲಿ ಶ್ರೀ ದೇವರ ಪ್ರತಿಷ್ಠಾವರ್ಧಂತಿ, ಶ್ರೀ ಗಣೇಶ ಚೌತಿ, ಶ್ರೀಅನಂತವೃತ, ಕಾರ್ತಿಕ ದೀಪೋತ್ಸವ, ಮುಕ್ಕೋಟಿ ದ್ವಾದಶಿ ಉತ್ಸವವಲ್ಲದೆ ಪ್ರತಿ ಮಾಘ ಮಾಸದಲ್ಲಿ ಜರಗುವ ಶ್ರೀ ರಥೋತ್ಸವವು ಪಶ್ಚಿಮ ಕರಾವಳಿ ಅತೀ ಪ್ರಾಮುಖ್ಯ ಮಹೋತ್ಸವವಾಗಿದ್ದು ಊರ ಪರವೂರಿನಲ್ಲಿರುವ ಸಮಾಜ ಬಾಂಧವರ"ಸಹಮಿಲನ"ದ ಸುಸಂದರ್ಭವಾಗಿರುತ್ತದೆ."ಈ ವರ್ಷದ ರಥೋತ್ಸವ ವೈಭವ ಎಂದೂ ನಡೆದಿಲ್ಲ"ಎಂಬುದೇ ರಥೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವ ಭಕ್ತರ ಉದ್ಗಾರವಾಗಿರುತ್ತದೆ. ಮಾಘ ಶುದ್ಧ(ರಥ)ಸಪ್ತಮಿಯಂದು ಸಂಜೆ ನಡೆಯುವ ರಥಾರೋಹಣ, ರಾತ್ರಿ ಬ್ರಹ್ಮ ರಥೋತ್ಸವ

ಎಂದಿನ ವೈಭವ"ಈ ಪರಿಯ ವೈಭವ ಯಾವ ದೇವರಲೂ ನಾ ಕಾಣೆ"ಎಂಬುದನ್ನು ಸಾರುತ್ತದೆ.

ದಿನಂಪ್ರತಿ ಶ್ರೀ ದೇವರಿಗೆ ಪಂಚಾಮೃತ, ಗಂಗಾಭಿಷೇಕ, ಸಹಸ್ರನಾಮಾರ್ಚನೆ, ನಂದಾದೀಪ, ಪುಳಕಾಭಿಷೇಕ ಅಲ್ಲದೆ ತ್ರಿಕಾಲಪೂಜೆಗಳನ್ನು ಮಾಡಲಾಗುತ್ತದೆ.ಪ್ರತಿ ಕಾರ್ತಿಕ ಶುದ್ದ 12ರಿಂದ ನಂತರದ ಸಂವತ್ಸರದ ವೈಶಾಖ ಶು15ರ ವರೆಗಿನ ಉತ್ಸವದ ದಿವಸಗಳಲ್ಲಿ ಯಾವತ್ತೂ ಶಾಶ್ವತ ಉತ್ಸವಗಳಲ್ಲದೆ ಪ್ರತಿ ಶನಿವಾರ(ಏಕಾದಶಿ ಹೊರತು)ಮತ್ತು ದಶಮಿಯಂದು ಶ್ರೀ ದೇವರ ಉತ್ಸವ ನಡೆಯುತ್ತದೆ.

ಅನೇಕ ಕುಲೀನ ಗೌಡ ಸಾರಸ್ವತ ಬ್ರಾಹ್ಮಣ ಮನೆ ತನದವರು ಶ್ರೀದೇವಳದ ಅಭ್ಯುದಯಕ್ಕಾಗಿಯೂ ಶ್ರೀ ದೇವಳದಲ್ಲಿ ನಡೆಯುವ ನಿತ್ಯಪೂಜೆ, ಅಮೃತಪಡಿ, ನಂದಾದೀಪ, ಉತ್ಸವ ಮಹೋತ್ಸವ, ಆರಾಧನೆ, ಸಮಾರಾಧನೆ ಹಾಗೂ ಇನ್ನಿತರ ಅಭಿವೃದ್ಧಿಪರ ಕಾರ್ಯಚಟುವಟಿಕೆಗಳಲ್ಲಿ ಪ್ರಶಂಸಾರ್ಹ ಸೇವೆ ಸಲ್ಲಿಸುತ್ತಾರೆ.

ಶ್ರೀದೇವಾಲಯದ ಪ್ರಾರಂಭದಿಂದಲೂ ನಡೆಸಿಕೊಂಡು ಬಂದಿರುವ ಭಜನೆ-ಕೀರ್ತನೆ ಮಂಡಳಿಗೆ 1962ರಲ್ಲಿ ಕಾಶೀಮಠಾಧಿಪತಿ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ" ಶ್ರೀವೀರವೆಂಕಟೇಶ ಭಜನಾ ಮಂಡಳಿ" ಎಂದು ನಾಮಕರಣಗೈದು ಹರಸಿದರು.ಪ್ರಸ್ತುತ ಈ ಮಂಡಳಿಯ ಮೇಲ್ವಿಚಾರಣೆಯನ್ನು ಶ್ರೀ ಕಟೀಲು ಗೋವಿಂದ ಪೈ ಹಾಗೂ ನಿಡ್ಡೋಡಿ ವಿಠ್ಠಲ್ ನಾಯಕರು ವಹಿಸಿಕೊಂಡಿರುವರು.

ಶ್ರೀ ದೇವಳದ ವತಿಯಿಂದ ನಡೆದುಕೊಂಡು ಬಂದಿರುವ ಶ್ರೀ ಶ್ರೀನಿವಾಸ ನಿಗಮಾಗಮ ಪಾಠಶಾಲೆ ಶ್ರೀ ಕಾಶೀಮಠ ಸಂಸ್ಥಾನದ ಮಾರ್ಗದರ್ಶನ ಹಾಗೂ ಆಜ್ಞಾನುಸಾರ ನಡೆದುಕೊಂಡು ಬಂದಿರುತ್ತದೆ, ಶ್ರೀ ಶ್ರೀನಿವಾಸ ಪಾಠಶಾಲಾ ಕಿರಿಯ ಪ್ರಾಥಮಿಕ ಶಾಲೆ ಹಾಗೂ, ಶ್ರೀ ಶ್ರೀನಿವಾಸ ಪಾಠಶಾಲಾ ಓರಿಯಂಟಲ್ ಹೈಸ್ಕೂಲ್, ನಲಂದ ಇಂಗ್ಲೀಷ್ ಮೀಡಿಯಂ ಸ್ಕೂಲ್‍ಗಳನ್ನು ಶ್ರೀ ಸಂಸ್ಥಾನ ಕಾಶೀಮಠಾಧೀಶರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ದೇವಳದ ಮೊಕ್ತೇಸರರಿಂದೊಡಗೂಡಿದ ಸಮಿತಿ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಹೋತ್ಸವ ಕಾಲಗಳಲ್ಲಿ ಶ್ರೀ ದೇವರ ಸೇವೆಗೈಯ್ಯಲು ಭಾಗವಹಿಸುವ ಸಹಸ್ರಾರು ಸ್ವಯಂಸೇವಕರ ಶಿಸ್ತುಬದ್ಧ ಸೇವಾ ಕೈಂಕರ್ಯಗಳಿಂದ ಶ್ರೀ ದೇವರ ಉತ್ಸವ, ಸಮಾರಾಧನೆ ಇತ್ಯಾದಿ ಕ್ಲಪ್ತ ಕಾಲದಲ್ಲಿ ಯಾವೊಂದೂ ಲೋಪದೋಷಗಳಿಲ್ಲದೆ ಶ್ರೀ ವೆಂಕಟರಮಣನ ವೈಭವಕ್ಕೆ ಚ್ಯುತಿ ಬಾರದ ರೀತಿಯಿಂದ ನಡೆದುಕೊಂಡು ಬಂದಿರುತ್ತಾರೆ ಹಾಗೂ ಶ್ರೀ ವೀರವೆಂಕಟೇಶ ದೇವರ ಕೃಪೆಯಿಂದ ಮುಂದೆಯೂ ಸೇವೆಯನ್ನು ನಡೆಸುವ ಆಶಯವನ್ನು ಹೊಂದಿರುತ್ತಾರೆ.

 ಶ್ರೀಕಾಶೀಮಠ ಸಂಸ್ಥಾನವು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಒಂದು ವೈಷ್ಣವಧರ್ಮಪೀಠ.ಶ್ರೀರಾಮಚಂದ್ರದೇವರು, ಶ್ರೀವೇದವ್ಯಾಸ ದೇವರು, ಮತ್ತು ಶ್ರೀಉಗ್ರನರಸಿಂಹ ದೇವರು, ಶ್ರೀಮಠದ ಆರಾಧ್ಯ ದೇವರಾಗಿದ್ದಾರೆ.ಭಗವಾನ್ ಶ್ರೀವೇದವ್ಯಾಸರು ತಮ್ಮ ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಆದಿಗುರುಗಳಾಗಿರುತ್ತಾರೆ.ಭಗವಾನ್ ವೇದವ್ಯಾಸರು ವೇದಮಂತ್ರಗಳ ವಿಭಜನೆಗೈದು ಅಷ್ಟಾದಶ ಪುರಾಣಗಳನ್ನು ರಚಿಸಿ ಒಂದು ಲಕ್ಷ ಶ್ಲೋಕಗಳಿಂದೊಡಗೂಡಿದ ಮಹಾಭಾರತವನ್ನು ರಚಿಸಿ ಉಪನಿಷತ್ ಗಳನ್ನು ಅನುಗ್ರಹಿಸಿ ಇವೆಲ್ಲರ ಸಾರಗಳು ಮನವರಿಕೆಯಾಗಲು ಬ್ರಹ್ಮಸೂತ್ರಗಳನ್ನು ರಚಿಸಿ ಜ್ಞಾನ-ಭಕ್ತಿ-ವೈರಾಗ್ಯಗಳಿಂದೊಡಗೂಡಿದ ಭಗವತ ಧರ್ಮವನ್ನು ಬೋಧಿಸಿ ವಿಷ್ಣು ಸರ್ವೋತ್ತಮತ್ವದ ಅರಿವು ತಿಳಿಯಲು ಶ್ರೀ ಮದ್ಭಾಗವತವನ್ನು ವಾಙ್ಮಯ ಪ್ರಪಂಚಕ್ಕೆ ನೀಡಿರುವ ಆದ್ಯ ಪ್ರವರ್ತಕರು.

ಶ್ರೀವೇದವ್ಯಾಸರು ವೈಷ್ಣವ-ಶೈವ-ಶಾಕ್ತ-ಗಾಣಪತ್ಯ ಮತ್ತು ಸೌರ ಎಂಬ ಐದು ಧರ್ಮಪೀಠಗಳನ್ನು ಸ್ಥಾಪಿಸಿರುತ್ತಾರೆ.ಧರ್ಮ

ಪ್ರಚಾರವನ್ನು ಮುನ್ನಡೆಸಿದ ಈ ಐದು ಪೀಠಗಳು ಪ್ರಧಾನವಾಗಿ ವಿಷ್ಣುವನ್ನು ಆರಾಧಿಸಿಕೊಂಡು ಬಂದಿರುವಂತಹವುಗಳಾಗಿವೆ.ವ್ತಾಸರಿಂದ ಶುಕ ಮುನಿಗಳಿಗೂ, ಪೈಲ, ಸುಮಂತು, ಜೈಮಿನಿ, ವೈಶಂಪಾಯನ ಎಂಬ ಮುನಿವರೇಣ್ಯರಿಗೆ ಈ ಧರ್ಮಪೀಠಗಳ ಉಸ್ತುವಾರಿಯನ್ನು ವಹಿಸಿಕೊಟ್ಟರು.ಶ್ರೀ ಶುಕಾಚಾರ್ಯರು ಮತ್ತು ಮಹರ್ಷಿ ದೂರ್ವಾಸರು ರುದ್ರಾಂಶ ಸಂಭೂತರಾಗಿ ಭಾಗವತ ಧರ್ಮವನ್ನು ಪ್ರಚಾರಗೈದವರಲ್ಲಿ ಶ್ರೇಷ್ಠರು.ಮಹರ್ಷಿ ದೂರ್ವಾಸರು ಗುರುಕುಲ ಕ್ರಮವನ್ನು ಋಷಿ ಪರಂಪರೆಯಿಂದ ಮಠ ಪರಂಪರೆಯನ್ನಾಗಿಸಿಪರಿವರ್ತಿದವರು.ಕ್ರಮೇಣ ಜೈನ ಮತ್ತು ಬುದ್ಧ ಮತಾವಲಂಭಿಗಳ ಸಂಘರ್ಷಣೆಯ ಪರಿಣಾಮವಾಗಿ ಋಷಿ ಪರಂಪರೆಯನ್ನು ಯತಿ

ಪರಂಪರೆಯಾಗಿ ಮಾರ್ಪಾಡು ಮಾಡಲಾಯಿತು.ಆ ಕಾಲದಲ್ಲಿ ಶ್ರೀ ಜ್ಞಾನನಿಧಿ ತೀರ್ಥರು ವೈಷ್ಣವ ಧರ್ಮಪೀಠಕ್ಕೆ ಗುರುಗಳಾಗಿದ್ದರು.ಶ್ರೀ ಜ್ಞಾನನಿಧಿ ತೀರ್ಥರ ಸರಳತೆ-ಸಾತ್ವಿಕತೆ ಹಾಗೂ ತಪಸ್ಸು ವಿದ್ಯಾ ಕುಶಲತೆಗಳು ಯಾರನ್ನು ಬೆರಗುಗೊಳಿಸುವಂತಿತ್ತು.ವೈಷ್ಣವ ಧರ್ಮಾವಲಂಬಿಗಳಾದ ಗುಪ್ತ ಸಾಮ್ರಾಜ್ಯದ ಸಾಮ್ರಾಟರು ಶ್ರೀ ಜ್ಞಾನನಿಧಿ ತೀರ್ಥರನ್ನು ರಾಜಗುರುಗಳೆಂದು ಮಾನ್ಯತೆ ನೀಡಿರುವುದು ಇತಿಹಾದಲ್ಲಿ ಕಂಡುಬರುತ್ತದೆ.ಈ ಮಠದ ಐತಿಹ್ಯದಂತೆ ಸಾಮ್ರಾಟ ಸಮುದ್ರ ಗುಪ್ತನು ರಾಜಚಿಹ್ನೆಯಾಗಿ ಒಂದು ಮುದ್ರೆಯನ್ನು ದಯಪಾಲಿಸಬೇಕೆಂದು ಬನ್ನಹಿದಾಗ ಶ್ರೀ ಜ್ಞಾನನಿಧಿ ತೀರ್ಥರು ಶ್ರೀ ಭಗವಂತನ ವಾಹನಗಳಲ್ಲಿ ಮುಖ್ಯನಾದ"ಗರುಡ" ಮುದ್ರೆಯನ್ನು ಅನುಗ್ರಹಿಸಿ ಆಶೀರ್ವದಿಸಿರುವ.ಗುಪ್ತ ಸಾಮ್ರಾಜ್ಯದಂದ ಚಲಾವಣೆಗೆ ಬಂದಿರುವ ನಾಣ್ಯಗಳಲ್ಲಿ ಈ ಮುದ್ರೆಯನ್ನು ಕಾಣಬಹುದಾಗಿದೆ.ಕಾಲಕ್ರಮೇಣ ಅಕ್ಬರ್‍ನ ಕಾಲದಲ್ಲೂ ಈ ವೈಷ್ಣವ ಧರ್ಮಪೀಠಕ್ಕೆ ತುಂಬಾ ಮನ್ನಣೆ ದೊರೆತ ಐತಿಹ್ಯವಿದೆ.ಮೊಗಲರ ಕಾಲದಲ್ಲಿ ಶ್ರೀ ಕ್ಷೇತ್ರ ವಾರಣಾಸಿಯಲ್ಲಿ ಬಂದಂತಹ ದುರ್ಭಿಕ್ಷದ ನಿವಾರಣೆಗಾಗಿ ವೈಷ್ಣವ ಧರ್ಮಪೀಠದ ಅನುಯಾಯಿ ಶಿಷ್ಯ ಶ್ರೀ ನಾರಾಯಣ ಭಟ್ ಎಂಬವರ ಸೂಚಿತ ಪ್ರಾಯಶ್ಚಿತ್ತಗಳಿಂದ ಸುಭಿಕ್ಷ ಉಂಟಾದ ಇತಿಹಾಸವಿದೆ.ಆ ಕಾರಣಕ್ಕಾಗಿ ಶ್ರೀ ಕ್ಷೇತ್ರಕಾಶಿಯಲ್ಲಿ ಬ್ರಹ್ಮಘಾಟ್, ಪಂಚಾಗಂಗಾ ಘಾಟ್, ದುರ್ಗ ಘಾಟ್ ಈ ಪ್ರದೇಶದಲ್ಲಿ ವೈಷ್ಣವ ಧರ್ಮಪೀಠಗಳ ಮಠ ನಿರ್ಮಾಣಕ್ಕಾಗಿ ಭೂದಾನವುಲಭಿಸಿರುತ್ತದೆ.

ಸಾಧಾರಣ ಇದೇ ಕಾಲದಲ್ಲಿ ಮುಸಲ್ಮಾನರ ರಾಜನಾದ ಔರಂಗಜೇಬನ ದಬ್ಬಾಳಿಕೆಯಿಂದ ಬೆಂದು ಹೋದ ಹಿಂದುಗಳಿಗೆ ಶ್ರೀ ಕ್ಷೇತ್ರಕಾಶಿಯಲ್ಲಿ ಶ್ರೀ ಕಾಶೀಮಠವು ಒಂದು ಆಶ್ರಯ ತಾಣವಾಗಿತ್ತು.ಕಾರಣ ಔರಂಗಜೇಬನ ಹಿಂದಿನವರಿಂದಲೇ ಮಠಕ್ಕೆ ಮನ್ನಣೆ ದೊರೆಯುವುದರಿಂದ ರಾಜನ ಸೈನಿಕರಿಂದ ಶ್ರೀ ಕಾಶೀಮಠವು ಸುರಕ್ಷಿತವಾಗಿ ಬಿಡುಗಡೆಯಾಗುವುದರಲ್ಲಿ ಯಶಸ್ವಿಯಾಯಿತು.

ಶ್ರೀಜ್ಞಾನನಿಧಿ ತೀರ್ಥರು ಪರಂಪರೆಯಲ್ಲಿ ಬಂದಿರುವ ಯತಿಗಳ ಕಾಲದಲ್ಲಿ ತೀರ್ಥಯಾತ್ರೆಗೆ ಶ್ರೀ ಕ್ಷೇತ್ರಕಾಶಿಯನ್ನು ಸಂದರ್ಶಿಸಿರುವ ಕಾಲದಲ್ಲಿ ಯತಿಗಳು ಗಂಗಾ ತಟದಲ್ಲಿ ಸ್ನಾನಗೈದು ಧ್ಯಾನಾಸಕ್ತರಾಗಿರುವಾಗ ಅಲ್ಲಿಯೇ ಹತ್ತಿರದಲ್ಲಿ ಧರ್ಭಾಂಗ ರಾಜರ ಧರ್ಮಪತ್ನಿ ಗಂಗಾಸ್ನಾನಕ್ಕೆ ಬಂದು ತಮ್ಮ ಆಭರಣಗಳನ್ನು ಬಿಚ್ಚಿ ತಟದಲ್ಲಿಟ್ಟಲದ್ದರು.ಸ್ನಾನ ಮುಗಿಸಿ ಮೇಲೆ ಬರುವ ಕಾಲದಲ್ಲಿ ಆಭರಣಗಳು ಗೋಚರಿಸದೇ ಯತಿವರ್ಯರ ಮೇಲೆ ಅಪವಾದ ಹೊರೆಸಿ ವಿಚಾರಣೆಗೆ ಗುರಿಪಡಿಸಿದರು.ಶ್ರೀಗಂಗಾಮಾತೆಯ ಮಡಿಲಲ್ಲಿ ನಡೆದ ಈ ಘಟನೆಯ ಸತ್ಯಾಸತ್ಯತೆಯನ್ನು ತಿಳಿಸಲು ಶ್ರೀಗಂಗಾಮಾತೆಯು ತನ್ನೆರಡೂ ಕೈಗಳನ್ನು ನೀರಿನ ಮಧ್ಯದಿಂದ ಎತ್ತಿ ತೋರಿಸುತ್ತಾ, ಯತಿಗಳು ಅಪರಾಧಿಗಳಲ್ಲ ಎಂಬ ಸಾಕ್ಷಿ ತಿಳಿಸಿದ ಘಟನೆಯಂದ ಧರ್ಭಾಂಗ ರಾಜನು ತನ್ನ ಗಂಗಾ ತಟದಲ್ಲಿರುವ(ಬ್ರಹ್ಮಘಾಟ್)ನಲ್ಲಿ ರಾಜ ಮನೆಯನ್ನು ಶ್ರೀ ಯತಿಗಳಿಗೆ ದಾನವಾಗಿ ಕೊಟ್ಟಿರುತ್ತಾರೆ.ತದನಂತರ ಗೂಗ ಭಟ್ಟರೇ ಮೊದಲಾದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ವೈಷ್ಣವ ಗುರುಪೀಠದ ಅನುಯಾಯಿಗಳು ಅಲ್ಲಿ ವಾಸಮಾಡತೊಡಗಿದರು.ಆಮಠಕ್ಕೆ ಶೆಣ್ವೆ ಮಠ, ಕೊಕಣಿ ಮಠ ಎಂದು ಈಗಲೂ ಕರೆಯುತ್ತಾರೆ.ಪ್ರಪ್ರಥಮವಾಗಿ ಶ್ರೀ

ಕ್ಷೇತ್ರ ಕಾಶಿಯಲ್ಲಿ ಭವ್ಯವಾದ ರಾಜಭವನವು ಮಠಕ್ಕೆ ಸ್ಥಿರಾಸ್ತಿಯಾಗಿ ಲಭಿಸಿರುವುದರಿಂದ ಈ ವೈಷ್ಣವ ಮಠ ಪರಂಪರೆಗೆ ಕಾಶೀಮಠ ಸಂಸ್ಥಾನವೆಂದು ಹೆಸರಾಯಿತು.ಕಾಲಕ್ರಮೇಣ ಶ್ರೀ ಸ್ವಾಮೀ ಪುರುಷೋತ್ತಮ ತೀರ್ಥರು ಬಹುಕಾಲ ಪರ್ಯಂತ ಮಂಜೇಶ್ವರ ದೇವಾಲಯದಲ್ಲಿ ಮೊಕ್ಕಾಂ ಮಾಡಿರುವುದಲ್ಲದೇ, ಶ್ರೀಮಧ್ವಾಚಾರ್ಯರಿಗೆ ಇಲ್ಲಿಯೇ ಸಮೀಪದ ಕಣ್ವ ತೀರ್ಥದಲ್ಲಿ ಸನ್ಯಾಸ ದೀಕ್ಷೆ ಕೊಟ್ಟು ಪೂರ್ಣಪ್ರಜ್ಞ ಆನಂದಾ ತೀರ್ಥರೆಂಬುದಾಗಿ ನಾಮಾಭಿದಾನ ಮಾಡಿದರು.

ಶ್ರೀ ಕ್ಷೇತ್ರರಾಮೇಶ್ವರದಲ್ಲಿ ಶ್ರೀ ದೇವಾಲಯದ ಒಳ ಪ್ರಾಕಾರದಲ್ಲಿ ನಲನೀಲಾದಿ ಸರೋವರಗಳ ಮಧ್ಯ ಭಾಗದಲ್ಲಿ ಶ್ರೀ ಕೋದಂಡರಾಮ ದೇವಾಲಯವಿದ್ದು, ಅದರ ಪೂಜಾ ಪುರಸ್ಕಾರಗಳು, ವಿನಿಯೋಗಾದಿಗಳ ಮೇಲ್ವಿಚಾರಣೆಗಳು ಶ್ರೀಕಾಶೀಮಠ ಸಂಸ್ಥಾನದ ಅಧೀನದಲ್ಲಿದೆ. ಶ್ರೀದೇವಾಲಯದ ಪ್ರಧಾನ ದ್ವಾರದ ಬಲಭಾಗದಲ್ಲಿ ಶ್ರೀಸಂಸ್ಥಾನದ ಕಾಶೀಮಠದ ಶಾಖಾಮಠವೂ ಈದೆ.

ಶ್ರೀ ಕ್ಷೇತ್ರ ತಿರುಪತಿಯಲ್ಲೂ ತಿರುಮಲ ಶ್ರೀ ವೆಂಕಟರಮಣ ದೇವಾಲಯದ ಮುಂಭಾಗ ಪುಷ್ಕರಣೀ ತೀರ್ಥದ ಸಮೀಪ ಶ್ರೀ ಕಾಶೀಮಠ ಶಾಖಾ ಮಠವಿತ್ತು ಆದ ಶ್ರೀದೇಳದ ಅಭಿವೃದ್ಧಿ ಯೋಜನೆಯ ನೆಲೆಯಲ್ಲಿ ಇತ್ತೀಚೆಗೆ ಶ್ರೀ ಮಠಕ್ಕೆ ಪರ್ಯಾಯ ಸ್ಥಳವನ್ನಿತ್ತು ಸ್ಥಳಾಂತರಿಸಲಾಗಿದೆ.

ಆ ಕಾಲದಲ್ಲಿ ಆಚಾರ್ಯರು ಮಧ್ವರು ವೈಷ್ಣವ ಮಾಧ್ವ ಸಂಪ್ರದಾಯವನ್ನು ದ್ವೈತ ಸಿದ್ಧಾಂತವನ್ನು ಬೋಧಿಸುತ್ತಾ ಪ್ರಚಾರ ನಿರತರಾಗಿದ್ದರು.ಶ್ರೀಮಧ್ವಾಚಾರ್ಯರ ತತ್ವವಾದವನ್ನು ಅರ್ಥೈಸಿಕೊಂಡು ಬಂದಂತಹ ನಮ್ಮ ಪೂರ್ವಜರು.ಕಾಶೀಮಠದ ಯತಿ ಪರಂಪರೆಯಲ್ಲಿ ಅನೇಕ ಯತಿಗಳು ಉದ್ದಾಮ ಪಂಡಿತರಾಗಿದ್ದು ದಿಗ್ವಿಜಯ ಮಾಡಿ ಕೀರ್ತಿಶಾಲಿಗಳಾಗಿದ್ದಾರೆ.ಈ ಪರಂಪರೆಯ ಏಳನೆಯ ಯತಿಗಳಾದ ಶ್ರೀ ವಿದ್ಯಾನಿಧಿ ತೀರ್ಥರು ತಮ್ಮ ದಕ್ಷಿಣ ಭಾರತದ ತೀರ್ಥಾಟನೆಯ ಕಾಲದಲ್ಲಿ ರಾಮೇಶ್ವರಕ್ಕೆ ಬಂದು, ಅಲ್ಲಿ ದೇವಸ್ಥಾನ ಪ್ರಾಕಾರದ ಒಳಭಾಗದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು ಆತೀ ಪ್ರಾಚೀನ ಕಾಲದಲ್ಲಿಯೇ ನಿರ್ಮಿಸಿದ ಕೋದಂಡರಾಮ ದೇವರ ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿದುದಲ್ಲದೆ, ತಮ್ಮ ಪೀಳಿಗೆಯವರು ರಾಮೇಶ್ವರಕ್ಕೆ ಬಂದಾಗ ಉಳಕೊಳ್ಳಲು ಅನುಕೂಲವಾಗುವಂತೆ ರಾಮೇಶ್ವರ ದೇವಳದ ಹೆಬ್ಬಾಗಿಲಲ್ಲಿ ಎದುರುಗಡೆ ಬಲಭಾಗದಲ್ಲಿ ಒಂದು ಮಠವನ್ನು ಕಟ್ಟೋಣವನ್ನು ಶ್ರೀಮದ್ ಸುಕೃತೀಂದ್ರ ತೀರ್ಥ ಶ್ರೀಪಾದಂಗಳವರು ಜೀರ್ಣೋದ್ಧಾರ ಮಾಡಿ 1937 ರಲ್ಲಿ ಕೋದಂಡರಾಮ ದೇವರ ಪುನರ್ ಪ್ರತಿಷ್ಠೆಯನ್ನು ನಡೆಸಿದರು.ಶ್ರೀಮದ್ ವಿದ್ಯಾನಿಧಿ ತೀರ್ಥ ಕುಂಭಕೋಣ ಕ್ಷೇತ್ರದಲ್ಲಿ ಅಲ್ಲಿಯ ಅದ್ವೈತಿಗಳನ್ನು ವಾದದಲ್ಲಿ ಸೋಲಿಸಿ, ವಾದದ ಒಪ್ಪಂದದಂತೆ ಅದ್ವೈತಿಗಳಿಂದ ಅವರ ಪೀಠವನ್ನು ಪಡೆದಿದ್ದರು.ಆಪೀಠವನ್ನು ಆಕ್ಷೇತ್ರದಲ್ಲೇ ಕೆಲ ದಿನಗಳ ಹಿಂದೆ ಬಂದು ತಳವೂರಿದ್ದ ಆರ್ಕಾಟು ಮಠ, ರಾಯರ ಮಠ, ನಂಜನಗೂಡು ಮಠ ಎಂಬಿತ್ಯಾದಿ ಕರೆಯಲ್ಪಡುವ ಪೀಠದ ಶ್ರೀ ರಾಘವೇಂದ್ರ ತೀರ್ಥರಿಗೆ ಕಾಣಿಕೆಯಾಗಿ ಒಪ್ಪಿಸಿದ್ದರು. ಶ್ರೀ ರಾಘವೇಂದ್ರ ತೀರ್ಥರು ಶ್ರೀಮದ್ ವಿದ್ಯಾನಿಧಿ ತೀರ್ಥರಿಗೆ ವಿದ್ಯಾಗುರುಗಳಾಗಿದ್ದರೆಂದು ಕಾಣುತ್ತದೆ.ಅಲ್ಲಿಂದ ಮುಂದೆ ಆ ಮಠಕ್ಕೆ'ಕುಂಭಕೋಣ ಮಠ"ಎಂದೂ ಹೆಸರು ಬಂತು ಶ್ರೀಮದ್ ವಿದ್ಯಾನಿಧಿ ತೀರ್ಥರು ಅನೇಕ ಸ್ಥಳಗಳಲ್ಲಿ ದೇವಳನ್ನೂ ನಿರ್ಮಿಸಿರುತ್ತಾರೆ.

ವ್ಯಾಸತೀರ್ಥ ಯತಿಗಳವರಲ್ಲಿ ವಿದ್ಯಾಭ್ಯಾಸವನ್ನು ನಡೆಸಿಕೊಂಡು ಬರುವ ಕಾಲದಲ್ಲಿ ಕುಂಭಕೋಣ ಮಠದ ಪರಮಾಚಾರ್ಯರಾದ ಶ್ರೀ ಸುರೀಂದ್ರತೀರ್ಥ ಯತಿವರ್ಯರಿಗೆ ಜೈನ ಹಾಗೂ ಬೌದ್ಧ ಭಿಕ್ಷುಗಳಿಂದ, ಅದ್ವೈತಿಗಳಿಂದಲೂ ವೈಷ್ಣವ ಸಿದ್ಧಾಂತ ಪ್ರತಿಷ್ಠಾಪನೆಗೆ ಒದಗಿದ ತೊಂದರೆಯಿಂದಾಗಿ ಮಠ ಪರಂಪರೆಯನ್ನು ಮುನ್ನಡೆಸಿಕೊಂಡು ಬರುವರೇ ಸಮರ್ಥ ಧೀಮಂತ ಉತ್ತರಾಧಿಕಾರಿಯನ್ನು ನೇಮಿಸುವ ಇಚ್ಛೆಯಿಂದ ವ್ಯಾಸತೀರ್ಥರಲ್ಲಿ ಆತಿಥ್ಯ ಸ್ವೀಕರಿಸಿ ವಿಷ್ಣುತೀರ್ಥರನ್ನು ನಮ್ಮ ಪರಂಪರೆಯ ಭವಿಷ್ಯದ ಬಗ್ಗೆ ಯಾಚಿಸಿದರು.ಸದ್ಧರ್ಮ ನಿರತ ಶ್ರೀ ವ್ಯಾಸತೀರ್ಥರನ್ನು ಶ್ರೀ ಸುರೀಂದ್ರತೀರ್ಥರಿಗೆ ವಿಷ್ಣು ತೀರ್ಥರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ಅನುಮತಿಯಿತ್ತರು.ತದನಂತರ ಕುಂಭಕೋಣ ಮಠದ ಉತ್ತರಾಧಿಕಾರಿಯಾಗಿ ವಿಷ್ಣುತೀರ್ಥರು ನೇಮಕಗೊಂಡರು.ಈ ಯತಿಗಳನ್ನು ಶ್ರೀವಿದ್ಯಾವಾರಿಧಿ ತೀರ್ಥರೆಂದು ಪುನರ್ನಾಮಕರಣಗೈದರು.ಮುಂದಕ್ಕೆ ಶ್ರೀಮನ್ ಮಧ್ವಾಚಾರ್ಯರ ತತ್ವ ವಾದವನ್ನು ಸಮರ್ಥಿಸುತ್ತಾ ಶ್ರೀಮದ್ವೈಷ್ಣವ ಸಿದ್ಧಾಂತದ ಭಾಗವತ ವೈಷ್ಣವ ಧರ್ಮವನ್ನು ಸಾರುತ್ತ ದಿಗ್ವಿಜಯಗೈದು ಹತ್ತು ಹಲವು ಪಂಡಿತೋತ್ತಮರನ್ನು ವಾದದಲ್ಲಿ ಸೋಲಿಸಿ ಆಚಾರ್ಯ ಮಧ್ವರ ತತ್ವವಾದದ ಕೀರ್ತಿಯನ್ನು ಬೆಳಗಿಸಿದರು.ಆದುದರಿಂದ ಶ್ರೀವಿಜಯೇಂದ್ರ ತೀರ್ಥರೆಂಬ ಬಿರುದು ಈ ಯತಿಗಳಿಗೆ ಪ್ರಾಪ್ತವಾಯಿತು.

ಕಾಲಾನಂತರದಲ್ಲಿ ಶ್ರೀವಿಜಯೇಂದ್ರ ತೀರ್ಥರು ಕೊಚ್ಚಿಯಲ್ಲಿ ವಾಸಿಸುತ್ತಿರುವ ತಮ್ಮ ಗೌಡ ಸಾರಸ್ವತ ಬ್ರಾಹ್ಮಣ ಶಿಷ್ಯರ ಕೇಳಿಕೆಯನ್ನು ಮನ್ನಿಸಿ ಗೌಡ ಸಾರಸ್ವತ ಸಮಾಜದ ಹನುಮಂತ ಭಟ್ಟನೆಂಬ ವಟುವಿಗೆ ಶ್ರೀಯಾದವೇಂದ್ರ ತೀರ್ಥರೆಂಬ ಅಭಿಧಾನದಿಂದ ಕಾಶೀ ಕ್ಷೇತ್ರದ ಗಂಗಾತೀರದಲ್ಲಿರುವ ಸ್ವಮಠದಲ್ಲಿ ಸನ್ಯಾಸ ದೀಕ್ಷೆಯನ್ನಿತ್ತು ಹರಸಿದರು.

ಶ್ರೀಯಾದವೇಂದ್ರ ತೀರ್ಥ ಯತಿಗಳಿಗೆ ದೀಕ್ಷಾ ನಂತರ ಕುಂಭಕೋಣ ಮಠ, ಉತ್ತರಾದಿ ಮಠ, ಕೈವಲ್ಯ ಮಠ, ಗೋಕರ್ಣ ಮಠ, ರಾಯರ ಮಠ, ಉಡುಪಿ ಅಷ್ಟ ಮಠ ಇತ್ಯಾದಿ ಅನೇಕ ಯತಿಗಳ ಸಮಾವೇಶದೊಂದಿಗೆ ಪರಸ್ಪರ ಸ್ನೇಹ, ಸೌಹಾರ್ದತೆಗಳೊಂದಿಗೆ, ಧರ್ಮ ರಕ್ಷಣೆಯೊಂದಿಗೆ ಧರ್ಮಪ್ರಚಾರ ಕರ್ತವ್ಯ ನಿರತರಾಗಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರೀಕಾಶೀಮಠ ಸಂಸ್ಥಾನವು ಹಲವು ಕಾರ್ಯಗಳನ್ನು ಹಮ್ಮಿಕೊಂಡಿರುತ್ತದೆ.ಅದಲ್ಲದೇ ಸಮಾಜದ ಜನಪದ ಮಾರ್ಗದರ್ಶನಗೈದು ಉತ್ಸಾಹದಿಂದ ರಾಷ್ಟ್ರಸೇವೆಯನ್ನು ಗೈದು ಜೀವನವನ್ನು ತತ್ವ ಆದರ್ಶಗಳೊಂದಿಗೆ ನಡೆಸಲು ಆಶೀರ್ವದಿಸಿದರು.

ಶ್ರೀಕಾಶೀಮಠ ಸಂಸ್ಥಾನದ ಪರಂಪರೆಯಲ್ಲಿ ಶ್ರೀಮದ್ ಯಾದವೇಂದ್ರ ತೀರ್ಥರು, ಶ್ರೀಮದ್ ರಾಘವೇಂದ್ರ ತೀರ್ಥರು, ಶ್ರೀಮದ್ ಮಾಧವೇಂದ್ರ ತೀರ್ಥರಂತಹ ಮಹಾ ವಿದ್ವಾಂಸರು, ಪ್ರತಿಭಾ ಸಂಪನ್ನ ಯತಿವರ್ಯರು ಶ್ರೀಸಂಸ್ಥಾನದ ಗುರುಪೀಠವನ್ನಲಂಕರಿಸುತ್ತಾರೆ. ಶ್ರೀಮಾಧವೇಂದ್ರ ತೀರ್ಥರಿಗೆ ಅತಿಮಾನುಷ್ಯ ಶಕ್ತಿ ಇತ್ತೆಂದು ಹೇಳುತ್ತಾರೆ. ಅವರ ವೃಂದಾವನವು ಮುಂಬಯಿಯ ಬಾಣ ಗಂಗಾತೀರದಲ್ಲಿ ವಾಲ್ಕೇಶ್ವರ ಶಾಖಾ ಮಠದಲ್ಲಿದೆ.ಪ್ರತೀ ವರ್ಷ ಶ್ರಾವಣದಲ್ಲಿ ಇಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮ ನಡೆಯುತ್ತದೆ.ಸಪ್ತಾಹದಲ್ಲಿ ಭಾಗವಹಿಸಲು ಭಜನಾಮಂಡಳಿಗಳು ಮೊದಲು ಶ್ರೀಮದ್ ಮಾಧವೇಂದ್ರ ತೀರ್ಥರ ವೃಂದಾವನದ ಮುಂದೆ ಪ್ರಾರ್ಥನೆ ಮಾಡಿ ನಂತರ ಸಪ್ತಾಹ ಭಜನೆಗೆ ನಿಲ್ಲುವ ಸಂಪ್ರದಾಯ ಈಗಲೂ ರೂಢಿಯಲ್ಲಿದೆ.ಶ್ರೀ ಗುರುಗಳ ಮಹಿಮೆಯಿಂದ ಅಲ್ಲಿ ಈಗಲೂ ಅದ್ಭುತಗಳು ನಡೆಯುತ್ತಿವೆ.

ಈ ಯತಿಧರ್ಮವನ್ನು ಸ್ವೀಕರಿಸಿ ಶ್ರೀಮದ್ ಜ್ಞಾನನಿಧಿ ತೀರ್ಥರಿಂದ ಶ್ರೀಮದ್ ವಿಜಯೇಂದ್ರ ತೀರ್ಥ ಯತಿಗಳ ಪರ್ಯಂತರ ಉತ್ತರ ಭಾರತದ ಔತರೇಯ ಸಾರಸ್ವತ ಬ್ರಾಹ್ಮಣರು.ತದನಂತರ ಶ್ರೀಮದ್ ಯಾದವೇಂದ್ರ ತೀರ್ಥರಿಂದ ವರ್ತಮಾನ ಪೀಠಾಧಿಪತಿಗಳಾದ ಶ್ರೀಮತ್ಸುಧೀಂದ್ರ ತೀರ್ಥರೂ ಹಾಗೂ ಶ್ರೀ ಕಾಶೀ ಮಠ ಸಂಸ್ಥಾನದ ಉತ್ತರಾಧಿಕಾರಿಗಳಾದ ಶ್ರೀ ಸಂಯಮೀಂದ್ರ ತೀರ್ಥ ಯತಿಗಳು ದಕ್ಷಿಣ ಭಾರತದ ಗೌಡ ಸಾರಸ್ವತ ಬ್ರಾಹ್ಮಣ ವಟುಗಳಾಗಿರುತ್ತಾರೆ.

ಈ ಪರಂಪರೆಯನ್ನು ಇನ್ನೂ ಕೆಲ ಮಂದಿ ಪ್ರಸಿದ್ದ ಯತಿವರ್ಯರೆಂದು ಶ್ರೀಮದ್ ವಿಭುಧೇಂದ್ರ ತೀರ್ಥರು, ಶ್ರೀಮದ್ ಸಮತೀಂದ್ರ ತೀರ್ಥರು, ಶ್ರೀಮದ್ ವಸುಧೇಂದ್ರ ತೀರ್ಥರು ಮತ್ತು ಶ್ರೀಮದ್ ಭುವನೇಂದ್ರ ತೀರ್ಥರು, ಶ್ರೀಮದ್ ವರದೇಂದ್ರ ತೀರ್ಥರು, ಶ್ರೀಮದ್ ಸುಕೃತೀಂದ್ರ ತೀರ್ಥರು.

ವರ್ತಮಾನ ಮಠಾಧಿಪತಿಗಳಾದ ಶ್ರೀಮದ್ ಸುಧೀಂದ್ರ ತೀರ್ಥರು ಈ ಪೀಳಿಗೆಯಲ್ಲಿ ಅವರ ಗುರುವರ್ಯರಾಗಿದ್ದ ಶ್ರೀಮದ್ ಸುಕೃತೀಂದ್ರ ತೀರ್ಥರು, ಶ್ರೀಮದ್ ಭುವನೇಂದ್ರ ತೀರ್ಥರ ಶಿಷ್ಯರಾದ ಶ್ರೀಮದ್ ವರದೇಂದ್ರ ತೀರ್ಥರಿಂದ ದೀಕ್ಷೆ ಪಡೆದಿದ್ದು, ಇವರ ಉತ್ತರಾಧಿಕಾರಿಯಾಗಿ ಶ್ರೀ ಕ್ಷೇತ್ರ ಹರಿದ್ವಾರದ ಶ್ರೀ ವ್ಯಾಸಶ್ರಮದ ಪ್ರಶಾಂತ ವಾತಾವರಣದಲ್ಲಿ ಗಂಗಾತಟದಲ್ಲಿ ಶ್ರೀ ಉಮೇಶ ಮಲ್ಲನ್ ಎಂಬ ವಟುವಿಗೆ ಸನ್ಯಾಸದೀಕ್ಷೆಯಿತ್ತು, ಶ್ರೀ ಸಂಯಮೀಂದ್ರ ತೀರ್ಥರೆಂದು ನಾಮಾಭಿದಾನಗೈದಿರುವರು.ಈ ಪ್ರಕಾರ ವೈಷ್ಣವ ಧರ್ಮ ಪ್ರತಿಷ್ಠಾಪನಾಚಾರ್ಯ ಶ್ರೀ ಕಾಶೀಮಠ ಸಂಸ್ಥಾನಕ್ಕೆ 5000 ವರುಷಕ್ಕೂ ಹಿಂದಿನ ಇತಿಹಾಸವಿದೆ.

ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ

ಮಂಗಳೂರು ರಥೋತ್ಸವ

ಮಂಗಳೂರಿನಲ್ಲಿ ಹಲವು ದೇವಸ್ಥಾನಗಳಿವೆ.ಕೆಲವು ದೇವಸ್ಥಾನಗಳಲ್ಲಿ ರಥಗಳು ಇವೆ.ರಥೋತ್ಸವವೂ ನಡೆಯುತ್ತದೆ.ಆದರೆ"ಮಂಗಳೂರು ರಥೋತ್ಸವ"ವೆಂದರೆ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವವೆಂದೇ ಜನರ ತಿಳುವಳಿಕೆ.ಈ ದೇವಸ್ಥಾನ ಮತ್ತು ಆದರ ರಥೋತ್ಸವದ ಪ್ರಸದ್ಧಿ ಅಂತಹುದು."ರಥಬೀಧಿ"ಎಂದರೆ ಈ ರಥವು ಉತ್ಸವದ ಸಮಯದಲ್ಲಿ ಕ್ರಮಿಸುವ ಬೀದಿ.ವೆಂಕಟ್ರಮಣ ದೇವಾಲಯದ ಹೆಬ್ಬಾಗಿಲಿನಿಂದ ನೇರವಾಗಿ ಪಶ್ಚಿಮಕ್ಕೆ ಹೋಗುವ ದಾರಿ.ಇದನ್ನು ಈಗ ಮೇಲಣ ರಥಬೀಧಿ, ಕೆಳಗಣ ರಥಬೀಧಿ ಎಂದು ಎರಡು ಪಾಲುಗಳನ್ನಾಗಿ ಮಾಡಲಾಗಿದೆ.

ಶ್ರೀ ವೆಂಕಟರಮಣ ದೇವಸ್ಥಾನವು ಪಡುಮೊಗವಾಗಿದೆ.ಎಲ್ಲ ದೇವಾಲಯಗಳಂತೆ ಇದು ಮೊದಲಿಗೆ ಸ್ಥಾಪನೆಯಾದಾಗ ಒಂದು ಗರ್ಭಗುಡಿ ಮಾತ್ರವೇ ಇದ್ದು ಕಾಲಾನುಕ್ರಮದಲ್ಲಿ ಉಪಸ್ಥಾನ ಗುಡಿಗಳಲ್ಲಿ ಮುಖ್ಯಪ್ರಾಣ, ಗಣಪತಿ, ಲಕ್ಷ್ಮೀದೇವಿ ಮತ್ತುಗರುಡ ಪ್ರತಿಷ್ಠೆಯಾಗಿ ಈಗಿರುವ ರೂಪವನ್ನು ಪಡೆಯಿತು.ಈ ದೇವಾಲಯದ ಸ್ಥಾಪನೆ ಮಂಗಳೂರು ಸಾಹುಕಾರ ಪೈಗಳ ಕುಟುಂಬದವರಿಂದ ಆಯಿತೆಂದು ಹಿರಿಯರ ಹೇಳಿಕೆ.ಈ ಮನೆತನದವರು ಈಚಿನವರೆಗೂ ಪ್ರಥಮ ಮೊಕ್ತೇಸರರಾಗಿರುತ್ತಿದ್ದುದು ಹಾಗೂ ರಥೋತ್ಸವದ ಸಮಯದಲ್ಲಿ ರಥದ ಮೇಲೆ ಮೊದಲ ಪ್ರಸಾದವನ್ನು ಸಾಹುಕಾರ ಮನೆತನದವರೇ ಪಡೆಯುತ್ತಿದ್ದುದು.ಈ ಹೇಳಿಕೆಗೆ ಪುಷ್ಠಿಯನ್ನು ಕೊಡುತ್ತದೆ.ಗರ್ಭಗುಡಿಯ ಸ್ಥಾಪನೆ ಹಾಗೂ ಮೂಲ ವೆಂಕಟರಮಣನ ಪ್ರತಿಷ್ಠೆ ಕ್ರಿ.ಶ 1736 ರಲ್ಲಿ ನಡೆಯಿತೆಂದು, ಮುಖ್ಯಪ್ರಾಣ ಹಾಗೂ ಗರುಡ ಗುಡಿಗಳುಸುಮಾರು ಕ್ರಿ.ಶ 1804ರಲ್ಲಿಯೂ, ಗಣಪತಿ ಹಾಗೂ ಲಕ್ಷ್ಮೀದೇವಿ ಗುಡಿಗಳು ಕ್ರಿ.ಶ 1911-1912ರ ಹೊತ್ತಿಗೆ ಕೂಡಿಸಲ್ಪಟ್ಟವೆಂದೂ ತಿಳಿದು ಬರುತ್ತದೆ.1804ರಲ್ಲಿ ಅತಿ ಸುಂದರವಾದ ಶ್ರೀ ವೀರವೆಂಕಟೇಶ ಮೂರ್ತಿಯೊಂದು ಈ ದೇವಾಲಯಕ್ಕೆ ದೊರೆಯಿತೆಂದು, ಆ ಕಾಲದಲ್ಲಿ ಮಂಜೇಶ್ವರದಲ್ಲಿ ಕಾಶೀಮಠದ ಶ್ರೀ ವಿಭುಧೇಂದ್ರ ತೀರ್ಥರ ನಿರೂಪದಂತೆ ಈ ಮೂರ್ತಿಯನ್ನು ಕೂಡ ದೇವಾಲಯದಲ್ಲಿ ಪ್ರತಿಷ್ಠೆ ಮಾಡಿದರೆಂದು ಹೇಳುತ್ತಾರೆ.ದೇವಾಲಯದ ಮೂಲ ವೆಂಕಟರಮಣ ದೇವರು ಮ್ಹಾಳ ಪೈ ಮನೆತನದಿಂದ ಬಂದಿತ್ತೆಂದು ಹೇಳುತ್ತಾರೆ.

ಗೌಡ ಸಾರಸ್ವತ ಸಮಾಜದ ಈ ದೇವಾಲಯವು ವಾಸ್ತುದೃಷ್ಠಿಯಲ್ಲಿ ಜಿಲ್ಲೆಯಲ್ಲಿರುವ ಈ ಸಮಾಜದ ಇತರ ದೇವಾಲಯಗಳಂತೆ ಇದ್ದು, ದೀರ್ಘ ಚತುರಸ್ರ ಗರ್ಭಗುಡಿ, ಇದರ ಸುತ್ತಲೂ ಚೌಕಾಕಾರದಲ್ಲಿ ಪೌಳಿಗಳು, ನಾಲ್ಕು ಮೂಲೆಗಳಲ್ಲಿ ಉಪಸ್ಥಾನ ಗುಡಿಗಳು, ಹೊರಗಿನಿಂದ ವಿಶಾಲವಾದ ಪ್ರಾಂಗಣ, ಪ್ರಧಾನ ದ್ವಾರದ ಮುಂದುಗಡೆ ಧ್ವಜಸ್ತಂಭ, ಗರ್ಭಗುಡಿ ತಾಮ್ರದ ಹೊದಿಕೆಯಿಂದ ಇಳಿಮಾಡು, ಹೊರಾಂಗಣದ ಸುತ್ತಲೂ ಮತ್ತೆ ಚೌಕಾಕಾರದಲ್ಲಿ ದೇವಾಲಯದ ಕಚೇರಿ, ವಾಹನಗಳನ್ನು ಇಡುವ ಕೋಣೆಗಳು, ಯಜ್ಞಶಾಲೆ, ವಸಂತ ಮಂಟಪ ಮೊದಲಾದ ದೇವಾಲಯ ಸಂಬಮಧಿತ ಕಟ್ಟಡಗಳಿವೆ.ಪಡುಮೊಗವನ್ನು ನವೀಕರಿಸಲಾಗಿದ್ದು, ಹೊರಭಾಗದಲ್ಲಿ ಹೊಸಮಾದರಿಯ ಸಿಮೆಂಟ್ ಕಾಂಕ್ರೀಟಿನ ಅಲಂಕಾರಿಕ ಗೊಂಬೆಗಳನ್ನು ಇಟ್ಟಿರುತ್ತಾರೆ.

ಗರ್ಭಗುಡಿಯಲ್ಲಿ ಶ್ರೀಭೂದೇವಿ ಸಹಿತ ಮೂಲ ವೆಂಕಟರಮಣ ದೇವರು ಶ್ರೀ ಭೂದೇವಿ ಸಹಿತ ವೀರವೆಂಕಟೇಶ ದೇವರುಗಳಲ್ಲದೆ ತುಂಬ ಚೆಲುವಿನ ವೇಣುಗೋಪಾಲ ಮೂರ್ತಿಯೂ ಒಂದು ಸುಂದರವಾದ ವಿಠಲ ಮೂರ್ತಿಯೂ ಶ್ರೀಭೂದೇವಿ ಸಹಿತ ಇನ್ನೂ ಒಂದು ವೆಂಕಟರಮಣ ದೇವರ ಮೂರ್ತಿಯೂ ಇದೆ.

ದೇವಾಲಯದ ವಾಹನಗಳಲ್ಲಿ ಬೆಳ್ಳಿಯ ಲಾಲಕಿ, ಪಲ್ಲಕಿಗಳೂ ಹಾಗೂ ಈಚೆಗೆ ನಿರ್ಮಿಸಲಾಗಿರುವ ಅತಿ ಸುಂದರ ಕುಸುರಿ ಕೆಲಸವನ್ನು ಹೊಂದಿರುವ ಚಿನ್ನದ ಪಲ್ಲಕ್ಕಿಯೂ ಇದೆ.

ಮಂಗಳೂರು ರಥೋತ್ಸವದ ಜಾತ್ರೆಯ ಪ್ರಾರಂಭ ಮಾಘ ಶುದ್ಧ ತದಿಗೆಯಂದು ಧ್ವಜಾರೋಹಣದಿಂದ ಪ್ರಾರಂಭವಾಗುತ್ತದೆ. ಆ ದಿನದಿಂದ ಪಂಚಮಿಯವರೆಗೆ ದೇವಾಲಯದ ಒಳಗೆಯೇ ಹೆಚ್ಚಿನ ಕಾರ್ಯಕ್ರಮಗಳು, ಪಲ್ಲಕಿ ಉತ್ಸವ ಇತ್ಯಾದಿ ನಡೆಯುತ್ತವೆ.ಷಷ್ಠಿಯ ದಿನ ಮೃಗಬೇಟೆ ಉತ್ಸವ ಹಾಗೂ ಸಣ್ಣ ತೇರಿನಲ್ಲಿ ದೇವರನ್ನು ಕೂರಿಸಿ ರಥಬೀಧಿಯ ಕೊನೆಯವರೆಗೆ ತೇರು ಎಳೆದು, ಮರಳಿದ ಮೇಲೆ ದೇವಾಲಯದ ಒಳಗಡೆ ಉತ್ಸವಗಳು ಮೃಗಬೇಟೆಗಾಗಿ ದೇವರು ಬೆಳ್ಳಿಯ ಲಾಲಕ್ಕಿಯಲ್ಲಿ ಸವಾರಿಯಾಗಿ ಹೊರಟು ಹಿಂದೆ ವಿಠೋಬ ದೇವಾಲಯ ಮುಂದುಗಡೆ ಇರುವ ಕೆರೆಯ ಹತ್ತಿರದಲ್ಲಿರುವ ಪೊದೆಯೊಂದರಲ್ಲಿ ಅಡಗಿಕೂತ ಮೃಗಕ್ಕೆ ಬಾಣವನ್ನು ಬಿಟ್ಟು ಅಲ್ಲಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ಮಾರ್ಗಗಳ ಮೂಲಕ ದೇವಾಲಯಕ್ಕೆ ಹಿಂದಿರುಗುವುದು ರೂಢಿ.ಪ್ರಸ್ತುತ ಈ ಕಾರ್ಯಕ್ರಮವು ಡೊಂಗರಕೇರಿ ಕಟ್ಟೆಯಲ್ಲಿ ನಡೆಯುತ್ತದೆ.ದಾರಿಯುದ್ದಕ್ಕೂ ಅಲ್ಲಲ್ಲಿ ತಳಿರುತೋರಣಗಳನ್ನು ಕಟ್ಟಿ ಸಮಾಜದವರು ತಮ್ಮ ಮನೆಗಳ ಮುಂದೆ ಬಂದಾಗ ಆರತಿಗಳನ್ನು ಬೆಳಗಿ ಧನ್ನರಾಗುತ್ತಾರೆ.

ಸಪ್ತಮಿಯಂದು ದೇವರನ್ನು ಹೊಸತಾಗಿ ಮಾಡಿಸಿರುವ ಚಿನ್ನದ ಪಲ್ಲಕಿಯಲ್ಲಿ ಕೂರಿಸಿ ಮೊದಲು ದೇವಾಲಯದ ಪ್ರಾಂಗಣದಲ್ಲಿ ಆಮೇಲೆ ಹೊರಕ್ಕೆ, ಪಲ್ಲಕಿಯಲ್ಲಿ ಬಂದು ಸಂಜೆಯ ಇಳಿ ಬಿಸಿಲಿನಲ್ಲಿ ಸಹಸ್ರಾರು ಜನ ಸೇರಿರುವ ರಥಭೀಧಿಯ ಹಾಗೂ ಇತರ ಸುತ್ತಲಿನ ಬೀದಿಗಳಲ್ಲಿ ಸೇರಿರುವಜನಸ್ತೋಮದ ಮಧ್ಯೆ ಮೊದಲೇ ಸಾಲಂಕೃತವಾಗಿರುವ ದೊಡ್ಡ ತೇರಿನಲ್ಲಿ ದೇವರನ್ನು ಕೂರಿಸುವ ರಥಾರೋಹಣ ವೈಭವವನ್ನು ಕಂಡೇ ಸಂತೋಷಪಡಬೇಕು.ದೇವರು ರಥವನೇರಿದ ಬಳಿಕ ಸಮಾರಾಧನೆಯಲ್ಲಿ ಪ್ರಸಾದ ಸ್ವೀಕರಿಸುತ್ತಾರೆ.ಎಲ್ಲಾ ದಿನಗಳ ಸಮಾರಾಧನೆಯ ವೆಚ್ಚವನ್ನು ಸಮಾಜ ಹಿರಿಯ ವ್ಯಾಪಾರಿಗಳು ಹಾಗೂ ಇತರ ಗಣ್ಯರು ಸಾಮೂಹಿಕವಾಗಿ ವಂತಿಗೆಯನ್ನು ಕೊಟ್ಟು ನಿಭಾಯಿಸುತ್ತಾರೆ.

ಭೀಷ್ಮಾಷ್ಟಮಿಯಂದು ಅವಭೃತ(ಓಕುಳಿ)ದೊಂದಿಗೆ ರಥೋತ್ಸವದ ಜಾತ್ರೆ ಕೊನೆಗೊಳ್ಲುತ್ತದೆ. ಮಂಗಳೂರು ರಥೋತ್ಸವದ ಹಿರಿಮೆಯೆಂದರೆ ವರ್ಷದಿಂದ ವರ್ಷಕ್ಕೆ ಭಾಗವಹಿಸುವ ಸಾಮಾಜಿಕ ಸಂಖ್ಯೆ ಹೆಚ್ಚುತ್ತಾ ಇರುವುದು ಮತ್ತು ವೈಭವವು ಕೂಡ ಹೆಚ್ಚುತ್ತಾ ಇರುವುದು ಶ್ರೀ ವೆಂಕಟರಮಣ ಅನುಗ್ರಹದಿಂದ

ಗೌಡ ಸಾರಸ್ವತ ಸಮಾಜವು ಇನ್ನೂ ಹೆಚ್ಚಿನ ಅಭಿವೃದ್ಧಿ ಉನ್ನತಿಗಳನ್ನು ಗಳಿಸಿ ಈ ಉತ್ಸವವನ್ನು ಇನ್ನೂ ಹೆಚ್ಚಿನ ವೈಭವದಿಂದ ಆಚರಿಸುವಂತಾಗಲಿ ಎಂದು ಹಾರೈಕೆ.

ನಮ್ಮ ಆರಾಧ್ಯ ದೇವರು ಶ್ರೀ ವೆಂಕಟರಮಣ

ಅನಂತ ಕಲ್ಯಾಣ ಗುಣನಿಧಿಯೂ, ಅಚಿಂತ್ಯಾದ್ಭುತವಾದ ದೇಹವುಳ್ಳವನೂ, ಭಕ್ತರ ಸಕಲ ಅಭೀಷ್ಟವನ್ನು ಪೂರ್ಣ ಮಾಡುವ ವೆಂಕಟಾಚಲಾಧಿಶನೂ ಆದ ಶ್ರೀನಿವಾಸನನ್ನು ಅವನ ಅವತಾರ, ಕಲ್ಯಾಣ ಹಾಗೂ ಅವನ ಅದ್ಬುತ ಮಹಿಮೆಗಳನ್ನು ಭವಿಷ್ಯೋತ್ತರ ಪುರಾಣದಲ್ಲಿ ವರ್ಣಿಸಿದೆ.ಬ್ರಹ್ಮರುದ್ರಾದಿಗಳ ಪ್ರಾರ್ಥನೆಯಂತೆ ಭೃಗುಮುನಿಯಿಂದ ಪ್ರಾರ್ಥಿಸಲ್ಪಟ್ಟು ಕಲಿಯುಗ ವರದನಾದ ಶ್ರೀ ವೆಂಕಟನಾಥನು ವೆಂಕಟಾಚಲ ಪರ್ವತದ ಸ್ವಾಮಿ ಪುಷ್ಕರಿಣಿ ಸನಿಹದ ತಿಂತ್ರಿಣಿ ವೃಕ್ಷ ಮೂಲದ ಒಂದು ಪವಿತ್ರವಾದ ಹುತ್ತದಲ್ಲಿ, ಶ್ವೇತ ವರಾಹ ಕಲ್ಪದ ವೈವಸ್ವತ ಮನ್ವಂತರದ ಇಪ್ಪತ್ತೆಂನೇ ಕಲಿಯುಗದಲ್ಲಿ ಹತ್ತು ಸಾವಿರ ವರ್ಷಗಳ ತನಕ ದವ್ಯವಗ್ರಹರೂಪನಾಗಿ ಅಡಗಿದ್ದು ಉದ್ದೇಶವಾದ ಋಷಿಕನ್ಯೆಯಾದ ತ್ರೇತಾಯುಗದ ಶ್ರೀವೇದಾವತಿ ಎಂಬ ಲಕ್ಷ್ಮೀ ಸನ್ನಿಧಾನಯುಕ್ತಳಾದ ಪದ್ಮಾವತಿಯನ್ನು ವಿವಾಹವಾಗುವ ದಿವ್ಯಲೀಲೆಯನ್ನು ತೋರಿ ಲೋಕಕಲ್ಯಾಣವನ್ನುಂಟು ಮಾಡಿದನು.

ಇಂದಿಗೂ ಸಾಕ್ಷಾತ್ ಭೂವೈಕುಂಟವೆಂದು ಪ್ರಖ್ಯಾತವಾದ ವೆಂಕಟಾಚಲ ಪರ್ವತದಲ್ಲಿ ನೆಲೆನಿಂತು ಸಕಲ ಭಕ್ತಭೀಷ್ಟವನ್ನು ಪೂರ್ಣಗೊಳಿಸುವ ಶ್ರೀದೇವಿ ಭೂದೇವಿಯರಿಂದ ಯುಕ್ತನಾದ ಶ್ರೀ ವೆಂಕಟರಮಣನೇ ಗೌಡ ಸಾರಸ್ವತ ಮಾಧ್ವ ಬ್ರಾಹ್ಮಣ ವರ್ಗದವರಾದ ನಮ್ಮ ಆರಾಧ್ಯ ದೇವರು

ಸಾರಸ್ವತ-ಗೌಡ ಸಾರಸ್ವತ

ಸಾರಸ್ವತ-ಗೌಡ ಸಾರಸ್ವತ ಎಂಬ ಹೆಸರು ಪ್ರತ್ಯೇಕ ಪಂಗಡವಾಗಲೀ ಅಥವಾ ಒಳಭೇದಗಳಾಗಲೀ ಇಲ್ಲ.ಸಾರಸ್ವತ ಬ್ರಾಹ್ಮಣರು ಇಕ್ಷ್ವಾಕುವಿನ ಪುತ್ರನಾದ ಶ್ರಾವಸ್ಥಿಪುರದ ಸುತ್ತಮುತ್ತ ಬಂದು ನೆಲೆಸಿದ್ದರು.ಆ ಪ್ರದೇಶಕ್ಕೆ'ಗೌಡ'ಎಂದು ಹೆಸರು ಆ ಗೌಡ ದೇಶದಲ್ಲಿ ಬಂದು ನೆಲೆಸಿದ ಸಾರಸ್ವತರನ್ನು ಗೌಡ ಸಾರಸ್ವತರು ಎಂದು ದೇಶವಾಚಕವಾಗಿ ಕರೆದರು.ಹಾಗೇ ಸಾರಸ್ವತರು ದಕ್ಷಿಣಕ್ಕೆ ಬಂದ ಮೇಲೆ, ಅದರಲ್ಲೂ ಕೊಂಕಣ ದೇಶಕ್ಕೆ ಬಂದ ಮೇಲೆ ಆಯಾಯ ಊರುಗಳಿಂದ ಮತ್ತೆ ಕರೆಯಲ್ಪಟ್ಟರು.ಪೆಡ್ನೇಕಾರ, ಬಾರ್ದೇಸಕಾರ, ಭಾಲಾವಲೀಕಾರ ಮುಂತಾಗಿ ಸಾರಸ್ವತರನ್ನು ಹೆಸರಿಸುವುದು ಪ್ರಾರಂಭವಾಯಿತು.ಅದ್ವೈತ, ದ್ವೈತ ಮುಂತಾದ ಮತಗಳಿಂದಲೂ ಮತ್ತೆ ವಭಜಿಸಲ್ಲಟ್ಟರು.ಆದರೆ ಇವರೆಲ್ಲಾ ಸಾರಸ್ವತರೇ.

ಸಾರಸ್ವತರ ಮೂಲಪುರುಷ-ಭೃಗುಮುನಿ

ಬ್ರಹ್ಮನ ಮಾನಸಪುತ್ರನಾದ ಭೃಗುಮಹಿರ್ಷಿಯೆ ಸಾರಸ್ವತರ ಮೂಲಪುರುಷನು.ಭೃಗುಮುನಿಯ ಪುತ್ರನೇ ದಧೀಚಿ.ದಧೀಚಿಯ ಪುತ್ರನೇ ಸಾರಸ್ವತ ಮಹಾಮುನಿ.ಈ ಭೃಗು ವಂಶದಲ್ಲಿ ಪರಮಾತ್ಮನೇ ಪರಶುರಾಮ ಎಂಬ ಹೆಸರಿನಿಂದ ಜನಿಸಿದ.ಪರಶುರಾಮನಿಗೆ"ಭಾರ್ಗವ"ಎಂದೇ ಹೆಸರು.

ಆ ಪರಶುರಾಮರೇ ಮೊಟ್ಟಮೊದಲಿಗೆ ದಕ್ಷಿಣಕ್ಕೆ ಬಂದ ಸಾರಸ್ವತರು.ಅವರೇ ಗೌಡ ದೇಶದ ತ್ರಿಹೋತ್ರ ತೀರದಿಂದ ಸಾರಸ್ವತ ಬ್ರಾಹ್ಮಣರನ್ನು ತಂದು ಗೋಮಾಂತಕದಲ್ಲಿ ನೆಲೆಗೊಳಿಸಿದವರು ಎಂದು ಸ್ಕಂದ ಪುರಾಣದ ಸಹ್ಯಾದ್ರಿ ಖಂಡ ಹೇಳಿದೆ.ಸಾರಸ್ವತರ ಮೂಲಪುರುಷನಾದ ಭೃಗುವು ಭಗದ್ವಿಭೂತಿಯು.ಇದನ್ನು ಭಗವದ್ಗೀತೆಯ ಹತ್ತನೇ ಅಧ್ಯಾಯದ ಇಪ್ಪತ್ತೈದನೇ ಶ್ಲೋಕದಲ್ಲಿ 'ಮಹಷೀಣಾಂ ಭೃಗುರಹಂ'ಎಂದು ಪರಮಾತ್ಮನು ಹೇಳಿರುವನು.ಭವಿಷ್ಯೋತ್ತರ ಪುರಾಣದಂತೆ ಹರಿಸರ್ವೋತ್ತಮತ್ವವನ್ನು ಜಗತ್ತಿಗೆ ಸಾರಿದ ಮಹಾಮಹಿಮರೇ ಭೃಗು ಋಷಿಗಳು.ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರೆಂದನ್ನು ತಾನೇ ಪರೀಕ್ಷಿಸುವೆನೆಂದು ಭೃಗು ಋಷಿಗಳು ಆಯಾಯ ಲೋಕಕ್ಕೆ ಹೋಗಿ ಬ್ರಹ್ಮ-ಶಂಕರ-ಸರ್ವೋತ್ತಮರಲ್ಲವೆಂದು ನಿಶ್ಚಯಿಸಿ, ವಿಷ್ಣುಮಾಯೆ ಒಳಗಾಗಿ ವಿಷ್ಣುವನ್ನು ಎಚ್ಚರಿಸುವೆನೆಂದು ಅವನ ವೃಕ್ಷಸ್ಥಳವನ್ನು ಒದ್ದು ತಕ್ಷಣ ಸಕಲ ಲೋಕಗಮನ ಶಕ್ತಿಯನ್ನು ಕಳೆದುಕೊಂಡು, ಬಳಿಕ ಮಹಾವಿಷ್ಣುವನ್ನೇ ಶರಣುಹೋಗಿ ಅವನ ಅನುಗ್ರಹ ಸಂಪಾದಿಸಿ ಸಕಲ ಜಗವನ್ನು ನೀನೆ ಅವತರಿಸಿ ಉದ್ದರಿಸಬೇಕೆಂದು ಪ್ರಾಥನೆ ಮಾಡಿ ಭಗವಂತನ

ಶ್ರೀನಿವಾಸ ಅವತಾರಕ್ಕೆ ಕಾರಣರಾದರು.ಭೃಗು ಋಷಿಗಳ ಈ ಪ್ರಕರಣದಿಂದಲೇ ಮಹಲಕ್ಷ್ಮೀ ದೇವಿಯರು ಭಗವಂತನಲ್ಲಿ ಪ್ರೇಮಕಲಹಗೈದು ಕರವೀರಪುರಕ್ಕೆ ಬಂದು ನೆಲೆಸಿದಳು.ಬಳಿಕ ವೆಂಕಟಾಚಲ ಪರ್ವತದಲ್ಲಿ ಶ್ರೀನಿವಾಸ ಅವತಾರವಾಯಿತು.ಇದನ್ನು ಬಹುಸುಂದರವಾಗಿ ಭವಿಷ್ಯೋತ್ತರ ಪುರಾಣವು ವರ್ಣಿಸುತ್ತದೆ.

ಹೀಗೆ ಹರಿಸವೋತ್ತಮ ತತ್ವವು ತಮ್ಮ ಕುಲದ ಮೂಲಪುರುಷರಾದ ಭೃಗುಮುನಿಗಳಿಂದಲೇ ತಿಳಿದು ಸಾರಸ್ವತರು ಮುಂದೆ ಐತಿಹಾಸಿಕ ಕಾಲದಲ್ಲಿ ಶ್ರೀ ಮಧ್ವಾಚಾರ್ಯರು, ವಾಯು ಜಿವೋತ್ತಮತ್ವ, ಜೀವತರ ತಮ, ಜಗಸತ್ಯತ್ವ, ಪಂಚಭೇದ ಇವುಗಳನ್ನೋಳಗೊಂಡ ಶಾಸ್ರ್ತೀಯವಾದ ತತ್ತ್ವವಾದವನ್ನು ಒಪ್ಪಿ ಮಧ್ವಮತವನ್ನು ಸ್ವೀಕರಿಸಿದರು.

ಸಾರಸ್ವತರು ತಮ್ಮ ಕುಲದ ಮೂಲಪುರುಷನಾದ ಭೃಗುಮುನಿಯಿಂದ ಪ್ರಾರ್ಥಿತರಾಗಿ ಭೂಲೋಕದಲ್ಲಿ ಅವತರಿಸಿದ ಸಾಕ್ಷಾತ್ ಶ್ರೀಮನ್ನಾರಾಯಣನನ್ನೇ ಅಂದರೆ ಶ್ರೀನಿವಾಸ ನಾಮಕ ವೆಂಕಟರಮಣನನ್ನೇ ಆರಾಧ್ಯ ದೈವವಾಗಿಸಿಕೋಡರು.

ತೌಳ ಮಾಧ್ವರಲ್ಲಿ ಶ್ರೀ ವೆಂಕಟರಮಣನೇ ಆರಾಧಕನಾಗಿ ಇಲ್ಲ.ಮಾತ್ರವಲ್ಲ ಶ್ರೀ ಮಧ್ವಾಚಾರ್ಯರು ತಮ್ಮ ಶಿಷ್ಯರಿಗೆ

ಶ್ರೀ ವೆಂಕಟರಮಣನನ್ನು ಆರಾಧ್ಯಪಟ್ಟದ ದೇವರಾಗಿ ಕೊಟ್ಟಪ್ರಮಾಣಗಳೂ ಇಲ್ಲ.ಈ ಕುರಿತು ಪರಂಪರಾನುಗತವಾಗಿ ಹೇಳಿಕೊಂಡು ಬಂದ ಒಂದು ಆಖ್ಯಾಯಿಕೆ ಇದೆ.

15ನೇ ಶತಮಾನದಲ್ಲಿ ವಿಜಯನಗರದಲ್ಲಿ ಶ್ರೀ ವಾಸತೀಥಧರಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದ ವಿಷ್ಣುತೀರ್ಥರೆಂಬ(ಇವರಿಗೆ ಗೋವಿಂದ ಒಡೆಯರೆಂದೂ ಹೇಳಬಹುದು)ಔತ್ತರೇಯ ಬ್ರಾಹ್ಮಣರೋರ್ವರಿಗೆ ಶ್ರೀ ವ್ಯಾಸತೀರ್ಥರೇ ಸನ್ಯಾಸವಿತ್ತು ಮೇಲಿನ ಹೆಸರಿಟ್ಟರು.ವಿಷ್ಣುತೀರ್ಥರು ಮಹಾಪ್ರತಿಭಾ ಸಂಪನ್ನರು.ತಿರುಪತಿಯಲ್ಲಿ ರಾಜಾ ಸಳವ ನರಸಿಂಹ ನಾಯಕನಿಗೂ ಅಲ್ಲಿಯ ಅರ್ಚಕರಿಗೂ ಉಂಟದ ವೈಮನಸ್ಸಿನಿಂದಾಗಿ ರಾಜನ ಆಗ್ರಹಕ್ಕೆ ಅಲ್ಲಿಯ ಅರ್ಚಕರೆಲ್ಲಾ ಬಲಿಯಾಗಿ ಪೂಜೆಯೇ ಬಿಟ್ಟು ಹೋಗಬೇಕಾದ ಪ್ರಮೇಯ ಬಂದಿತು, (ಅರ್ಚಕರ ಕುಲವನ್ನೇ ರಾಜ ಕೊಲೆ ಮಾಡಿಸಿದ)ಆಗ ರಾಜನ ಪ್ರಾರ್ಥನೆಯಂತೆ ತಿರುಪತಿ ಪೂಜೆ ಶ್ರೀ ವ್ಯಾಸತೀರ್ಥರು ವಹಿಸಿಕೊಳ್ಳಬೇಕಾಗಿ ಬಂದಾಗ ಅವರು ಶ್ರೀ ವಿಷ್ಣುತೀರ್ಥರನ್ನು ಅಲ್ಲಿಯ ಪೂಜೆಗೆ ನಿಯಮಿಸಿದರು.16 ವರ್ಷಗಳ ತನಕ ಶ್ರೀ ವಿಷ್ಣುತೀರ್ಥರು ಅಲ್ಲಿ ಪೂಜೆಗೈದು ಬಳಿಕ ಗುರುಗಳ ಆಜೆÐಯಂತೆ ಅಲ್ಲಿಯ ಅರ್ಚಕರ ಸಂತತಿಗೇ ಪೂಜೆ ಬಿಟ್ಟುಕೊಟ್ಟರು.ಆದರೆ ಅವರ ಚಿತ್ತ ಶ್ರೀನಿವಾಸನಲ್ಲಿ ನೆಟ್ಟಿರಲು ಆ ಮಂಗಳ ಮೂರ್ತಿಯನ್ನು ಅಗಲುವುದು ಅಸಾಧ್ಯವಾಯಿತು.ಹಾಗಯೇ ಅವರು ಪರ್ವತವಿಳಿದು ಬರುತ್ತಿರಲು ಅಲ್ಲಿ ಸ್ವಪ್ನದಲ್ಲಿ ಕಂಡಂತೆ ಒಂದು ಬಾವಿಯಲ್ಲಿ ಪಂಚಲೋಹದ ದಿವ್ಯ ವೆಂಕಟರಮಣ ಮೂರ್ತಿಯು ದೊರೆಕಿತು.ಆನಂದದಿಂದ ಶ್ರೀ ವಷ್ಣುತೀರ್ಥರು ಅದನೇ ಪೂಜಿಸುತ್ತಾ ದಕ್ಷಿಣ ಕೇರಳಕ್ಕೆ ಬಂದಾಗ ಔತ್ತರೇಯ ಗೌಡ ಸಾರಸ್ವತರಾದ ಈ ಯತಿಗಳನ್ನು ಕಂಡು "ಗೋಶ್ರೀ"ಯ ಅಂದರೆ ಕೊಚ್ಚಿಯ ಗೌಡ ಸಾರಸ್ವತ ಮಹಾಜನರು ಈ ದಿವ್ಯವಿಗ್ರಹವನ್ನು ತಮಗೆ ಆರಾಧನೆಗೆ ಕೊಡಬೇಕೆಂದು ಯಾಚಿಸಿ ಪಡೆದು ಅಲ್ಲಿ ಪ್ರತಿಷ್ಠೆಗೈದು ತಿರುಪತಿಯ ಸಕಲ ವೈಭವವನ್ನು ಮತ್ತೆ ಕೊಚ್ಚಿಯಲ್ಲಿ ಆ ದೇವರಿಗೆ ನಡೆಸಿದರು.ಈ ಕಥೆ ಈಗಲೂ ಕೊಚ್ಚಿಯ ಕೊಂಕಣಿ ಜಾನಪದ ಹಾಡಿನ ಮೂಲಕ ಹೇಳುತ್ತಾರೆ.

ಈ ವಿಷ್ಣುತೀರ್ಥರೇ ವ್ಯಾಸತೀರ್ಥರಿಂದ ಕುಂಭಕೋಣ ಮಠದಲ್ಲಿ ಶ್ರೀ ಸುರೀಂದ್ರ ತೀರ್ಥರಿಗೆ ಅವರ ಶಿಷ್ಯರಾಗಲು ಕಳುಹಿಸಲ್ಪಟ್ಟು ಶ್ರೀ ವಿಜಯೀಂದ್ರ ತೀರ್ಥರೆಂಬ ನಾಮದಿಂದ ಅಲ್ಲಿ ಧರ್ಮಪೀಠಾಧಿಕಾರಿಗಳಾದರು.ಕಾಲಾನಂತರದಲ್ಲಿ ವಿಜಯೀಂದ್ರರು ತಮ್ಮ ಗೌಡ ಸಾರಸ್ವತ ಶಿಷ್ಯರ ಕೇಳಿಕೆಯನ್ನು ಮನ್ನಿಸಿ ಗೌಡ ಸಾರಸ್ವತ ಸಮಾಜದ ಹನುಮಂತ ಭಟ್ಟನೆಂಬ ವಟುವಿಗೆ ಶ್ರೀ ಯಾದವೇಂದ್ರ ತೀರ್ಥರೆಂಬ ಅಭಿದಾನದಿಂದ ಕಾಶಿಕ್ಷೇತ್ರದ ಗಂಗಾತೀರದಲ್ಲಿರುವ ಸ್ವಮಠದಲ್ಲಿ ಸನ್ಯಾಸದೀಕ್ಷೆಯನ್ನಿತ್ತು ಹರಸಿದರು.

ಗೌಡ ಸಾರಸ್ವತರಾದ ನಮಗೆ ಮೂಲರಾದ ಭೃಗು ಋಷಿಗಳಿಂದಲೇ ಶ್ರೀನಿವಾಸನು ಪ್ರಿಯನಾದ.ಶ್ರೀ ವಿಷ್ಣುತೀರ್ಥರು ಬಹಳ ಕಾಲ ವೆಂಕಟರಮಣನನ್ನು ಆರಾಧಿಸುವುದರಿಂದ ಆ ಪರಂಪರೆಯ ಗೌಡ ಸಾರಸ್ವತ ಬ್ರಾಹ್ಮಣರ ವರ್ಗದ ನಮಗೆ ಶ್ರೀ ವೆಂಕಟರಮಣನೇ ಆರಾಧ್ಯ ದೇವರು ಎಂದು ತಿಳಿಯಲು ಯಾವ ಆತಂಕವೂ ಇಲ್ಲ.

ಮಂಗಳೂರು ಶ್ರೀ ವೆಂಕಟರಮಣ ದೇವಾಲಯದ ವೀರ ವೆಂಕಟೇಶ ಮೂರ್ತಿ

ಮಂಗಳೂರು ಶ್ರೀ ವೆಂಕಟರಮಣ ದೇವಾಲಯದಲ್ಲಿರುವ ಶ್ರೀ ವೀರ ವೆಂಕಟೇಶ ಮೂರ್ತಿಯು ವಿಜಯನಗರ ಕಾಲದ ಕಾಂಸ್ಯಶಿಲ್ಪದ ಉತ್ತಮ ಮಾದರಿಯಾಗಿದೆ. ಸುಮಾರು ಒಂದು ಹಸ್ತ (ಮೊಳ)ಎತ್ತರವಿರುವ ಈ ಮೂರ್ತಿ ಪೀಠ ಸಮೇತ ಸರಡು ಅಡಿಗಳಷ್ಟು ಎತ್ತರವಿದೆ.

ವೈಷ್ಣವ ಪ್ರತಿಮೆಗಳಿಗೆ ಸಾಮಾನ್ಯವಾಗಿ ಕಿರೀಟ ಮುಕುಟವಿರುವುದು ವಾಡಿಕೆ.ಈ ವೆಂಕಟರಮಣನು ಕೂಡ ರತ್ನಖಚಿತವಾದ ಕಿರೀಟ ಮುಕುಟವನ್ನು ಧರಿಸಿದ್ದಾನೆ.ವಿಶೇಷವೆಂದರೆ ಈ ಕಿರೀಟದ ಮೇಲೂ ಹಣೆಪಟ್ಟಿಯ ಮೇಲ್ಗಡೆ "ಬಾಸಿಂಗ"ವನ್ನು ಕಟ್ಟಿಕೊಂಡಿದ್ದಾನೆ. ಈಶ್ರೀನಿವಾಸ ಪದ್ಮವತಿಯನ್ನು ವರಿಸಲು ಹೊರಟವ.ದಾರಿಯಲ್ಲಿ ಬರಬಹುದಾದ ದುಷ್ಟರನ್ನು ನಿವಾರಿಸಲು ಸೊಂಟದಲ್ಲಿ ಕತ್ತಿಯನ್ನು ಧರಿಸುತ್ತಾನೆ.ಕಿವಿಯಲ್ಲಿ ಮಕರ ಕುಂಡಲಗಳು, ಕಿವಿಯ ಮೇಲ್ಭಾಗದಲ್ಲಿ ಅರಳುತ್ತಾ ಇರುವ ಹೂವಿನಂತಹ ಆಭರಣ, ಇದಕ್ಕೆ ಜೋತು ಹಾಕಿರುವ ಗೊಂಡೆಗಳು ವಿಜಯನಗರ ಶೈಲಿಯ ಪ್ರತೀಕಗಳಾಗಿವೆ.ಕುತ್ತಿಗೆಯಲ್ಲಿ ಕಂಠಿ ಒಂದು ದೊಡ್ಡ

ಪದಕವಿರುವ ಹಾರ ಭುಜಗಳಲ್ಲಿ ಸ್ಕಂದಮಾಲೆಗಳು, ಬಲಮೇಲ್ಗೈಯಲ್ಲಿ ಚಕ್ರ, ಎಡಮೇಲ್ಗೈಯಲ್ಲಿ ಶಂಖ, ಎಡಕೆಳಗೈಯಲ್ಲಿ ಕಟಿಹಸ್ತ(ಸೊಂಟದಲ್ಲಿ ನಿವೇಶಿತವಾಗಿರುವ)ಮತ್ತು ಬಲಕೆಳಗೈಯಲ್ಲಿ ವರದ(ನಾನ)ಮುದ್ರೆಯನ್ನು ಧರಿಸಿದ್ದಾನೆ. ಸೊಂಟದಲ್ಲಿ ಮೇಖಲೆ, ಕಟಿಬಂಧ, ಸಿಂಹ ಮುಖವಿರುವ ಮೇಖಲೆಯ ಕೊಂಡಿ, ತೋಳುಗಳಲ್ಲಿ ರತ್ನಖಚಿತ ಕೇಯೂರಗಳು ಮಣಿಗಂಟುಗಳಲ್ಲಿ ಅಂತಹವೇ ಕಂಕಣಗಳು, ಸೊಂಟದಿಂದ ಕಣಕಾಲಿನವರೆಗೆ ಉತ್ತರೀಯ, ಎರಡೂ ಪಾಶ್ವಗಳಲ್ಲಿ ಇಳಿಬಿಟ್ಟಿರುವ ಉತ್ತರೀಯ ಅಂಚುಗಳು, ಉತ್ತರೀಯದಲ್ಲಿ ವಿಜಯನಗರ ಶೈಲಿಯ ನೆರಿಗೆಗಳು, ಕಣಕಾಲಿನಲ್ಲಿ ಅಂದುಗೆ, ಪಾದಗಳ ಮೇಲ್ಗಡೆ ನೂಪುರಗಳು, ಕೈಬೆರಳು, ಕಾಲ್ಬೆರಳಲ್ಲಿ ಹೆಬ್ಬೆಟ್ಟುಗಳಿಗೆ ಉಂಗುರಗಳು ಹೀಗೆ ಈ ವೆಂಕಟೇಶನು ಸರ್ವಾಭರಣ ಭೂಷಿತನಾಗಿ ಮೆರೆಯುತ್ತಾನೆ.ಮದುಮಗನಾಗಿ ಹೊರಟಿದ್ದಾನೆ ತಾನೆ!

ಈ ಸುಂದರವಾದ ಮೂರ್ತಿಯನ್ನು ಊರಿಂದೂರಿಗೆ ತಿರುಗುತ್ತಿದ್ದ ಒಬ್ಬ ಸನ್ಯಾಸಿಯು ಸುಮಾರು ಇನ್ನೂರು ವರ್ಷಗಳ ಹಿಂದೆ ಮಂಗಳೂರಿನ ವೆಂಕಟರಮಣ ದೇವಸ್ಥಾನದ ಹೊರಗಡೆ ಇದ್ದ ಅಶ್ವತ್ಥಮರದ ಕೆಳಗೆ ಇಟ್ಟುಕೊಂಡು ಕುಳಿತಿದ್ದ.ಭಕ್ತರು ಹಾಕಿದ ಕಾಣಿಕೆಯನ್ನು ಸಂಗ್ರಹಿಸಿ ಮುಂದಿನ ಊರಿಗೆ ಹೊರಡುವವನಿದ್ದ.ರಥಬೀದಿಯಲ್ಲಿ ಈ ಮೂರ್ತಿಯನ್ನು ಕಂಡವರು ಅದನ್ನು ತಮ್ಮದೇ ದೇವಾಲಯಕ್ಕೋಸ್ಕರ ಕೊಡಬೇಕೆಂದೂ, ಅದಕ್ಕೆ ತಕ್ಕ ಪ್ರತಿಫಲವನ್ನು ಕೊಡುವುದಾಗಿ ಹೇಳಿದರೂ ಒಪ್ಪದ, ಅಲ್ಲಿಂದ ಈ ಮೂರ್ತಿಯನ್ನು ಹಿಡಿದುಕೊಂಡು ಕೆಳಗಿನ ರಥಬೀದಿಯ ಕಡೆಗೆ ಹೊದನೆಂದೂ, ಕೆಲವು ದಿನಗಳ ಬಳಿಕ ಮಂಗಳೂರು ಸಾಹುಕಾರ ತಿಮ್ಮ ಪೈಯವರ ಭಂಡಸಾಲೆಗೆ ಬಂದ ಈ ಸನ್ಯಾಸಿ ತನ್ನ ಬಳಿ ಇದ್ದ ಒಂದು ಬಟ್ಟೆಯಲ್ಲಿ ಕಟ್ಟಿದ ಮೂಟೆಯನ್ನು ಕೆಲವು ದಿನಗಳವರೆಗೆ ಪೈಯವರ ಭಂಡಸಾಲೆಯಲ್ಲಿ ನ್ಯಾಸವಾಗಿ ಇಟ್ಟುಕೊಳ್ಳಬೇಕೆಂದೂ ಇಂತಿಷ್ಟು ದಿನಗಳ ಬಳಿಕ ತಾನೂ ಇದನ್ನು ಮರಳಿ ಪಡೆಯುವನೆಂದು ಹೇಳಿ, ಒಂದು ವೇಳೆ ತಾನು ಹೇಳಿದ ವಾಯಿದೆಗೆ ಬರದೆ ಇದ್ದರೆ, ಈ ಮೂಟೆಯಲ್ಲಿರುವುದನ್ನು ತಮಗೆ ಉಚಿತ ಕಂಡಂತೆ ಬಳಸಬಹುದೆಂದೂ ಹೇಳಿ ಹೋದನಂತೆ.ವಾಯಿದೆ ಕಳೆದರೂ ಆತ ಬರಲಿಲ್ಲ.ಸಾಹುಕಾರ ಪೈಗಳಿಗೆ ತಮ್ಮ ವ್ಯಾಪಾರದ ಭರದಲ್ಲಿ ಈ ಮೂಟೆಯ ನೆನಪೂ ಆಗಲಿಲ್ಲ.ಒಂದು ದಿನ ಭಂಡಸಾಲೆಯಿಂದ ಹೊಗೆ ಬರುತ್ತಿದ್ದುದನ್ನು ಗಮನಿಸಿ, ಆ ಸನ್ಯಾಸಿಯು ಹೇಳಿದ್ದ ಮಾತುಗಳನ್ನು ನೆನಪಿಗೆ ತಂದುಕೊಡು ಆ ಮೂಟೆಯನ್ನು ಬಿಚ್ಚಿ ನೋಡುವಾಗ, ಈ ಸುಂದರವಾದ ಮೂಟೆಯನ್ನು ಕಂಡರಂತೆ.ಆಮೇಲೆ ಸಮಾಜದ ಗಣ್ಯರೊಡನೆ ಈ ಮೂರ್ತಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಾಗ, ಆ ಸಮಯದಲ್ಲಿ ಮಂಜೇಶ್ವರದಲ್ಲಿ ತಮ್ಮ ಕಾಶೀಮಠದಲ್ಲಿದ್ದು ಅದರ ದುರಸ್ತಿವೇಪಾಟುಗಳನ್ನು ಮಾಡಿಸುತ್ತಿದ್ದ ಮಠಾಧೀಶ ಶ್ರೀ ವಿಬುಧೇಂದ್ರ ಸ್ವಾಮಿಯವರಿಗೆ ಇದನ್ನು ತೋರಿಸಿ ಮಂದಿನ ಬಗೆಗೆ ಅವರಿಂದಲೇ ನಿರೂಪವನ್ನು ಪಡೆಯುವುದಾಗಿ ನಿರ್ಧರಿಸಿ ಈ ಮೂರ್ತಿಯನ್ನು ಸ್ವಾಮೀಜಿಯವರಲ್ಲಿಗೆ ಕೊಂಡೊಯ್ದರು, ಶ್ರೀ ವಿಬುಧೇಂದ್ರ ಸ್ವಾಮಿಯವರು ಈ ಶ್ರೀ ಮೂರ್ತಿಯನ್ನು ಕಂಡು ಬಹಳ ಸಂತೋಷಪಟ್ಟರು ಹಾಗೂ ಈ ಸರ್ವಾಂಗ ಸುಂದರವಾದ ಮೂರ್ತಿಯನ್ನು ಮಂಗಳೂರಿನ ಶ್ರೀ ವೆಂಕಟರಮಣ ದೇವಾಲಯದಲ್ಲಿಟ್ಟು ಪೂಜೆ ಮಾಡಿರೆಂದು ಸಮಾಜದವರಿಗೆ ನಿರೂಪವನ್ನು ಕೊಟ್ಟರು.ಹೀಗೆ ಈ ವೀರವೆಂಕಟೇಶನು ವೆಂಕಟ್ರಮಣ ದೇವಸ್ಥಾನದಲ್ಲಿ ಪೂಜೆಗೊಳ್ಳುತ್ತಾ ಇದ್ದಾನೆ.