ಕೊಡಗಿನವರ ಸಾಂಪ್ರದಾಯಿಕ ಸಂಭ್ರಮದ ಹಬ್ಬ ಕೈಲ್ ಮುಹೂರ್ತ

ಕೊಡಗಿನವರ ಸಾಂಪ್ರದಾಯಿಕ ಸಂಭ್ರಮದ ಹಬ್ಬ ಕೈಲ್ ಮುಹೂರ್ತ

B.M. Lavakumar   ¦    Sep 03, 2019 09:13:11 AM (IST)
ಕೊಡಗಿನವರ ಸಾಂಪ್ರದಾಯಿಕ ಸಂಭ್ರಮದ ಹಬ್ಬ ಕೈಲ್ ಮುಹೂರ್ತ

ಕೈಲ್‍ಮುಹೂರ್ತ ಇದು ಕೊಡಗಿನವರ ಪಾಲಿಗೆ ಮನರಂಜನೀಯ ಹಬ್ಬ. ಮಳೆಗಾಳಿಯಲ್ಲಿ ಕೆಲಸ ಮಾಡಿದವರು ಹೊಟ್ಟೆ ತುಂಬಾ ಉಂಡು... ಕಂಠಮಟ್ಟ ಕುಡಿದು... ಸಂಭ್ರಮಿಸುವ ಹಾಗೂ ಮೈದಾನಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಕ್ರೀಡಾ ಕೌಶಲ್ಯತೆಯನ್ನು ಪ್ರದರ್ಶಿಸುವ ಹಬ್ಬವೂ ಹೌದು. ಅಷ್ಟೇ ಅಲ್ಲ ಕೊಡಗಿನವರಿಗೆ ಇದೊಂದು ಆಯುಧಪೂಜೆ ಎಂದರೂ ತಪ್ಪಾಗಲ್ಲ.

ಹಾಗೆ ನೋಡಿದರೆ ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳೆಲ್ಲವೂ ಇತರೆಡೆಗಳಲ್ಲಿ ಆಚರಿಸುವ ಹಬ್ಬಗಳಿಗಿಂತ ಭಿನ್ನವಾಗಿ, ವೈಶಿಷ್ಟ್ಯಪೂರ್ಣವಾಗಿರುತ್ತದೆ. ಇಲ್ಲಿಯ ಹಬ್ಬಗಳ ಆಚರಣೆಯನ್ನು ಕೂಲಂಕುಷವಾಗಿ ಪರಿಶೀಲಿಸಿದರೆ ಪ್ರತಿಯೊಂದು ಹಬ್ಬವೂ ಭತ್ತದ ಕೃಷಿಗೆ ಅನುಗುಣವಾಗಿ ಆಚರಣೆಗೆ ಬಂದಿರುವುದು ಗೋಚರಿಸುತ್ತದೆ. ಜೊತೆಗೆ ಎಲ್ಲಾ ಹಬ್ಬಗಳ ಹಿಂದೆಯೂ ಶೂರತ್ವ, ಕ್ರೀಡೆಯ ಹಿನ್ನಲೆ, ಸಂಪ್ರದಾಯದ ಕಾಂತಿಯೊಂದಿಗೆ ಸಂಭ್ರಮ ಉಲ್ಲಾಸ ಎದ್ದು ಕಾಣುತ್ತಿರುತ್ತದೆ.

ಕೈಲ್‍ಮುಹೂರ್ತ ಹಬ್ಬವನ್ನು ಕೊಡವ ಭಾಷೆಯಲ್ಲಿ ಕೈಲ್‍ಪೊಳ್ದ್ ಎಂದು ಕರೆಯಲಾಗುತ್ತದೆ. ಕೈಲ್ ಎಂದರೆ ಆಯುಧ ಪೊಳ್ದ್ ಎಂದರೆ ಹಬ್ಬ ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ... "ಕೈಲ್‍ಮುಹೂರ್ತ" ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಕಿನಂದು ಅಂದರೆ ಪ್ರತಿವರ್ಷ ಸೆಪ್ಟಂಬರ್ 3ರಂದು ಆಚರಣೆ ನಡೆಯುತ್ತದೆ.

ಈ ಹಬ್ಬಕ್ಕೆ ತನ್ನದೇ ಆದ ಆಚರಣೆ ಹಾಗೂ ರೋಮಾಂಚನಕಾರಿ ಹಿನ್ನಲೆಯಿದೆ. ಗುಡ್ಡಕಾಡುಗಳಿಂದ ಕೂಡಿದ ಕೊಡಗಿನಲ್ಲಿ ಹಿಂದೆ ಭತ್ತದ ಕೃಷಿ ಹೊರತುಪಡಿಸಿದರೆ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯಿರಲಿಲ್ಲ. ಹೀಗಾಗಿ ಕೃಷಿಕರಿಗೆ ನಿರ್ದಿಷ್ಟ ಕೃಷಿ ಭೂಮಿಗಳಿರಲಿಲ್ಲ. ಅವರವರ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಈ ಸಂದರ್ಭ ಬೆಳೆಗಳನ್ನು ನಾಶ ಮಾಡಲು ಬರುವ ವನ್ಯ ಮೃಗಗಳೊಂದಿಗೆ ಹೋರಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಆಯುಧಗಳ ಅಗತ್ಯವಿತ್ತು. ಅಲ್ಲದೆ ಅದನ್ನು ಬಳಸಲು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತಿತ್ತು.

ಹಿಂದಿನ ಕಾಲದಲ್ಲಿ ಕೊಡಗಿನ ಜನ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಆಯುಧಗಳನ್ನು ಕೆಳಗಿಟ್ಟು ನೇಗಿಲು, ಗುದ್ದಲಿಗಳನ್ನು ಹಿಡಿದು ಗದ್ದೆಗಿಳಿದುಬಿಡುತ್ತಿದ್ದರು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗದ್ದೆ ಕೆಲಸ ಆರಂಭವಾದರೆ ಅದು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗುತ್ತಿತ್ತು. ಸುರಿಯುವ ಮಳೆಯಲ್ಲಿ ಗದ್ದೆ ಕೆಲಸ ಮಾಡುವುದೆಂದರೆ ಸುಲಭದ ಕೆಲಸವಾಗಿರಲಿಲ್ಲ. ಜೊತೆಗೆ ನಿರ್ಧಿಷ್ಟ ಸಮಯದಲ್ಲಿ ಮಾಡಿ ಮುಗಿಸಲೇ ಬೇಕಾಗಿದ್ದುದರಿಂದ ಬಿಡುವಿಲ್ಲದ ದುಡಿಮೆ ಅನಿವಾರ್ಯವಾಗಿತ್ತು.

ಹೀಗೆ ದುಡಿಮೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಮೇಲೇಳುತ್ತಿದ್ದದ್ದು ಕೈಲ್‍ಮುಹೂರ್ತ ಹಬ್ಬದ ಸಂದರ್ಭವೇ ಆಗಿತ್ತು. ಹಾಗಾಗಿ ಕೈಲ್‍ಮುಹೂರ್ತ ದುಡಿದ ಜೀವಗಳಿಗೆ ಸಂತಸವನ್ನೀಯುವ ಹಬ್ಬವಾಗಿ ಆಚರಣೆಯಾಗುತ್ತಾ ಬಂದಿದೆ.

ಹಬ್ಬದ ದಿನ ಮುಂಜಾನೆ ಮನೆಯ ಯಜಮಾನ ಸ್ನಾನ ಮಾಡಿ ಕುತ್ತರ್ಚಿ ಎಂಬ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಜೋಡಿಸಿ ಬಿಲ್ಲು ಬಾಣವನ್ನು ತಯಾರಿಸುತ್ತಾರೆ. ನಂತರ ಹಾಲು ಬರುವ ಮರಕ್ಕೆ ಚುಚ್ಚಿ ಬರುತ್ತಾರೆ. (ಇದನ್ನು ಕೊಡವ ಭಾಷೆಯಲ್ಲಿ “ಆಪ್‍ಪತರ್” ಎಂದು ಕರೆಯಲಾಗುತ್ತದೆ) ನಂತರ ಕೋವಿಯನ್ನು ದೇವರಕೋಣೆಯಲ್ಲಿಟ್ಟು ಇದಕ್ಕೆ ಕಾಡಿನಲ್ಲಿ ಸಿಗುವ ವಿಶೇಷ ಹೂವಾದ ಕೋವಿ ಹೂವನ್ನಿಟ್ಟು ತಳಿಯತಕ್ಕಿ ಬೊಳಕ್(ಅಕ್ಕಿ ತುಂಬಿದ ತಟ್ಟೆಯಲ್ಲಿಟ್ಟ ದೀಪ)ನ್ನು ಉರಿಸಿ ಇದರ ಸುತ್ತ ಕುಟುಂಬದ ಸದಸ್ಯರು ಸೇರುತ್ತಾರೆ. ಸಾಂಪ್ರದಾಯಿಕ ಉಡುಪಾದ ಕುಪ್ಪಚೇಲೆಯನ್ನು ಧರಿಸಿ ಹಿರಿಯರನ್ನು ಸೇರಿಸಿ ಅಕ್ಕಿ ಹಾಕಿ ಕುಟುಂಬವನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ. ಇದೇ ಸಂದರ್ಭ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಹಾಗೂ ಮದ್ಯವನ್ನು ಗುರುಕಾರಣರಿಗೆ ಇಟ್ಟು ಬೇಡಿಕೊಳ್ಳುತ್ತಾರೆ. ಅಲ್ಲದೆ ದೇವರ ಕೋಣೆಯಲ್ಲಿ ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.

ಹಿಂದಿನ ಕಾಲದಲ್ಲಿ ಹಬ್ಬದ ದಿನ ದೇವರ ಕೋಣೆಯಲ್ಲಿಟ್ಟ ಕೋವಿಯನ್ನು ಪೂಜೆಯ ಬಳಿಕ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸದೊಂದಿಗೆ ಮನೆಗೆ ಬರುತ್ತಿದ್ದರು.

ಇಂದು ಎಲ್ಲವೂ ಬದಲಾಗಿದೆ ಆದರೆ ಸಂಪ್ರದಾಯ ಉಳಿದುಕೊಂಡಿದ್ದರೂ ಬೇಟೆಯನ್ನು ನಿಷೇಧಿಸಿರುವುದರಿಂದ ಕೈಲ್‍ಮುಹೂರ್ತ ಹಬ್ಬದ ದಿನದಂದು ಊರ ಮೈದಾನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಿ ಅಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಪಾಲ್ಗೊಂಡು ತಮ್ಮ ಶೌರ್ಯ ಪ್ರದರ್ಶಿಸುತ್ತಾರೆ.

ಸಾಮಾನ್ಯವಾಗಿ ಕೈಲ್‍ಮುಹೂರ್ತ ಹಬ್ಬದಲ್ಲಿ ಹಂದಿ ಮಾಂಸ ಸಾರು(ಪಂದಿಕರಿ) ಹಾಗೂ ಕಡುಬು(ಕಡಂಬಿಟ್ಟು) ಪ್ರಧಾನ ಭಕ್ಷ್ಯವಾಗಿರುವುದರಿಂದ ಎಲ್ಲಿಲ್ಲದ ಬೇಡಿಕೆಯಿರುವುದನ್ನು ಕಾಣಬಹದು.

ಸಾಮಾನ್ಯವಾಗಿ ಕೈಲ್‍ಮುಹೂರ್ತ ಹಬ್ಬಕ್ಕೆ ಕೊಡಗಿನ ಮಂದಿ ದೂರದ ಯಾವುದೇ ಊರಿನಲ್ಲಿದ್ದರೂ ತಪ್ಪದೆ ಬರುತ್ತಾರೆ. ಕುಟುಂಬದ ಹಾಗೂ ಊರ ಜನರೊಂದಿಗೆ ಬೆರೆತು ಹಬ್ಬದ ಸಂತಸವನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಕೈಲ್‍ಮುಹೂರ್ತ ಪ್ರತಿ ಕುಟುಂಬ ಹಾಗೂ ಊರಿನಲ್ಲಿ ಆತ್ಮೀಯ ಸಂಬಂಧ ಬೆಸೆಯುವ ಹಾಗೂ ಎಲ್ಲರೂ ಸಂಭ್ರಮ ಪಡುವ ಹಬ್ಬವಾಗಿದೆ.