ಕೊರೋನಾ ಕಾಲಘಟ್ಟದಲ್ಲಿ ಮನುಷ್ಯತ್ವವೇ ಮದ್ದು

ಕೊರೋನಾ ಕಾಲಘಟ್ಟದಲ್ಲಿ ಮನುಷ್ಯತ್ವವೇ ಮದ್ದು

Anto Kriston   ¦    Oct 10, 2020 02:01:45 PM (IST)
ಕೊರೋನಾ ಕಾಲಘಟ್ಟದಲ್ಲಿ ಮನುಷ್ಯತ್ವವೇ ಮದ್ದು

ಕಾಲವನ್ನು ಕ್ರಿ.ಪೂ. ಕ್ರಿ.ಶ. ಎಂದು ವಿಂಗಡನೆ ಮಾಡುವಂತೆ, ಈ 21ನೇ ಶತಮಾನವನ್ನೂ ಕೊರೋನಾ ಪೂರ್ವ ಮತ್ತು ಕೊರೋನಾ ಬಳಿಕ ಎಂದು ವಿಂಗಡಿಸಬಹುದು. ಯಾಕೆಂದರೆ ಕೊರೋನಾದಿಂದಾಗಿ ನಂಬಿಕೆ, ಅಭ್ಯಾಸ, ಯೋಚನೆ, ದೃಷ್ಟಿ, ಮಾನವೀಯತೆ ಎಲ್ಲವೂ ಅದಲು ಬದಲಾಗಿದೆ. ಸಂಬಂಧಗಳ ಬೆಲೆ, ದೈವ ಭಕ್ತಿ, ಸಮುದಾಯದ ಪ್ರಾಮುಖ್ಯತೆ ಎಲ್ಲದರ ಅರಿವೂ ಮೂಡುತ್ತಿದೆ.

ಆದರೆ ಇವುಗಳ ಜೊತೆ ಇನ್ನೂ ಕೆಲವು ಬದಲಾವಣೆಗಳು ಆಗಬೇಕಿದೆ. ಅವುಗಳು ಆದರೆ ಮಾತ್ರ ಬದಲಾವಣೆಗೆ ಒಂದರ್ಥ ಬರಲು ಸಾಧ್ಯ.

ಇತ್ತೀಚಿನ ದಿನಗಳಲ್ಲಿ ಯಾರಿಗೆ ಕೊರೋನಾ ಬರುತ್ತದೋ ಆ ವ್ಯಕ್ತಿಯನ್ನು ಮತ್ತು ಅವನ ಕುಟುಂಬಸ್ಥರನ್ನು  ಅಸ್ಪೃಶ್ಯರಂತೆ ನಡೆಸಿಕೊಳ್ಳುವುದು ಕಂಡು ಬರುತ್ತಿದೆ.  ಅಂಗಡಿಗೆ ಹೋದಾಗ ಸಾಮಾನಿನ ಕಟ್ಟುಗಳನ್ನು ದೂರದಿಂದ ಎಸೆಯುವುದು, ತರಕಾರಿ ಮಾರುವವನು ಆ ವ್ಯಕ್ತಿಯ ಮನೆಯ ಮುಂದೆ ಹೋಗುವುದಿಲ್ಲ ಎನ್ನುವುದು, ಅಕ್ಕ ಪಕ್ಕದ ಮನೆಯವರು ಆತ್ಮೀಯತೆಯನ್ನು ಮರೆತು ಬಿಡುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಾಗರೂಕರಾಗಿರಬೇಕು ನಿಜ ಆದರೆ ಮಾನವೀಯತೆಯನ್ನು ಮರೆಯಬೇಕಾಗಿಲ್ಲ.

ಇನ್ನೊಂದು ಕಡೆ ಸಿನೆಮಾ ತಾರೆಯರಿಗೆ ಕೊರೋನಾ ಬಂದಾಗ ಪ್ರತಿಕ್ರಿಯೆಗಳು ಬೇರೆಯೇ ತೆರನಾಗಿರುತ್ತವೆ. ಸೋಷಿಯಲ್ ಮೀಡಿಯಾಗಳಲ್ಲಿ ಅವರ ಫೋಟೋಗಳನ್ನು ಹಾಕಿಕೊಂಡು " Take care, We will pray for you" ಎಂದು ಬರೆದು ಅವರಿಗೆ ಕಾಳಜಿ ತೋರಿಸುವುದನ್ನು ಕಾಣುತ್ತೇವೆ.

ಧ್ರುವ ಸರ್ಜಾ, ಅಮಿತಾ ಬಚ್ಚನ್, ಐಶ್ವರ್ಯ ರೈ ಇವರಿಗೆಲ್ಲ ಕೊರೋನಾ ಬಂದಾಗ, ಅವರು ನೋಡದಿದ್ದರೂ ತಮ್ಮ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಅವರಿಗೆ ಕರುಣೆ ತೋರಿಸುತ್ತಾ, 'ಛೇ ಪಾಪ ' ಅನ್ನೋರೆಲ್ಲ ತಮಗೆ ಪರಿಚಯ ಇರುವವರಿಗೆ ಕೊರೋನಾ ಬಂದಾಗ ಒಂದು ಹಿಡಿ ಮಾನವೀಯತೆಯನ್ನು ತೋರಿಸಲು ಮರೆಯುತ್ತಾರೆ ಎನ್ನುವುದು ಬೇಸರದ ಸಂಗತಿ.

ಇವೆಲ್ಲಾ ಬದಲಾಗಬೇಕಿದೆ.  ಬೆಡ್ ನ ಬಗ್ಗೆ ಸುಳ್ಳು ಸಂಖ್ಯೆ ಹೇಳುವ ರಾಜಕಾರಣಿಗಳ ಮಾತು ಉಲ್ಟಾ ಆಗಿ ನಿಜ ಸಂಖ್ಯೆ ಹೇಳಬೇಕಿದೆ, ಸೋಂಕಿತರ ಮನೆಗೆ ಸರಿಯಾಗಿ ಹೋಗದೆ ಇರುವುದು ಉಲ್ಟಾ ಆಗಿ ಸರಿಯಾದ ಸಮಯಕ್ಕೆ ಹೋಗುವುದೂ ರೂಢಿಯಾಗಬೇಕಿದೆ. ಅಂತರದ ಜೊತೆ ಆತ್ಮೀಯತೆಯ ಬೆಸುಗೆಯಾಗಬೇಕಿದೆ.  ದೃಷ್ಟಿಕೋನ ಬದಲಾಗಬೇಕಿದೆ. ಆಗ ಮಾತ್ರ ಈ ಸಾವು ನೋವು ನಿಯಂತ್ರಣಕ್ಕೆ ಬರಬಹುದು.

ಯಾವುದು ಉಲ್ಟಾ ಆಗಬೇಕೋ ಅಥವಾ ಬದಲು ಆಗಬೇಕೋ, ಅವುಗಳು ಬದಲಾದರೆ ಎಲ್ಲವೂ ಸರಿಯಾಗುವುದು ಎಂದು ನನಗನಿಸಿದ್ದು.

ಆಂಟೋ ಕ್ರಿಸ್ಟನ್