ಏಸು ಕ್ರಿಸ್ತನ ಸಂದೇಶ ಪಾಲಿಸಿ.. ಅಶಾಂತಿ ತೊಡೆಯೋಣ..

ಏಸು ಕ್ರಿಸ್ತನ ಸಂದೇಶ ಪಾಲಿಸಿ.. ಅಶಾಂತಿ ತೊಡೆಯೋಣ..

LK   ¦    Dec 25, 2019 12:10:04 PM (IST)
ಏಸು ಕ್ರಿಸ್ತನ ಸಂದೇಶ ಪಾಲಿಸಿ.. ಅಶಾಂತಿ ತೊಡೆಯೋಣ..

‘ನಿಮಗೊಂದು ಹೊಸ ಅಜ್ಞೆಯನ್ನು ಕೊಡುತ್ತೇನೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ನಾನು ನಿಮ್ಮನ್ನು ಪ್ರೀತಿಸಿದಂತಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ, ನಿಮ್ಮ ಈ ಪ್ರೀತಿಯನ್ನು ಕಂಡು ನೀವು ನನ್ನ ಶಿಷ್ಯರೆಂದು ಜನರೆಲ್ಲ ಅರಿತುಕೊಳ್ಳಲಿ”.

ಏಸು ಕ್ರಿಸ್ತನ ಸಂದೇಶ ಇವತ್ತಿನ ಈ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ. ಇದೀಗ ಎಲ್ಲೆಡೆ ಹಲವು ಕಾರಣಗಳಿಗೆ ಅಶಾಂತಿ ಮೂಡಿದ್ದು, ಜನ ನೆಮ್ಮದಿಯಿಂದ ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಪ್ರತಿಯೊಬ್ಬರಿಗೂ ಶಾಂತಿಯ ಅಗತ್ಯತೆ ಎದ್ದು ಕಾಣುತ್ತಿದೆ.

ಕ್ರಿಸ್‍ಮಸ್‍ನ ಈ ದಿನದಂದು ಸಡಗರ ಸಂಭ್ರಮ ಮನೆ ಮನೆಗಳಲ್ಲೂ ಸಂತಸ -ಸಂಭ್ರಮದ ವಾತಾವರಣ ನಿರ್ಮಾಣ ಮಾಡಿಕೊಂಡು ವಾಸ್ತವದ ನೋವು ಗೊಂದಲಗಳೆಲ್ಲವ ಮರೆತು ನಕ್ಕು ನಲಿಯ ಬೇಕಾಗಿದೆ. ಆದರೆ ಅದೆಲ್ಲವೂ ಸಾಧ್ಯವಾಗಬೇಕಾದರೆ ಮನ, ಮನೆ ಮತ್ತು ಸುತ್ತಮುತ್ತಲ ಜಗತ್ತು ಶಾಂತಿಯುತವಾಗಿರಬೇಕಾಗಿದೆ.

 

ಹಾಗೆನೋಡಿದರೆ ಕ್ರಿಸ್‍ಮಸ್ ಪ್ರೀತಿ ಶಾಂತಿಯ ಸಂದೇಶ ಸಾರುವ ಜಾಗತಿಕ ಹಬ್ಬ. ಪ್ರೀತಿ ಸೌಹಾರ್ಧದಿಂದ ಪರಸ್ಪರ ಸ್ನೇಹ ಮನೋಭಾವದಿಂದ ಜೀವಿಸಿರೆಂದು ಜನರಿಗೆ ಕರೆಕೊಡುವ ಹಬ್ಬವೂ ಹೌದು ಇದನ್ನು ಎಲ್ಲರೂ ಅರಿತಾಗ ಮಾತ್ರ ಈಗ ನಾವು ಅನುಭವಿಸುತ್ತಿರುವ ಅಶಾಂತಿಯನ್ನು ತೊಡೆದು ಹಾಕಲು ಸಾಧ್ಯವಾಗುತ್ತದೆ.

ಕ್ರಿಸ್‍ಮಸ್ ಹಬ್ಬವನ್ನು ಆಚರಿಸಿದರೆ ಸಾಲದು ಅದರಿಂದ ನಮ್ಮ ಬಾಳಿಗೆ ಹೊಸ ಚೈತನ್ಯ ಬಂದು ನಮ್ಮ ಅಂತರಂಗವು ದೇವರ ಆಲಯವಾಗಬೇಕು, ತಮ್ಮ ಎದೆಯಾಳದಲ್ಲಿ ಕ್ರಿಸ್ತನ ಚೇತನವಿರಬೇಕು. ಪರರ ಪ್ರೀತಿಯಲ್ಲಿ ಕ್ರಿಸ್ತರಾಜನಾಗಿ ಬಂದಿದ್ದಾರೆ, ದೀಪವೆಲ್ಲಿ? ಕೂರಲು ಆಸನವೆಲ್ಲಿ? ಓ ನಾಚಿಕೆ ನಮ್ಮ ನೆರೆ - ಹೊರೆಯವರಲ್ಲಿ ಪ್ರೀತಿ, ಸಹಬಾಳ್ವೆ, ಏಕತೆ ಎಂಬ ಬೀಜವನ್ನು ಬಿತ್ತಿ ಎಲ್ಲೆಡೆ ಶಾಂತಿ ಮತ್ತು ಸೌಹಾರ್ಧ ಸ್ಥಾಪಿಸುವ ಕಾರ್ಯ ನಮ್ಮದಾಗಿರಬೇಕು. ಆಗ ಮಾತ್ರ ಪ್ರತಿರೂಪಿಗಳು ಎಂದು ಜಗತ್ತು ಅರಿತುಕೊಳ್ಳುವುದು. ಇಂಥ ನಂಬಿಕೆಯ ನಾಂದಿಯನ್ನು ಬೆಳಗಲು ನಾವು ಎಲ್ಲರೂ ಪಣ ತೊಡೋಣ ನಮ್ಮೆಲ್ಲರ ತನು – ಮನಗಳನ್ನು ಶಾಂತಿ ಸುಗಂಧದಿಂದ ಬೆಳಗಲಿ ಮತ್ತು ಒಂದು ನೂತನ ಚೇತನವಾಗಿರಲಿ.

ಮನುಕುಲದ ಪಾಪದ ಪರಿಹಾರಕ್ಕಾಗಿ ಈ ಧರೆಗೆ ಬಂದು ಜನಿಸಿ. ಮನುಜನಾಗಿ ಬಾಳಿದ ಏಸು ನಮ್ಮನ್ನು ರಕ್ಷಿಸಲು ಶಿಲುಬೆಯಲ್ಲಿ ಪ್ರಾಣ ತ್ಯಾಗ ಮಾಡಿ ಮೂರನೇ ದಿನ ನುಡಿದಂತೆ ಪುನರುತ್ಥಾನರಾಗಿ ಜೀವಂತವಾಗಿ ಎದ್ದು ಬಂದಿದ್ದು ಕಾಲದ ಸತ್ಯ. ನಮ್ಮೆಲ್ಲರಿಗೂ ಶಾಂತಿಯ ದಾರಿ ತೋರಿಸಲು ಧರೆಗೆ ಬಂದ ಬಾಲ ಯೇಸುವನ್ನು ನಮ್ಮ ಮನದೊಳಗೆ ಬರಮಾಡಿಕೊಂಡು ನಮ್ಮ ಮನೆ ಮನಗಳಲ್ಲ್ಲಿ ಶಾಂತಿ, ಪ್ರೀತಿ, ಕ್ಷಮೆ ಹಾಗೂ ಸೌಹಾರ್ಧತೆಯನ್ನು ಒಳಗೊಂಡ ಸದ್ಗುಣಭರಿತ ವ್ಯಕ್ತಿಗಳಾಗುವತ್ತ ಸಾಗಬೇಕಿದೆ. ಕ್ರಿಸ್ತನು ಹೇಳಿದಂತೆ ಪರಸ್ಪರ ಸೇವೆ, ಕ್ಷಮೆ, ಪ್ರೀತಿಯ ಮಾತುಗಳನ್ನು ನಮ್ಮ ಜೀವನದಲ್ಲಿ ಪಾಲಿಸುತ್ತಾ, ಪ್ರೀತಿಯ ಮೂಲಕ ಕ್ರಿಸ್ತನನ್ನು ಜಗಕ್ಕೆ ಸಾರುತ್ತಾ ಶಾಂತಿ, ನೆಮ್ಮದಿ, ಆನಂದ, ಆರೋಗ್ಯ ನೆಲೆಸುವಂತೆ ಬೇಡುತ್ತಾ ಭ್ರ್ರಷ್ಟಚಾರ, ಭಯೊತ್ಪಾದನೆ, ಅಶಾಂತಿ, ಲಂಚಗುಳಿತನ, ಜಾತೀಯತೆ ಅಳಿಸಿ ನೆಮ್ಮದಿಯ ಬದುಕಿನತ್ತ ಪ್ರತಿಯೊಬ್ಬರೂ ಸಾಗುವಂತಾಗಲಿ ಎಂದು ಬೇಡಿಕೊಳ್ಳೋಣ