ಕೊಡಗಿನ ಹಳ್ಳಿಗಟ್ಟಿನಲ್ಲಿ ನಡೆಯುವ ಬೇಡು ಹಬ್ಬವೇ ವಿಭಿನ್ನ...

ಕೊಡಗಿನ ಹಳ್ಳಿಗಟ್ಟಿನಲ್ಲಿ ನಡೆಯುವ ಬೇಡು ಹಬ್ಬವೇ ವಿಭಿನ್ನ...

B.M. Lavakumar   ¦    Apr 29, 2019 02:00:17 PM (IST)
ಕೊಡಗಿನ ಹಳ್ಳಿಗಟ್ಟಿನಲ್ಲಿ ನಡೆಯುವ ಬೇಡು ಹಬ್ಬವೇ ವಿಭಿನ್ನ...

ಕೊಡಗಿನಲ್ಲಿ ಬೇಸಿಗೆಯ ದಿನಗಳಲ್ಲಿ ಆಚರಿಸಲಾಗುವ ಬೇಡು ಹಬ್ಬ ವಿಭಿನ್ನ ಮತ್ತು ವಿಶಿಷ್ಟವಾಗಿ ಕಂಗೊಳಿಸುತ್ತದೆ. ಇಂತಹ ಹಬ್ಬವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎನ್ನಬಹುದು.

ಬೇಡು ಹಬ್ಬ ಮೊದಲಿಗೆ ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರಿನಲ್ಲಿ ಆರಂಭವಾಗುತ್ತದೆ. ಬಳಿಕ ಕೆಲವು ಗ್ರಾಮಗಳಲ್ಲಿ ನಡೆದು ಕೊನೆಗೆ ದಕ್ಷಿಣ ಕೊಡಗಿನ ದೇವರಪುರದಲ್ಲಿ ಅಂತ್ಯಗೊಳ್ಳುತ್ತದೆ. ಈ ನಡುವೆ ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟಿನಲ್ಲಿ ನಡೆಯುವ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಒಂದಷ್ಟು ಸಂಪ್ರದಾಯದೊಂದಿಗೆ ನಡೆದು ಎಲ್ಲರ ಗಮನ ಸೆಳೆಯುತ್ತದೆ.

ಇನ್ನು ಇಲ್ಲಿ ನಡೆಯುವ ಬೇಡು ಹಬ್ಬದ ಸಂಪ್ರದಾಯದಲ್ಲಿ ಅವಲಕ್ಕಿ ಪ್ರಸಾದ ಮತ್ತು ಕೆಸರು ಎರಚಾಟ ಪ್ರಮುಖವಾಗಿದ್ದು ಮೊದಲಿನಿಂದಲೂ ಮಹತ್ವ ಪಡೆದುಕೊಂಡು ಬಂದಿದೆ.

ಬೇರೆ ಕಡೆಗಳಿಗೆ ಹೋಲಿಸಿದರೆ ಈ ಹಬ್ಬದ ಆಚರಣೆಯೂ ವಿಚಿತ್ರವಾಗಿದೆ. ಹಬ್ಬದ ದಿನ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ ‘ಪೊಲವಂದೆರೆ’ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.  ನಂತರ ಊರಿನ ಮೂರು ನಿಗದಿತ ದೇವರ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೊಲವಪ್ಪಂಡ ಕೋಟದಲ್ಲಿ (ದೇವಸ್ಥಾನ) ಊರಿನ ಜನರು, ಹೆಂಗಸರು, ಮಕ್ಕಳು ಸೇರುತ್ತಾರೆ. ಇದಕ್ಕೆ ಮುಂಚೆ ಇಬ್ಬರು ಕೊಡವ ಪೂಜಾರಿಗಳು (ಒಬ್ಬರು ಚಮ್ಮಟೀರ ಹಾಗೂ ಮತ್ತೊಬ್ಬರು ಮೂಕಳೇರ) ಮೂಕಳೇರ ಬಲ್ಯಮನೆಯ ಹತ್ತಿರದ ದೇವರ ಕೆರೆಯಲ್ಲಿ ಸ್ನಾನ ಮಾಡಿ ವಿವಿಧ ವಿಧಿ ವಿಧಾನದೊಂದಿಗೆ ಭಂಡಾರ ಪೆಟ್ಟಿಗೆ ಶುದ್ಧಿಗೊಳಿಸಿ ನಂತರ ಕೆರೆಯ ಹತ್ತಿರದಲ್ಲಿ ಹೊಸ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಗೊಳಿಸಿ ಇದನ್ನು ಕುಟ್ಟಿ ಅವಲಕ್ಕಿಯನ್ನು ಮಾಡಿ ದೇವರಿಗೆ ನೈವೇದ್ಯ ತಯಾರು ಮಾಡುತ್ತಾರೆ.

ಈ ಇಬ್ಬರು ಪೂಜಾರಿಗಳು ಹಬ್ಬದ ದಿನದಂದು ಬೆಳಿಗ್ಗೆಯಿಂದಲೇ ನೀರು ಕೂಡ ಸೇವಿಸದೆ ಉಪವಾಸ ಮತ್ತು ಕಟ್ಟುನಿಟ್ಟಿನ ವ್ರತ ಮಾಡುತ್ತಾರೆ. ಬಳಿಕ ಪೊಲವಪ್ಪಂಡ ಕೋಟ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಭಕ್ತರಿಗೆ ಅವಲಕ್ಕಿಗೆ ಬಾಳೆ ಹಣ್ಣು ಸೇರಿಸಿ ಅವುಲ್ ಎಂಬ ಪ್ರಸಾದವನ್ನು ನೀಡುತ್ತಾರೆ.

ವಿಶೇಷ ಪೂಜೆಯ ನಂತರ ಸಂಜೆಯಾಗುತ್ತಿದ್ದಂತೆ ಜೋಡುಬೀಟಿಯಲ್ಲಿರುವ ಪ್ರಮುಖ ದೇವಾಲಯದಲ್ಲಿ ಒಂದಾದ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಪ್ರವೇಶಿಸುತ್ತಾರೆ (ಇಲ್ಲಿ ಹೆಂಗಸರಿಗೆ ಪ್ರವೇಶಿಸುವಂತಿಲ್ಲ) ಈ ಎಲ್ಲ್ಲ ದೇವಸ್ಥಾನಕ್ಕೂ ಬ್ರಾಹ್ಮಣರ ಪೂಜೆ ನಿಷೇಧವಾಗಿದೆ. ಈ ದೇವಸ್ಥಾನದ ಸುತ್ತ ಶುಚಿಗೊಳಿಸಿ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸಲಾಗುತ್ತದೆ. ಸಂಪ್ರದಾಯವನ್ನು ಮುರಿದರೆ ಹೆಜ್ಜೇನು ಕಡಿಯುತ್ತದೆ ಎಂಬ ಭಯವೂ ಇದೆ.

ವಿಶೇಷ ಪೂಜೆ ಬಳಿಕ ಇಲ್ಲಿ ಸಾವಿರಾರು ತೆಂಗಿನ ಕಾಯಿಯನ್ನು ಈಡು ಕಾಯಿ ರೂಪದಲ್ಲಿ ಭಕ್ತರು ಒಡೆದು ಹರಕೆ ತಿರಿಸಿಕೊಳ್ಳುತ್ತಾರೆ. ನಂತರ ಇಲ್ಲಿಂದ ಹೊರಟು ಸಮೀಪದ ನಿಗದಿತ ಜಾಗದಲ್ಲಿ ತೆಂಗಿನ ಕಾಯಿ, ಬಾಳೆಹಣ್ಣು ತಿನ್ನುವ ಮೂಲಕ ಪೂಜಾರಿಗಳು ಉಪವಾಸವನ್ನು ಅಂತ್ಯಗೊಳಿಸುತ್ತಾರೆ.

ಬಳಿಕ ಹೊರಟು ಮೂಕಳೇರ ಬಲ್ಯಮನೆಯಲ್ಲಿ ಸಾಮೂಹಿಕ ಭೋಜನ ಮಾಡಿ ನಂತರ ಚಮ್ಮಟೀರ ಬಲ್ಯಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ ಹಾಕಿ ಮನೆ ಮನೆಗೆ ತೆರಳಲಾಗುತ್ತದೆ. ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯ(ಹಿರಿ)ಮನೆಯಲ್ಲಿ ಈ ಕಳಿ(ಆಟ) ರಾತ್ರಿಯಿಡಿ ನಡೆಯುತ್ತದೆ. ನಂತರ ಅಲ್ಲಿನ ಅಂಬಲ(ಮೈದಾ)ದಲ್ಲಿ ಮುಂಜಾನೆ ಮನೆಕಳಿ ಮುಕ್ತಾಯವಾಗುತ್ತದೆ.

ಮಾರನೆಯ ದಿನದ ಮಧ್ಯಾಹ್ನದ ಮೇಲೆ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊಂದು ಕುದುರೆ ಹಾಗೂ ಮೊಗವನ್ನು ಶೃಂಗರಿಸಿ ಅದನ್ನು ಹೊತ್ತು ಊರಿನ ಪ್ರಮುಖ ದೇವಾಲಯವಾದ ಭದ್ರಕಾಳಿ ದೇವಸ್ಥಾನದ ಹತ್ತಿರದ ದೇವರ ಕೆರೆಯ ಸಮೀಪದ  ಅಂಬಲದಲ್ಲಿ ಸೇರಿ ಎರಡು ಕಡೆಯಿಂದ ತಲಾ ಒಂದೊಂದು ಕುದುರೆ (ಕೃತಕವಾಗಿ ತಯಾರಿಸಿದ್ದು) ಹಾಗೂ ಮೊಗ ಮುಖಾಮುಖಿ ಆಗುತ್ತಿದ್ದಂತೆ ಪರಸ್ಪರ ಊರಿನವರು ಆಲಂಗಿಸಿಕೊಂಡು ಸಂಪ್ರ್ರದಾಯಿಕ ವಾಲಗಕ್ಕೆ ಹೆಜ್ಜೆಹಾಕುತ್ತಾರೆ. ನಂತರ ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಹಿರಿಯರು ಕಿರಿಯರು ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಕೆಸರು ಎರಚಾಡಿ ಅಲಂಗಿಸಿಕೊಳ್ಳುತ್ತಾರೆ. ಇಲ್ಲಿ ಹೆಂಗಸರಿಗೆ ಹಾಗೂ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಪರ ಊರಿನವರಿಗೆ ಹಾಗೂ ನೆಂಟರಿಗೆ ಮುಕ್ತವಾಗಿ ಇಲ್ಲಿ ಕುಣಿಯಲು ಅವಕಾಶವಿದೆ. ಅಂತಹವರಿಗೆ ಒಂದೊಂದು ಬೆತ್ತದ ಕೋಲು ನೀಡಲಾಗುತ್ತದೆ. ಆ ಕೋಲು ಹಿಡಿದವರಿಗೆ ಕೆಸರು ಎರಚುವಂತಿಲ್ಲ, ಈ ಅಂಬಲದಲ್ಲಿ ಸುಮಾರು ಒಂದು ಘಂಟೆ ಕಾಲ ಪರಸ್ಪರ ಕೆಸರು ಎರಚಿ ಸಂಭ್ರಮಿಸುತ್ತಾರೆ. ಬಳಿಕ ಭದ್ರಕಾಳಿ ದೇವಸ್ಥಾನದಲ್ಲಿ ಸೇರಿ ಮೂರು ಸುತ್ತು ಬಂದು ಹರಕೆ, ಕಾಣಿಕೆ ಹಾಕುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.