ನಿಸರ್ಗದ ಸೋಜಿಗ ಬಿಸಿಲೆಘಾಟ್

ನಿಸರ್ಗದ ಸೋಜಿಗ ಬಿಸಿಲೆಘಾಟ್

LK   ¦    Jul 11, 2019 04:20:40 PM (IST)
ನಿಸರ್ಗದ ಸೋಜಿಗ ಬಿಸಿಲೆಘಾಟ್

ನಿಸರ್ಗದ ಚೆಲುವನ್ನೆಲ್ಲಾ ಮೈಮೇಲೆ ಎಳೆದುಕೊಂಡು ಪ್ರವಾಸಿಗರ ಮನತಣಿಸಲೆಂದೇ  ಸೃಷ್ಟಿಯಾಗಿರುವ ತಾಣವೇ ಬಿಸಿಲೆಘಾಟ್. ಅತ್ತ ದಕ್ಷಿಣ ಕನ್ನಡ, ಇತ್ತ ಕೊಡಗು. ನಡುವಿನ ಹಾಸನ ಜಿಲ್ಲೆಯ ನೆಲದಲ್ಲಿ ನೆಲೆ ನಿಂತಿದೆ ಬಿಸಿಲೆಘಾಟ್. ಕೊಡಗಿನ ಸೋಮವಾರಪೇಟೆ, ದಕ್ಷಿಣಕನ್ನಡದ ಕುಕ್ಕೆಸುಬ್ರಹ್ಮಣ್ಯ, ಹಾಸನದ ಸಕಲೇಶಪುರಕ್ಕೆ ಈ ತಾಣ ಸಮೀಪವಿರುವುದರಿಂದ ಈ ಸ್ಥಳಗಳಿಗೆ ಭೇಟಿ ನೀಡಿದ ಪ್ರವಾಸಿಗರಿಗೆ ಬಿಸಿಲೆಘಾಟ್ಗೆ ತೆರಳುವುದು ಕಷ್ಟವಾಗುವುದಿಲ್ಲ.

ಹಾಸನಕ್ಕೆ ತೆರಳುವ ಪ್ರವಾಸಿಗರು ಸಕಲೇಶಪುರಕ್ಕೆ  ತೆರಳಿದರೆ  ಅಲ್ಲಿಂದ 50 ಕಿ.ಮೀ. ದೂರ ಕ್ರಮಿಸಿದರೆ ಬಿಸಿಲೆಘಾಟ್ ತಲುಪಬಹುದು. ದಕ್ಷಿಣಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಅಲ್ಲಿಂದ ಸುಮಾರು 20 ಕಿ.ಮೀ.ಸಾಗಿದರೆ ಸಾಕು. ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರು ತಾಲೂಕು ಕೇಂದ್ರದಲ್ಲೊಂದಾದ ಸೋಮವಾರಪೇಟೆಗೆ ತೆರಳಿ  ಅಲ್ಲಿಂದ 40ಕಿ.ಮೀ. ದೂರವನ್ನು ಶಾಂತಳ್ಳಿ, ಕುಂದಳ್ಳಿ ರಸ್ತೆಯಲ್ಲಿ ವಣಗೂರು ಮೂಲಕ ಸಾಗಿದರೆ ಕೂಡುರಸ್ತೆ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ  ಎಡಕ್ಕೆ ತಿರುಗಿ ಮುಂದೆ ಸಾಗಿದರೆ  ಬಿಸಿಲೆಘಾಟ್ ಅನ್ನು ತಲುಪಬಹುದು.

ಕೊಡಗಿನ ಪ್ರೇಕ್ಷಣೀಯ ತಾಣಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಮೈಸೂರಿನಿಂದ ಕುಶಾಲನಗರ, ಸೋಮವಾರಪೇಟೆ, ಶಾಂತಳ್ಳಿ ಮೂಲಕ ಬಿಸಿಲೆಘಾಟ್ ತಲುಪಬಹುದು. ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೂ   ತೆರಳಬಹುದಾಗಿದೆ. ಬಿಸಿಲೆಘಾಟ್ ಮೂರು ಜಿಲ್ಲೆಗೆ ಹೊಂದಿಕೊಂಡಂತೆ ಇರುವುದರಿಂದ ಇಲ್ಲಿಗೆ ತೆರಳಲು ಪ್ರವಾಸಿಗರಿಗೆ ಅನುಕೂಲವಾಗಿದೆ. ಈ ತಾಣ ಪಶ್ಚಿಮ ಘಟ್ಟದ ಅರಣ್ಯದ ಸುಂದರ ನೋಟವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ. ಮಲೆನಾಡಿನಲ್ಲಿ ನೆಲೆನಿಂತಿರುವುದರಿಂದ ರಸ್ತೆಯ ಇಬ್ಭಾಗದಲ್ಲಿಯೂ  ಬೆಳೆದು ನಿಂತ ಹೆಮ್ಮರಗಳು, ಬೆಟ್ಟಗುಡ್ಡಗಳ ನಡುವಿನ ಅಂಕುಡೊಂಕಾದ ರಸ್ತೆಯಲ್ಲಿ ಸಾಗಬೇಕು. ಇದೊಂದು ರೀತಿಯ ರೋಮಾಂಚನಕಾರಿ ಅನುಭವ ಎಂದರೆ ತಪ್ಪಾಗಲಾರದು.

ಸೋಮವಾರಪೇಟೆ ಹಾಗೂ ಸಕಲೇಶಪುರದ ಕಡೆಯಿಂದ ಬರುವವರು ಕೂಡುರಸ್ತೆಯಿಂದ ಮುಂದಕ್ಕೆ ಹೋದರೆ ಎಡಭಾಗದಲ್ಲಿ ಪ್ರವೇಶ ದ್ವಾರ ಎದುರಾಗುತ್ತದೆ. ಪ್ರವೇಶದ್ವಾರವನ್ನು ಹೊಕ್ಕಿ ಮುನ್ನಡೆದರೆ  ನಿಸರ್ಗದ ರಮಣೀಯ ದೃಶ್ಯ ನಮ್ಮನ್ನು ಕುಣಿದು ಕುಪ್ಪಳಿಸುವಂತೆ ಮಾಡಿ ಬಿಡುತ್ತದೆ. ಗುಡ್ಡದ ಮೇಲಿನ ಕಡಿದಾದ ದಾರಿಯಲ್ಲಿ ಸಾಗುತ್ತಿದ್ದರೆ ಎಡಭಾಗದಲ್ಲಿ ಕಣ್ಣು ಹಾಯಿಸಿದುದ್ದಕ್ಕೂ ಕಾಣುವ ನೂರಾರು ಅಡಿಯ ಪ್ರಪಾತ ಎದೆ ಢವಢವ ಬಡಿದುಕೊಳ್ಳುವಂತೆ ಮಾಡುತ್ತದೆ. ಅರಣ್ಯ ಇಲಾಖೆಯ ಅಧೀನದಲ್ಲಿ ಈ ತಾಣವಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಚೆಲುವನ್ನು ವೀಕ್ಷಿಸಲೆಂದೇ ಎರಡಂತಸ್ತಿನ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಇಲ್ಲಿಂದ ನಿಂತು ನೋಡಿದರೆ ನಿಸರ್ಗದ ಚೆಲುವು ನಮ್ಮೆಲ್ಲಾ ಜಂಜಾಟವನ್ನು ಮರೆಸಿ ಮನದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿಬಿಡುತ್ತದೆ. ದೂರದಲ್ಲಿ ಸಾಲುಗಟ್ಟಿ ನಿಂತ ಹಾಸನ, ಕೊಡಗು, ದಕ್ಷಿಣಕನ್ನಡ ಜಿಲ್ಲೆಗಳಿಗೆ ಸೇರಿದ ಬೆಟ್ಟಗಳು ಮುಗಿಲನ್ನು ಚುಂಬಿಸುತ್ತಿವೆಯೇನೋ ಎಂಬಂತೆ ಗೋಚರವಾಗುತ್ತದೆ. ಬೆಟ್ಟ ಸಾಲುಗಳ ನಡುವೆ ಗಗನಚುಂಬಿಯಾಗಿ ಕಣ್ಮನ ಸೆಳೆಯುವ ಬೆಟ್ಟಗಳೆಂದರೆ, ಹಾಸನ ಜಿಲ್ಲೆಗೆ ಸೇರಿದ ಪಟ್ಟಬೆಟ್ಟ, ಇನ್ನಿಕಲ್ಲು ಬೆಟ್ಟ, ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ ಕುಮಾರ ಪರ್ವತ, ಕೊಡಗಿಗೆ ಸೇರಿದ ದೊಡ್ಡಬೆಟ್ಟ ಹಾಗೂ ಪುಷ್ಪಗಿರಿ ಪರ್ವತಗಳು ಗಮನಸೆಳೆಯುತ್ತವೆ.

ಈ ಬೆಟ್ಟಗಳ ಮೇಲೆ ಬೆಳೆದು ನಿಂತ ಹಸಿರು ಕಾನನಗಳು ಹಾಗೂ ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಗಿಡಮರಗಳು, ಹೆಬ್ಬಂಡೆಗಳ ಮೇಲಿಂದ ಧುಮುಕಿ ಹರಿಯುವ ನೀರು ಸುಯ್ಯೆಂದು ಬೀಸಿ ಬರುವ ಗಾಳಿ, ವನ್ಯ ಪ್ರಾಣಿಗಳ ಘೀಳಿಡುವ ಸದ್ದು, ಹಕ್ಕಿಗಳ ಚಿಲಿಪಿಲಿಯೊಂದಿಗೆ ನಿಸರ್ಗದ ಚೆಲುವನ್ನು ತಮ್ಮ ಮುಂದೆ ಪ್ರದರ್ಶಿಸುತ್ತದೆ.
ಅರಣ್ಯದ ನಡುವೆ ನಿರ್ಮಾಣವಾಗಿರುವ ತಾಣವಾದುದರಿಂದ ಇಲ್ಲಿ ನಿಗದಿತ ಸಮಯಗಳಲ್ಲಿ ಮಾತ್ರ ಪ್ರವೇಶಾವಕಾಶವಿದ್ದು, ರಾತ್ರಿ ವೇಳೆಯಲ್ಲಿ ಈ ಮಾರ್ಗಗಳಲ್ಲಿ ಸಂಚರಿಸುವುದು ಅಪಾಯ. ಆಹಾರ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಒಳ್ಳೆಯದು.