ಹೆದ್ಧಾರಿಯಲ್ಲಿ ನೆಲೆನಿಂತು ಕಾಪಾಡುವ ಅಗರ ನರಿಕಲ್ಲು ಮಾರಮ್ಮ

ಹೆದ್ಧಾರಿಯಲ್ಲಿ ನೆಲೆನಿಂತು ಕಾಪಾಡುವ ಅಗರ ನರಿಕಲ್ಲು ಮಾರಮ್ಮ

LK   ¦    Sep 05, 2020 08:25:10 PM (IST)
ಹೆದ್ಧಾರಿಯಲ್ಲಿ ನೆಲೆನಿಂತು ಕಾಪಾಡುವ ಅಗರ ನರಿಕಲ್ಲು ಮಾರಮ್ಮ

ಚಾಮರಾಜನಗರ: ಸಾಮಾನ್ಯವಾಗಿ ನಾವು ಸಾಗುವ ರಸ್ತೆ, ಹೆದ್ದಾರಿಗಳ ಅಂಚಿನಲ್ಲಿ ಗುಡಿ, ಗೋಪುರವಿಲ್ಲದ ದೇಗುಲಗಳು, ದೇವರ ಕಲ್ಲುಗಳು, ಅಲ್ಲಲ್ಲಿ ಕಂಡು ಬರುತ್ತಿವೆ. ಇವುಗಳಿಗೆ ಪೂಜಿಸಿ ಮುಂದೆ ಸಾಗುವ ದೃಶ್ಯಗಳನ್ನು ಕೂಡ ಅಲ್ಲಲ್ಲಿ ನಾವು ಕಾಣಬಹುದಾಗಿದೆ.

ರಸ್ತೆ ಬದಿಯಲ್ಲಿರುವ ಇಂತಹ ದೇಗುಲ ಹಾಗೂ ದೇವರ ಕಲ್ಲುಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ ಹೆದ್ದಾರಿ ನಡುವೆ ಇರುವ ಒಳಲು ಕಲ್ಲಿನಂತಿರುವ ಮಾರಮ್ಮನನ್ನು ಹೆಚ್ಚಿನವರು ನೋಡಿರಲಾರರು. ಅದುವೇ ಯಳಂದೂರು ಮಾರ್ಗವಾಗಿ ದಿಂಡಿಗಲ್ಲಿಗೆ ಸಂಪರ್ಕ ಕಲ್ಪಿಸುವ 209ರ ರಾಷ್ಟ್ರೀಯ ಹೆದ್ದಾರಿಯ ಅಗರ ಗ್ರಾಮದಲ್ಲಿರುವ ನಡುರಸ್ತೆ ನರಿಕಲ್ಲು ಮಾರಮ್ಮ.

ಈ ಮಾರಮ್ಮನನ್ನು ಇವತ್ತಿನಿಂದಲ್ಲ ಹಲವು ಶತಮಾನಗಳಿಂದ ಜನರು ಪೂಜಿಸಿಕೊಂಡು ಬಂದಿದ್ದು, ಇಷ್ಟಾರ್ಥ ನೆರವೇರಿಸುವ ಶಕ್ತಿದೇವತೆಯಾಗಿ ಭಕ್ತರ ಮನದಲ್ಲಿ ಉಳಿದಿದ್ದು, ಈ ಹೆದ್ದಾರಿಯಲ್ಲಿ ಸಾಗುವ ಬಹುತೇಕರು ದೇವಿಗೆ ನಮಿಸಿ ಮುಂದೆ ಸಾಗುತ್ತಾರೆ. 209ನೇ ಸಂಖ್ಯೆಯ ರಾಷ್ಟ್ರೀಯ ಹೆದ್ದಾರಿಯು, ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕವಯತ್ರಿ ಸಂಚಿಹೊನ್ನಮ್ಮನ ಹುಟ್ಟೂರಾದ ಯಳಂದೂರು ಮಾರ್ಗವಾಗಿ ದಿಂಡಿಗಲ್ಲಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಈ ಹೆದ್ದಾರಿಯು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಗರ ಗ್ರಾಮಕ್ಕಾಗಿ ಹಾದು ಹೋಗಿದ್ದು, ಹೆದ್ದಾರಿಯ ಮಧ್ಯಭಾಗದಲ್ಲಿಯೇ ನಡುರಸ್ತೆ ನರಿಕಲ್ಲು ಮಾರಮ್ಮ ನೆಲೆಸಿರುವುದು ವಿಶೇಷವಾಗಿದೆ.

ಇಷ್ಟಕ್ಕೂ ಇಲ್ಲಿ ಮಾರಮ್ಮ ನೆಲೆನಿಂತು ಭಕ್ತರಿಗೆ ದರ್ಶನ ನೀಡುತ್ತಿರುವುದು, ಕಲ್ಲು, ಮೂರ್ತಿ ಯಾವುದರ ರೂಪದಲ್ಲಿರದೆ, ಹೆದ್ದಾರಿ ಮಧ್ಯಭಾಗದಲ್ಲಿ ಮನುಷ್ಯನ ನಡುವಿನಷ್ಟು ಆಳದಲ್ಲಿ ಮಾರಮ್ಮ ನೆಲೆನಿಂತು ತನ್ನನ್ನು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾಳೆ. ನರಿಕಲ್ಲು ಮಾರಮ್ಮ ಕೇವಲ ಹೆದ್ದಾರಿಯಲ್ಲಿ ಸಾಗುವವರನ್ನು ಕಾಪಾಡುವುದು ಮಾತ್ರವಲ್ಲದೆ, ಮಂಡಿನೋವು ಮತ್ತು ಕಾಲುನೋವು ಕಾಣಿಸಿಕೊಂಡರೆ ಮಾರಮ್ಮನಿಗೆ ಹರಕೆಹೊತ್ತು ಪೂಜಿಸಿದರೆ ನೋವು ಮಾಯವಾಗುತ್ತದೆ ಎಂಬ ನಂಬಿಕೆಯೂ ಇದೆ.

ಬಹಳಷ್ಟು ಭಕ್ತರು ಕಾಲು ನೋವು ಮತ್ತು ಮಂಡಿ ನೋವು ಕಾಣಿಸಿಕೊಂಡರೆ ಈ ಮಾರಮ್ಮಳಿಗೆ ಉಪವಾಸವಿದ್ದು, ಶ್ರದ್ಧಾಭಕ್ತಿಗಳಿಂದ ಪೂಜೆಸಲ್ಲಿಸಿ ತಮಗೆ ನೋವಿರುವ ಭಾಗವನ್ನು ಆ ಮಾರಮ್ಮನ ಕಲ್ಲಿಗೆ ಸೋಕಿಸಿದರೆ ನಾಲ್ಕೈದು ದಿನಗಳಲ್ಲಿ ನೋವುಗಳು ಮಾಯವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.
ಅಗರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಡುವೆ ನರಿಕಲ್ಲು ಮಾರಮ್ಮ ನೆಲೆ ನಿಂತ ಕಥೆಯೂ ಕೂಡ ರೋಚಕವೇ. ಹಿರಿಯರು ಹೇಳುವ ಪ್ರಕಾರ ಈಗಿರುವ ನಡುರಸ್ತೆ ನರಿಕಲ್ಲು ಮಾರಮ್ಮ ನೆಲೆಸಿರುವ ಸ್ಥಳದಲ್ಲಿ ಹಿಂದೆ ದೊಡ್ಡ ಹೊಂಡ ನಿರ್ಮಾಣವಾಗಿತ್ತು, ಆದರೆ ದಿನಕಳೆದಂತೆ ಆಧುನಿಕತೆಯ ನಾಗರಿಕತೆ ಬೆಳೆದಂತೆಲ್ಲ ಜಿಲ್ಲಾ ರಸ್ತೆಯಾಗಿದ್ದ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಯಿತು. ಅದರಲ್ಲೂ 209ಕ್ಕೆ ಸೇರ್ಪಡೆಗೊಂಡ ನಂತರ ಹೆದ್ದಾರಿ ಇನ್ನಷ್ಟು ಅಭಿವೃದ್ಧಿಗೊಂಡಿತು.

ಸಣ್ಣದಾದ ನಡು ಆಳದಷ್ಟು ಗುಳಿನಂತರದ ಕಾಲದಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದ ಅನೇಕ ಗುಡಿಮಂದಿರಗಳನ್ನು ನೆಲಸಮಗೊಳಿಸಲಾಯಿತು. ಈ ವೇಳೆ ಇಲ್ಲಿದ್ದ ನರಿಕಲ್ಲು ಮಾರಮ್ಮಳಿಗೆ ಗುಡಿ ಇಲ್ಲದಿರುವುದರಿಂದ ಜತೆಗೆ ಶತಮಾನಗಳಿಂದ ರಸ್ತೆಯ ಮಧ್ಯಭಾಗದಲ್ಲಿಯೇ ಮಾರಮ್ಮ ನೆಲೆಸಿದ್ದರಿಂದ ಗುಂಡಿಯನ್ನು ಮುಚ್ಚುವ ಕಾರ್ಯವನ್ನು ಮಾಡದೆ ಬದಲಿಗೆ ಜನರ ಆಚಾರ ವಿಚಾರಗಳ ಸಂಪ್ರದಾಯಕ್ಕೆ ಮಾನ್ಯತೆ ನೀಡಿ ದೊಡ್ಡದಾದ ಹೊಂಡವನ್ನು ಕಿರಿದಾಗಿ ಅಂದರೆ ಒಂದು ಒನಕೆ ನುಗ್ಗುವಷ್ಟು ಸಣ್ಣದಾದ ನಡು ಆಳದಷ್ಟು ಗುಳಿಯನ್ನು ನಿರ್ಮಿಸಿ, ರಸ್ತೆಯಲ್ಲೇ ಒಂದು ನಾಮಫಲಕ ನೆಟ್ಟು ವಾಹನಗಳು ಈ ಮಾರಮ್ಮನ ಮೇಲೆ ಹರಿದು ಹೋದರೂ ಯಾವುದೇ ತೊಂದರೆಯಾಗದಂತೆ ಮಾಡುವ ಮೂಲಕ ಮಾರಮ್ಮ ಹೆದ್ದಾರಿ ನಡುವೆ ಉಳಿದು ಎಲ್ಲರನ್ನು ಸಲಹುತ್ತಾ ಬರುತ್ತಿದ್ದು, ಇಲ್ಲಿ ಇದುವರೆಗೆ ಯಾವುದೇ ಅವಘಡಗಳು ಸಂಭವಿಸಿಲ್ಲ ಎನ್ನುತ್ತಾರೆ ಸ್ಥಳೀಯರು.