ಕರಾವಳಿ ಹೃದಯ ಭಾಗದಲ್ಲಿ ಪತ್ತೆಯಾಯಿತು 35 ಪ್ರಭೇದದ ಪಕ್ಷಿಗಳು

ಕರಾವಳಿ ಹೃದಯ ಭಾಗದಲ್ಲಿ ಪತ್ತೆಯಾಯಿತು 35 ಪ್ರಭೇದದ ಪಕ್ಷಿಗಳು

Feb 25, 2020 12:17:30 PM (IST)
ಕರಾವಳಿ ಹೃದಯ ಭಾಗದಲ್ಲಿ ಪತ್ತೆಯಾಯಿತು 35 ಪ್ರಭೇದದ ಪಕ್ಷಿಗಳು

'ಕ್ಯಾಂಪಸ್ ಬರ್ಡ್ ಕೌಂಟ್ ' ಭಾರತದಾಧ್ಯಂತ ನಡೆಯುವ ಹಕ್ಕಿ ಗಣನೆ . 2015 ರಿಂದ ಬರ್ಡ್ ಕೌಂಟ್ ಇಂಡಿಯಾ ಸಂಸ್ಥೆಯ ವತಿಯಿಂದ ವರ್ಷಮ್ಪ್ರತಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ದೇಶದಲ್ಲಿನ ಸಂರಕ್ಷಿತ ಅರಣ್ಯಗಳ ಹೊರಗಿನ ಪಕ್ಷಿ ಸಂಕುಲದ ಬಗ್ಗೆ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ಈ ಭಾರಿ ದೇಶದಾಧ್ಯಂತ 252 ಕ್ಯಾಂಪಸ್ ಗಳು ಈ ಕೌಂಟ್ ನಲ್ಲಿ ಭಾಗವಹಿಸಿವೆ. ಸಂತ ಅಲೋಶಿಯಸ್ ಕ್ಯಾಂಪಸ್ ನಲ್ಲಿ ಎರಡನೇ ಬಾರಿಗೆ ಬರ್ಡ್ ಕೌಂಟ್ ಹಮ್ಮಿಕೊಳ್ಳಲಾಗಿದೆ. ಸಂತ ಅಲೋಶಿಯಸ್ ಕಾಲೇಜು, ಮಂಗಳೂರಿನ ಹೃದಯ ಭಾಗದಲ್ಲಿದ್ದು ಸುಮಾರು 37 ಎಕ್ಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಪ್ರಾಣಿಶಾಸ್ತ್ರ ವಿಭಾಗದಿಂದ ಬರ್ಡ್ ಕೌಂಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ಡಾ. ವಿನೀತ್ ಕುಮಾರ್ ಕೆ ಅಧ್ಯಕ್ಷತೆಯಲ್ಲಿ ಬರ್ಡ್ ಕೌಂಟ್ ನಡೆದಿದ್ದು, ವಿಭಾಗದ ಮುಖ್ಯಸ್ಥರಾದ ಡಾ. ಹೇಮಚಂದ್ರ ಹಾಗೂ ಇತರ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಕಾಲೇಜಿನ ವಿವಿಧ ಜೈವಿಕ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದ 45 ವಿದ್ಯಾರ್ಥಿಗಳು ಸಕ್ರಿಯವಾಗಿ ಬರ್ಡ್ ಕೌಂಟ್ ನಲ್ಲಿ ಭಾಗವಹಿಸಿದರು.

ಫೆಬ್ರವರಿ 14 ರಿಂದ 17 ರ ವರೆಗೆ ನಡೆದ ಹಕ್ಕಿ ಗಣನೆಯಲ್ಲಿ 35 ಪ್ರಭೇದದ ಹಕ್ಕಿಗಳನ್ನು ದಾಖಲಿಸಲಾಗಿದೆ. ಕಪ್ಪು ಗಿಡುಗ), ಬಿಳಿ ಗಿಡುಗ, ಪಾರಿವಾಳ, ಬೂದು ಬಾಲದ ಕಬ್ಬಕ್ಕಿ, ಕೋಗಿಲೆ ಹಾಗೂ ಕುಟ್ರು ಪಕ್ಷಿಗಳು ಕ್ಯಾಂಪಸ್ನಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣ ಸಿಗುವ ಹಕ್ಕಿಗಳಾಗಿವೆ. ವಲಸೆ ಹಕ್ಕಿಗಳಾದ ಬೂದು ಕಾಜಾಣ, ಬೂದು ಉಲಿಯಕ್ಕಿ, ಹಸಿರು ಉಲಿಯಕ್ಕಿ, ದೊಡ್ಡ ಕೊಕ್ಕಿನ ಎಲೆ ಉಲಿಯಕ್ಕಿ, ರಾಜಹಕ್ಕಿ ಹಾಗೂ ನೀಲಿ ಬಾಲದ ಜೇನ್ನೊಣ ಬಾಕಹಕ್ಕಿಗಳನ್ನು ಕ್ಯಾಂಪಸ್ ಬರ್ಡ್ ಕೌಂಟ್ ನಲ್ಲಿ ದಾಖಲಿಸಲಾಗಿದೆ.

ಅತ್ಯಂತ ಜನನಿಬಿಡ ನಗರ ಪ್ರದೇಶದಲ್ಲಿರುವ ಕಾಲೇಜಿನ ಆವರಣದಲ್ಲಿ ಇಷ್ಟೊಂದು ಪಕ್ಷಿ ವೈವಿದ್ಯತೆ ಕಾಣ ಸಿಗುವುದು ಕುತೂಹಲದ ವಿಷಯ. ಗಿಡ ಮರಗಳ ಸಂರಕ್ಷಣೆಯು ಪಕ್ಷಿಗಳ ಸಂತತಿಯ ಉಳಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿರುವ ಅಗಾಧ ಗಾತ್ರದ ಮರಗಳು ಪಕ್ಷಿಗಳ ವಿಶ್ರಾಂತಿಯ ತಾಣವಾಗಿದೆ , ಕ್ಯಾಂಪಸ್ ನಲ್ಲಿರುವ ವಿವಿಧ ಬಗೆಯ ಹೂ ಹಣ್ಣು ಬಿಡುವ ಮರಗಳು ಪಕ್ಷಿಗಳ ಆಹಾರದ ಕೇಂದ್ರವಾಗಿದೆ. ಹೂವಿನ ಮಕರಂದವನ್ನು ಹೀರಲು ಹಾಗೂ ಹಣ್ಣುಗಳ ಆಪೋಷಣೆಗೆ ಬರುವ ಕೀಟಗಳನ್ನು ಸಹ ಈ ಪಕ್ಷಿಗಳು ಭಕ್ಷಿಸುತ್ತವೆ. ಕ್ಯಾಂಪಸ್ ನ ಕಟ್ಟಡಗಳ ಮೇಲೆ ನೂರಾರು ಸಂಖ್ಯೆಯಲ್ಲಿ ಕಪ್ಪು ಗಿಡುಗಗಳು ಕುಳಿತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಕೋಗಿಲೆ ಹಾಗೂ ಕುಟ್ತ್ರಕ್ಕಿಗಳಕಲರವ ಕ್ಯಾಂಪಸ್ ನ ಉದ್ದಗಲಕ್ಕೂ ಕೇಳಿ ಬರುತ್ತದೆ. ಬೂದು ಬಾಲದ ಕಬ್ಬಕ್ಕಿಗಳು ನೂರಾರು ಸಂಖ್ಯೆಯಲ್ಲಿ ಹಾರುವ ದ್ರಶ್ಯ ಕಣ್ಮನಗಳಿಗೆ ಮುಧ ನೀಡುತ್ತದೆ.

ಈ ರೀತಿಯ ಪಕ್ಷಿ ಗಣತಿಯು ವರ್ಷಮ್ಪ್ರತಿ ನಡೆದಲ್ಲಿ ಪಕ್ಷಿಗಳ ಸಂತತಿಯ ಬದಲಾವಣೆಗಳ ನೈಜ ಚಿತ್ರಣ ದೊರಕುವುದು. ಪಕ್ಷಿ ವೀಕ್ಷಣೆಯು ನಮ್ಮ ವಿರಾಮದ ಸಮಯದಲ್ಲಿ ಮಾಡಬಹುದಾದಂತಹ ಹವ್ಯಾಸ, ಈ ಹವ್ಯಾಸವನ್ನು ಪ್ರಾಯ , ಲಿಂಗ , ಪ್ರದೇಶದ ಮಿತಿಯಿಲ್ಲದೆ ಯಾರು ಬೇಕಾದರೂ ಮಾಡಬಹುದು. ಪಕ್ಷಿ ವೀಕ್ಷಣೆಯು ಮನಸ್ಸಿಗೆ ಅಗಾದವಾದ ಮುಧ ನೀಡುವಂತಹ ಹವ್ಯಾಸ, ಆಸಕ್ತಿಯಿಂದ ಸತತವಾಗಿ ಪಕ್ಷಿ ವೀಕ್ಷಣೆ ಮಾಡುವುದರಿಂದ ಈ ಹವ್ಯಾಸವು ಜೀವನದ ಒಂದು ಅವಿಭಾಜ್ಯ ಅಂಗವಾಗುತ್ತದೆ.
ಕಳೆದ ಬಾರಿ 38 ಪ್ರಭೇದದ ಪಕ್ಷಿಗಳು ದಾಖಲಾಗಿದ್ದವು.